Chennai Air Show: ಚೆನ್ನೈ ಏರ್ ಶೋ ವೇಳೆ ದುರಂತ; ಕನಿಷ್ಠ 5 ಮಂದಿ ಸಾವು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಗಾಗಿ ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್ ಶೋ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದವು. ಈ ಏರ್ ಶೋ ವೀಕ್ಷಿಸಲು ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು. ಈ ವೇಳೆ ಬಿಸಿಲಿನ ತಾಪದಿಂದ ಕನಿಷ್ಠ 5 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಭಾನುವಾರ ಬೆಳಗ್ಗೆ11 ಗಂಟೆಗೆ ಏರ್ ಶೋ ಆರಂಭವಾಯಿತು. ರಾಜ್ಯಪಾಲ ರವಿ, ಮುಖ್ಯಮಂತ್ರಿ ಸ್ಟಾಲಿನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಾರ್ವಜನಿಕರಿಗೆ ಏರ್ ಶೋ ವೀಕ್ಷಿಸಲು ಮರೀನಾ ಬೀಚ್‌ನಲ್ಲಿ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ವಾಯುಸೇನೆಯ ವಿಮಾನಗಳು ಆಕಾಶದಲ್ಲಿ ವಿವಿಧ ಬಣ್ಣಗಳಲ್ಲಿ ಚಿತ್ತಾರಗಳನ್ನು ಮೂಡಿಸುವ ಮೂಲಕ ನೋಡುಗರನ್ನು ರಂಜಿಸಿದರು. 15 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದು, ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ.
ಏರ್ ಶೋ ನೋಡಲು ಹೋಗಿದ್ದ ಐವರು ಸಾವು
ಜಾನ್ ಎನ್ನುವ 60 ವರ್ಷದ ವ್ಯಕ್ತಿ ಮರೀನಾ ಬೀಚ್‌ನಲ್ಲಿ ಏರ್ ಶೋ ನೋಡುವ ಸಂದರ್ಭದಲ್ಲಿ ಬಿಸಿಲಿನ ತಾಪದಿಂದ ನಿತ್ರಾಣನಾಗಿದ್ದಾನೆ, ಹೆಚ್ಚು ಜನ ಸೇರಿದ್ದ ಕಾರಣ ಆತನನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಆಗಲಿಲ್ಲ, ಆದರೂ ಜನಸಂದಣಿಯನ ನಡುವೆಯೇ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಐಎನ್‌ಎಸ್ ಅಡ್ಯಾರ್ ಬಳಿ ನಿಂತು ಏರ್ ಶೋ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾನೆ. ಪ್ರಜ್ಞಾಹೀನ ವ್ಯಕ್ತಿಯನ್ನು ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್ ಎಂದು ಗುರುತಿಸಲಾಗಿದೆ. ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚೆನ್ನೈನ ರಾಯಪೆಟ್ಟ ಆಸ್ಪತ್ರೆಗೆ ದಾಖಲಾಗಿದ್ದ ದಿನೇಶ್ ಕುಮಾರ್ (37 ವರ್ಷ) ಮೃತಪಟ್ಟಿದ್ದಾರೆ. ಪೆರುಂಗಲತ್ತೂರಿನ ಶ್ರೀನಿವಾಸನ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಯಪೆಟ್ಟಾ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಕೂಡ ಮೃತಪಟ್ಟಿದ್ದು ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಏರ್ ಶೋ ನೋಡಲು ತೆರಳಿದ್ದ 93 ಮಂದಿ ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. 200ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಮೂರ್ಚೆ ಸಮಸ್ಯೆ ಕಾಣಿಸಿಕೊಮಡಿದ್ದು, 93 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications