ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದನಾ ದಾಳಿ; 3 ದಿನಗಳಲ್ಲಿ 4ನೇ ಎನ್‌ಕೌಂಟರ್
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ಹೊಸ ಎನ್‌ಕೌಂಟರ್ ನಡೆದಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ನಾಲ್ಕನೇ ಎನ್‌ಕೌಂಟರ್ ಆಗಿದೆ. ಮಂಗಳವಾರದಿಂದ ಜಮ್ಮು ವಿಭಾಗದ ದೋಡಾ ಪ್ರದೇಶದಲ್ಲಿ ಎರಡನೇ ಎನ್‌ಕೌಂಟರ್ ಆಗಿದೆ.
ಜೂನ್ 9 ರಂದು ರಿಯಾಸಿಯಲ್ಲಿ ಭಯೋತ್ಪಾದಕರು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದರು, ಇದರಲ್ಲಿ ಒಂಬತ್ತು ಜನರು ಸಾವನ್ನಪ್ಪಿದರು. ಮಂಗಳವಾರ, ಕಥುವಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯಿತು.

ಮೂರರಿಂದ ನಾಲ್ಕು ಭಯೋತ್ಪಾದಕರನ್ನು ಒಳಗೊಂಡ ಒಂದು ಗುಂಪು ದೋಡಾದ ಎತ್ತರದ ಪ್ರದೇಶದಲ್ಲಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆ ಬಗ್ಗೆ ಮಾಹಿತಿ ನಿಡಿದ್ದಾರೆ. ಸವಾಲಿನ ಭೂಪ್ರದೇಶದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.
ಭದೇರ್ವಾ-ಪಠಾಣ್‌ಕೋಟ್ ರಸ್ತೆಯ ಚಟರ್‌ಗಲ್ಲದ ಮೇಲ್ಭಾಗದಲ್ಲಿರುವ ಜಂಟಿ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ಮಂಗಳವಾರ ರಾತ್ರಿ ದಾಳಿ ನಡೆಸಿದಾಗ ರಾಷ್ಟ್ರೀಯ ರೈಫಲ್ಸ್‌ನ ಐವರು ಯೋಧರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಗಾಯಗೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ, ನಾವು ಜಿಲ್ಲಾ ಪೊಲೀಸ್‌ನ ಗುಪ್ತಚರ ಶಾಖೆಯ ಮೂಲಕ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದೇವೆ ಮತ್ತು ಅದರ ಪ್ರಕಾರ, ಅಂತರ-ರಾಜ್ಯ ಚೆಕ್ ಪಾಯಿಂಟ್‌ಗಳ ಜೊತೆಗೆ ಉನ್ನತ ವ್ಯಾಪ್ತಿಯಲ್ಲಿ ಸೇನೆ ಮತ್ತು ಪೊಲೀಸರು ಜಂಟಿಯಾಗಿ ನಿರ್ವಹಿಸುವ ತಾತ್ಕಾಲಿಕ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ದೋಡಾ-ಕಿಶ್ತ್ವಾರ್-ರಾಂಬನ್ ವ್ಯಾಪ್ತಿಯ ಪೊಲೀಸ್ ಉಪ ಮಹಾನಿರೀಕ್ಷಕ ಶ್ರೀಧರ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications