ವಂದೇ ಭಾರತ್ ಎಕ್ಸ್‌ಪ್ರೆಸ್ ಬಳಿಕ ಬುಲೆಟ್ ರೈಲಿನ ಹವಾ: ಆದರೆ ಬಲಿಯಾಗಲಿವೆ 3,520 ಮರಗಳು!
ನವದೆಹಲಿ: ಭಾರತೀಯ ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಜಗತ್ತಿನಾದ್ಯಂತ ಹೆಸರು ಗಳಿಸುತ್ತಿದೆ, ವಿದೇಶಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದೇ ಸಂದರ್ಭದಲ್ಲಿ ಭಾರತದ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್ ಬಳಿಕ ಬುಲೆಟ್ ರೈಲಿನ ಹವಾ ಶುರುವಾಗಲಿದೆ.
ಸಾರಿಗೆ ಸಂಪರ್ಕದ ವಿಚಾರದಲ್ಲಿ ಭಾರತ ಎಲ್ಲಾ ದೇಶಗಳನ್ನೂ ಮೀರಿಸಿ ಬೆಳವಣಿಗೆಯನ್ನ ಸಾಧಿಸುತ್ತಿದೆ. ಅದ್ರಲ್ಲೂ ಭಾರತದ ರೈಲ್ವೆ ಸಂಪರ್ಕ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಹೀಗೆ ಅಭಿವೃದ್ಧಿ ಕಡೆಗೆ ದಾಪುಗಾಲು ಇಡುತ್ತಿರುವ ಭಾರತೀಯ ರೈಲ್ವೆ ಇಲಾಖೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಹೊಸ ಕ್ರಾಂತಿ ಮಾಡಿದೆ. ಈ ಮಧ್ಯೆ ಭಾರತದಲ್ಲಿ ಮೊದಲ ಬುಲೆಟ್ ರೈಲು ಯಾವಾಗ ತನ್ನ ಓಡಾಟ ಆರಂಭಿಸುತ್ತೆ? ಎನ್ನುತ್ತಾ ಕೊಟ್ಯಂತರ ಭಾರತೀಯರು ಕಾಯುತ್ತಿದ್ದರು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಅದರ ಜೊತೆಯಲ್ಲೇ ವಿಷಾದಕರ ಸಂಗತಿಯೂ ಹೊರಬಿದ್ದಿದೆ (Mumbai-Ahmedabad Bullet Train).

ಬುಲೆಟ್ ಟ್ರೈನ್ ಓಡಾಟಕ್ಕೆ ಕೌಂಟ್‌ಡೌನ್!
ಅಹಮದಾಬಾದ್ & ಮುಂಬೈ ನಡುವೆ ದೇಶದ ಮೊದಲನೇ ಬುಲೆಟ್ ರೈಲು ಓಡಾಡಲಿದೆ. ಹೈ-ಸ್ಪೀಡ್ ರೈಲು ಟ್ರ್ಯಾಕ್‌ನಲ್ಲಿ ಪ್ರತಿ ಗಂಟೆಗೆ 320 ಕಿಮೀ ವೇಗದಲ್ಲಿ ಬುಲೆಟ್ ರೈಲು ಓಡಿಸುವ ಗುರಿಯನ್ನು ಭಾರತೀಯ ರೈಲ್ವೆ ಇಲಾಖೆ ಹೊಂದಿದೆ. ಅಷ್ಟಕ್ಕೂ ಸೂರತ್ & ಬಿಲಿಮೊರಾದ ನಡುವೆ 508 ಕಿಲೋ ಮೀಟರ್ ಅಂತರ ಇದೆ. ಈ 2 ನಿಲ್ದಾಣಗಳ ನಡುವೆ 12 ನಿಲ್ದಾಣಗಳಲ್ಲಿ ಭಾರತದ ಮೊಟ್ಟಮೊದಲ ಬುಲೆಟ್ ರೈಲು ನಿಲ್ಲುತ್ತದೆ. ಎರಡು ನಗರಗಳ ನಡುವಿನ 6 ಗಂಟೆ ಪ್ರಯಾಣವನ್ನ 3 ಗಂಟೆ ಕಡಿಮೆ ಮಾಡಲಿದೆ ಬುಲೆಟ್ ರೈಲು. ಯೋಜನೆ ಅಂದಾಜು ವೆಚ್ಚ 1.1 ಲಕ್ಷ ಕೋಟಿ ರೂಪಾಯಿ ಆಗಿದೆ ಎನ್ನಲಾಗಿತ್ತು.
ಬುಲೆಟ್ ರೈಲಿಗಾಗಿ 3500 ಮರ ಉಡೀಸ್?
ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆ ಮುಗಿಸಲು ಕೆಲಸ ಕೂಡ ಭರದಿಂದ ಸಾಗಿದ್ದು, ಇನ್ನೇನು 3 ವರ್ಷದಲ್ಲಿ ಅಂದ್ರೆ 2026ರಲ್ಲಿ ಬುಲೆಟ್ ರೈಲು ತನ್ನ ಓಡಾಟವನ್ನ ಆರಂಭಿಸಲಿದೆ. ಆದರೆ ವಿಚಾರ ಅದಲ್ಲ, ಈಗಾಗಲೇ ಅಹಮದಾಬಾದ್ & ಮುಂಬೈ ನಡುವೆ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಹತ್ತಾರು ಸಾವಿರ ಮರಗಳನ್ನ ಕಡಿದಿದ್ದಾರೆ. ಈಗ ಮತ್ತೆ 3500ಕ್ಕೂ ಹೆಚ್ಚು ಮರಕ್ಕೆ ಕೊಡಲಿ ಪೆಟ್ಟು ಬೀಳುತ್ತಂತೆ. ಹೀಗಾಗಿಯೇ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದು, ಜೊತೆಗೆ ಬೇಸರ ಕೂಡ ವ್ಯಕ್ತವಾಗಿದೆ. ಈ ನಡುವೆ ಎಲ್ಲವನ್ನೂ ಮೀರಿ ವೇಗವಾಗಿ ಬುಲೆಟ್ ರೈಲು ಕಾಮಗಾರಿ ನಡೆಸಲಾಗುತ್ತಿದೆ.
ಮರ ಕಡಿಯಲು ಅನುಮತಿ ಕೊಟ್ಟಿದ್ದು ಯಾರು?
ಅಂದಹಾಗೆ ಮೊದಲಿನಿಂದಲೂ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಅಡ್ಡಿ & ಆತಂಕ ಎದುರಾಗುತ್ತಿದೆ. ಪಿಎಂ ಮೋದಿ ಅಹಮದಾಬಾದ್ & ಮುಂಬೈ ಮಧ್ಯೆ ಈ ದೇಶದ ಮೊದಲ ಬುಲೆಟ್ ರೈಲು ಓಡಾಡುವ ಘೋಷಣೆ ಮಾಡಿದ್ದರು. ನಂತರವಂತೂ ಯೋಜನೆ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು. ಬುಲೆಟ್ ರೈಲಿಗಾಗಿ ಈಗ 3500ಕ್ಕು ಹೆಚ್ಚು ಮರ ಕಡಿಯಲು ಅನುಮತಿ ಸಿಕ್ಕಿದೆ. ನಾಗ್ಪುರದಲ್ಲಿರುವ ಕೇಂದ್ರ ಪರಿಸರ ಸಚಿವಾಲಯ ಪ್ರಾದೇಶಿಕ ಸಶಕ್ತ ಸಮಿತಿಯು, ಈಗ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್‌ಗೆ ಮರ ಕಡಿಯಲು ಅನುಮತಿ ನೀಡಿದೆಯಂತೆ. ಹಿಂದೆಯೂ ಹತ್ತಾರು ಸಾವಿರ ಮರ ಕಡಿದು ಹಾಕಲಾಗಿತ್ತು.

ಒಟ್ನಲ್ಲಿ ಅಭಿವೃದ್ಧಿ ಯೋಜನೆ ಜೊತೆಯಲ್ಲೇ ಸಮಸ್ಯೆಗಳು, ವಿನಾಶಗಳು ಕೂಡ ಬರುತ್ತವೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅತ್ತ ಭಾರತದ ಮೊದಲ ಬುಲೆಟ್ ರೈಲನ್ನು ನೋಡುವ ತವಕ ಕೋಟ್ಯಂತರ ಭಾರತೀಯರಿಗೆ. ಹಾಗೇ ಯೋಜನೆಗಾಗಿ ಮರಗಳ ತೆರವು ಕೂಡ ಈಗಿನ ಅನಿವಾರ್ಯ. ಹೀಗಾಗಿ 3500ಕ್ಕೂ ಹೆಚ್ಚು ಮರಗಳನ್ನ ಕಡಿಯುವ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರ ಮತ್ತು ವಿರೋಧದ ಚರ್ಚೆಗಳು ಶುರುವಾಗಿವೆ. ಈ ಎಲ್ಲಾ ಚರ್ಚೆಗಳ ನಡುವೆ ಬುಲೆಟ್ ರೈಲು ಓಡಾಡುವ ದಿನ ಕೂಡ ಹತ್ತಿರವಾಗುತ್ತಿದೆ.












Click it and Unblock the Notifications