ಕಾರ್ಪೊರೇಟ್ ಕೆಲಸ ಬಿಟ್ಟು ಕೃಷಿಗಿಳಿದ MBA ಪದವೀಧರರು: 4ರೂ ಪಪ್ಪಾಯಿಯಿಂದ 800 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಬ್ರದರ್ಸ್

ಬೆಂಗಳೂರು: ಹಳ್ಳಿಯ ಯುವಕರು ಕೃಷಿ ಸಾಕು ಎಂದು ಉದ್ಯೋಗವನ್ನರಸಿ ಬೆಂಗಳೂರಿನಂತಹ ಮಹಾ ನಗರಗಳಿಗೆ ವಲಸೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಆದರೆ, ಒಂದು ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ ಬಿಟ್ಟು, ತಮ್ಮ ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ಸಾಧನೆ ಮಾಡಿದ ಇಬ್ಬರು ಎಂಬಿಎ ಪದವೀಧರರ ಯಶೋಗಾಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದೆ.

ಆರಂಭದಲ್ಲಿ ಪ್ರತಿ ಕೆಜಿ ಪಪ್ಪಾಯಿಗೆ ಕೇವಲ 4 ರೂಪಾಯಿಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದ ಈ ಸಹೋದರರು, ಇಂದು ಬರೋಬ್ಬರಿ 800 ಕೋಟಿ ರೂಪಾಯಿ ಮೌಲ್ಯದ ಕೃಷಿ ಉದ್ಯಮವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಕುರಿತು ನಳಿನಿ ಉನಗರ್ ಎಂಬುವವರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟನ ಸಂಪೂರ್ಣ ವಿವರ ಇಲ್ಲಿದೆ.

Papaya

ಉನ್ನತ ವ್ಯಾಸಂಗ ಮುಗಿಸಿ, ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಸಹೋದರರಿಗೆ ಕೃಷಿ ಮಾಡುವ ಕನಸು ಮೊದಲಿನಿಂದಲೂ ಇತ್ತು. ಹೀಗಾಗಿ ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿ ಹಳ್ಳಿಗೆ ಮರಳಿದರು. ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು ಹಳ್ಳಿಗೆ ಬಂದ ಇವರನ್ನ ನೋಡಿ ಊರಿನ ಜನರೆಲ್ಲರೂ ನಕ್ಕಿದ್ದರು.

ಆದರೆ, ಜನರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಇವರು, ತಾವು ಉಳಿತಾಯ ಮಾಡಿದ್ದ ಸುಮಾರು 8 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಸಂಪೂರ್ಣ ಸಾವಯವ ಕೃಷಿ ಆರಂಭಿಸಿದರು.

ಸತತ ಮೂರು ವರ್ಷಗಳ ಕಾಲ ಹಗಲಿರುಳು ಕಷ್ಟಪಟ್ಟು ಬೆವರು ಹರಿಸಿದ ಬಳಿಕ, ಅವರ ಮೊದಲ ಪಪ್ಪಾಯಿ ಬೆಳೆ ಕಟಾವಿಗೆ ಸಿದ್ಧವಾಯಿತು. ಉತ್ಸಾಹದಿಂದ ಇಡೀ ಟ್ರಕ್ ತುಂಬಾ ಪಪ್ಪಾಯಿ ತುಂಬಿಕೊಂಡು ಮಾರುಕಟ್ಟೆಗೆ ಹೋದ ಅವರಿಗೆ ಕಾದಿದ್ದು ಭಾರಿ ಆಘಾತ. ದಲ್ಲಾಳಿಗಳು ಪ್ರತಿ ಕೆಜಿ ಪಪ್ಪಾಯಿಗೆ ಕೇವಲ 4 ರೂಪಾಯಿ ನಿಗದಿ ಮಾಡಿದರು. ಇಡೀ ಟ್ರಕ್ ಪಪ್ಪಾಯಿ ಮಾರಾಟ ಮಾಡಿದರೂ ಅವರಿಗೆ ಸಿಕ್ಕಿದ್ದು ಕೇವಲ 10,000 ರೂಪಾಯಿ ಮಾತ್ರ. ಅಲ್ಲಿಗೆ ಅವರ ಬಳಿ ಇದ್ದ ಉಳಿತಾಯದ ಹಣವೆಲ್ಲ ಬಹುತೇಕ ಖಾಲಿಯಾಗಿತ್ತು.

ಸೋಲೊಪ್ಪದ ಸಹೋದರರು

ಕೃಷಿಯಲ್ಲಿ ಉಂಟಾದ ಈ ಹಿನ್ನಡೆಯಿಂದ ಅವರು ಒಂದು ಚೂರು ಹಿಂಜರಿಯಲಿಲ್ಲ. ಕೇವಲ ಹಸಿ ತಾಜಾ ಹಣ್ಣು ಅಥವಾ ತರಕಾರಿಗಳನ್ನ ಮಾತ್ರ ಮಾರಾಟ ಮಾಡುವುದರಿಂದ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದನ್ನ ಅವರು ಅರಿತುಕೊಂಡರು. ಹೀಗಾಗಿ ಬೇಗ ಹಾಳಾಗದ ಹಾಗೂ ದೀರ್ಘಕಾಲದವರೆಗೆ ಬಳಸಬಹುದಾದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಮುಂದಾದರು. ಮುಖ್ಯವಾಗಿ ದೇಸಿ ಹಸುವಿನ ಶುದ್ಧ ತುಪ್ಪ ಮತ್ತು ಸಾವಯವ ಬೆಲ್ಲವನ್ನು ತಯಾರಿಸಲು ಆರಂಭಿಸಿದರು.

ಮುಂಬೈ ಬೀದಿಗಳಲ್ಲಿ ಮಾರಾಟ

ತಮ್ಮ ಉತ್ಪನ್ನಗಳನ್ನ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ, ಪ್ರತಿ ವೀಕೆಂಡ್‌ನಲ್ಲಿ ಸುಮಾರು 350 ಕಿಲೋಮೀಟರ್ ದೂರದ ಮುಂಬೈಗೆ ಪ್ರಯಾಣ ಬೆಳೆಸಿದರು. ಮುಂಬೈನ ಬೀದಿಗಳಲ್ಲಿ ಇಡೀ ದಿನ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿ, ಮತ್ತೆ ವಾಪಸ್ ತಮ್ಮ ಜಮೀನಿಗೆ ಮರಳುತ್ತಿದ್ದರು.

ಇವರ ಶುದ್ಧ ಹಾಗೂ ಗುಣಮಟ್ಟದ ಸಾವಯವ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕ್ರಮೇಣ ಬಾಯಿಂದ ಬಾಯಿಗೆ ಪ್ರಚಾರವಾಗಿ, ಇಡೀ ದೇಶದ ಮೂಲೆ ಮೂಲೆಗಳಿಂದ ಆರ್ಡರ್‌ಗಳು ಬರಲಾರಂಭಿಸಿದವು.

ಇಂದು ₹800 ಕೋಟಿ ಸಾಮ್ರಾಜ್ಯ

ತಮ್ಮ ಸತತ ಪರಿಶ್ರಮ ಹಾಗೂ ಸರಿಯಾದ ವ್ಯಾಪಾರ ತಂತ್ರಗಾರಿಕೆಯಿಂದಾಗಿ, ಇಂದು ಈ ಸಹೋದರರ ವ್ಯವಹಾರ ದೊಡ್ಡದಾಗಿ ಬೆಳೆದಿದೆ. ಪ್ರಸ್ತುತ ಅವರು 60,000 ಚದರ ಅಡಿಯ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಸುಮಾರು 700ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಒಂದು ಕಾಲದಲ್ಲಿ ಪ್ರತಿ ಕೆಜಿಗೆ 4 ರೂಪಾಯಿಯಂತೆ ಪಪ್ಪಾಯಿ ಮಾರಿದ್ದ ಇವರು, ಇಂದು 800 ಕೋಟಿ ರೂಪಾಯಿ ಮೌಲ್ಯದ ಬೃಹತ್ ವ್ಯವಹಾರವನ್ನ ಕಟ್ಟುವ ಮೂಲಕ, ಕೃಷಿಯನ್ನ ಲಾಭದಾಯಕವಾಗಿ ಮಾಡುವುದು ಹೇಗೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+