ಚುನಾವಣಾ ಫಲಿತಾಂಶದಿಂದ ಆಗುವ 5 ರಾಜಕೀಯ ಪರಿಣಾಮಗಳು
ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಈ ಬಾರಿಯ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳಿಗೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿದೆ.
ನವದೆಹಲಿ, ಮಾರ್ಚ್ 11: ಉತ್ತರ ಪ್ರದೇಶ, ಉತ್ತಾರಾಖಾಂಡ, ಗೋವಾ, ಮಣಿಪುರ ಹಾಗೂ ಪಂಜಾಬ್ ರಾಜ್ಯಗಳ ವಿಧಾನ ಸಭೆಗಳು ಮುಗಿದಿವೆ. ಇಡೀ ರಾಷ್ಟ್ರವೇ ಶನಿವಾರ (ಮಾ. 11) ಹೊರಬೀಳಲಿರುವ ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದೆ.
ಸಮೀಕ್ಷೆಗಳು ಈಗಾಗಲೇ ಬಿಜೆಪಿ ಪಕ್ಷವು ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಸಾರಿ ಹೇಳಿವೆ.
ಹಾಗಾದಲ್ಲಿ ಆಯಾ ರಾಜ್ಯಗಳಲ್ಲಿ ಅನೇಕ ರಾಜಕೀಯ ವಿದ್ಯಮಾನಗಳು, ಬದಲಾವಣೆಗಳಿಗೆ ಈ ಚುನಾವಣಾ ಫಲಿತಾಂಶ ನಾಂದಿ ಹಾಡಲಿರುವುದಂತೂ ಖಾತ್ರಿ.
ಹಾಗಾದರೆ, ಆ ಬದಲಾವಣೆಗಳು ಯಾವುವು... ಯಾವ ಯಾವ ನೇತಾರರು ವರ್ಚಸ್ಸು ಪಡೆಯಲಿದ್ದಾರೆ, ಯಾರ್ಯಾರು ಮೂಲೆಗುಂಪಾಗಲಿದ್ದಾರೆ ಎಂಬುದರ ಒಂದು ಅಂದಾಜಿನ ಸಂಕ್ಷಿಪ್ತ ಪಟ್ಟಿ ಇಲ್ಲಿದೆ.

ಮುಂದಿನ ಸಂಸತ್ ಚುನಾವಣೆಯಲ್ಲಿ ಶ್ರೀರಕ್ಷೆ
ಸಮೀಕ್ಷೆಗಳು ಹೇಳಿರುವಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ, ಅದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡ ಈವರೆಗಿನ ಕಠಿಣ ಕ್ರಮ, ನೀತಿ, ನಿಯಮಗಳೆಲ್ಲವುಗಳಿಗೆ (ಉದಾಹರಣೆಗೆ ಅಪನಗದೀಕರಣ) ಸಂದ ಜಯ ಎಂಬ ಅಭಿಪ್ರಾಯ ಬರುತ್ತದೆ. ಈ ಅಭಿಪ್ರಾಯ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮೋದಿ ಸರ್ಕಾರವನ್ನು ಅಥವಾ ಬಿಜೆಪಿಯನ್ನು ರಕ್ಷಿಸುತ್ತದೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಬರಲಿದೆ.
ಅದರಲ್ಲೂ ಉತ್ತರ ಪ್ರದೇಶ ಚುನಾವಣೆ, ಮುಂದಿನ ಲೋಕಸಭೆ ಚುನಾವಣೆಗೆ ಒಂದು ರೀತಿಯಲ್ಲಿ ಸೆಮಿಫೈನಲ್ ಪಂದ್ಯವಿದ್ದಂತೆ. ಇಲ್ಲಿ ರೂಪುಗೊಳ್ಳುವ ಜನಾಭಿಪ್ರಾಯವನ್ನು ಇಡೀ ದೇಶದಲ್ಲಿ ಮತ್ತೆ ಪ್ರತಿಧ್ವನಿಸುವಂತೆ ಮಾಡುವಲ್ಲಿ ಮೋದಿ ಹಾಗೂ ಬಿಜೆಪಿ ಯಶಸ್ವಿಯಾಗಲು ಅತ್ಯಂತ ಸರಳವಾಗಲಿದೆ.

ಮುಂದಿನ ರಣತಂತ್ರಗಳ ಹೊಸ ಫಾರ್ಮುಲಾ
ಉತ್ತರ ಪ್ರದೇಶದಲ್ಲಿ ಬಿಜೆಪಿ ಚುನಾವಣೆ ಗೆದ್ದರೆ, ಅದು ಬಿಜೆಪಿಯ ಮುಂದಿನ ಚುನಾವಣಾ ತಂತ್ರಗಳಲ್ಲಿ ಬದಲಾವಣೆ ತರಲಿದೆ. ಏಕೆಂದರೆ, ಈವರೆಗೆ ಬಿಜೆಪಿ ಉನ್ನತ ಜಾತಿಗಳ ಡಾರ್ಲಿಂಗ್ ಎಂದೇ ಬಿಂಬಿತವಾಗಿದ್ದ ಪಕ್ಷ. ಆದರೆ, ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಅದು ಈ ಹಣೆಪಟ್ಟಿಯಿಂದ ಹೊರಬರುವ ಪ್ರಯತ್ನ ಮಾಡಿತ್ತು.
ಸಮಾಜವಾದಿ ಪಕ್ಷದ ಪ್ರಬಲ ವೋಟ್ ಬ್ಯಾಂಕ್ ಎನಿಸಿರುವ ಯಾದವ ಜಾತಿಯನ್ನು ಬಿಟ್ಟು, ಮಾಯಾವತಿ ಪಕ್ಷಕ್ಕೆ ಶ್ರೀರಕ್ಷೆ ಎನಿಸಿರುವ ಜಾಟ್ ಸಮುದಾಯವನ್ನು ಹೊರತುಪಡಿಸಿ ಆ ರಾಜ್ಯದಲ್ಲಿರುವ ಇತರ ಹಿಂದುಳಿದ ವರ್ಗಗಳ ಓಲೈಕೆಯಲ್ಲಿ ನಿರತವಾಗಿತ್ತು. ಇದೇ ಆ ಪಕ್ಷಕ್ಕೆ ಶ್ರೀರಕ್ಷೆಯಾದರೆ ಅಚ್ಚರಿಯಿಲ್ಲ.
ಉತ್ತರ ಪ್ರದೇಶದಲ್ಲಿ ಅವರ ಈ ಪ್ರಯತ್ನ ಯಶಸ್ವಿಯಾದರೆ, ಇತರ ರಾಜ್ಯಗಳಿಗೂ ಅವರು ಅದನ್ನು ವಿಸ್ತರಿಸಬಹುದಾಗಿದೆ.

ಅಖಿಲೇಶ್ ನಾಯಕತ್ವಕ್ಕೆ ಧಕ್ಕೆ
ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಸೋತರೆ, ಅದು ಅಖಿಲೇಶ್ ಯಾದವ್ ಅವರ ನಾಯಕತ್ವಕ್ಕೆ ದೊಡ್ಡ ಹಿನ್ನಡೆ ತರಲಿದೆ. ಈಗಾಗಲೇ ತಂದೆ ಮುಲಾಯಂ ಸಿಂಗ್ ವಿರುದ್ಧ ಸಡ್ಡು ಹೊಡೆದು ಪಾರ್ಟಿಯನ್ನು ಇಬ್ಭಾಗ ಮಾಡಿಕೊಂಡಿರುವ ಅಖಿಲೇಶ್ ಯಾದವ್ ಗೆ ಈ ಚುನಾವಣೆಯ ಸೋಲು ಒಂದು ರೀತಿಯಲ್ಲಿ ಗರ್ವಭಂಗವಾದಂತೆ. ಅಲ್ಲದೆ, ಅವರು ನಾಯಕತ್ವ ಸೋತರೆ ಅವರೊಂದಿಗಿರುವ ಅವರ ಬಹುತೇಕ ಸಂಬಂಧಿಗಳು, ನಾಯಕರು ಅವರನ್ನು ಬಿಟ್ಟು ದೂರ ಸರಿಯುವ ಸಾಧ್ಯತೆಗಳೂ ಇವೆ.

ರಾಹುಲ್ ಗಾಂಧಿ ನಾಯಕತ್ವದ ವೈಫಲ್ಯವೆನಿಸಲಿದೆ
ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಗಳಿಸುವಲ್ಲಿ ವಿಫಲವಾದರೆ, ಅದು ರಾಹುಲ್ ಗಾಂಧಿಯವರ ನಿಜವಾದ ಅಧಃಪತನ ಇಲ್ಲಿಂದ ಶುರುವಾಗಲಿದೆ ಎನ್ನಲಡ್ಡಿಯಿಲ್ಲ. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಕನಸು, ಆ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸುವ ಕನಸು ಹಾಗೂ ಮುಂದೆ ಒಂದಿಲ್ಲೊಂದು ದಿನ ಪ್ರಧಾನಿಯಾಗುವ ಕನಸುಗಳು ಇನ್ನಿಲ್ಲದಂತೆ ದೂರಕ್ಕೆ ಸರಿಯಬಹುದು.
2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಿಂದ ಹಿಡಿದು, ಮಹಾರಾಷ್ಟ್ರದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೆ ಕಾಂಗ್ರೆಸ್ ಸೋಲು ಕಂಡಿದೆ. ಹಾಗಾಗಿ, ಉತ್ತರ ಪ್ರದೇಶದಂತಹ ಪ್ರಮುಖ ರಾಜ್ಯದಲ್ಲಿನ ಸೋಲು ಅವರ ನಾಯಕತ್ವವನ್ನು ಮತ್ತೊಮ್ಮೆ ಪ್ರಶ್ನೆಸುವಂತೆ ಮಾಡಲಿದೆ.
ರಾಹುಲ್ ಗಾಂಧಿಯವರ ಈ ಸೋಲು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶಕ್ಕೆ ಹೆಚ್ಚಿನ ಆದ್ಯತೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.

ಅರವಿಂದ ಕೇಜ್ರಿವಾಲ್ ಗೆ ಹೊಸ ಹುರುಪು
ಆಮ್ ಆದ್ಮಿ ಪಾರ್ಟಿಯು ಪಂಜಾಬ್ ನಲ್ಲಿ ಅಧಿಕಾರ ಗದ್ದುಗೆಯೇರಿದರೆ ಅದು ನಿಜಕ್ಕೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಲಿದೆ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿದ್ದುಕೊಂಡು ಕೇಂದ್ರ ಸರ್ಕಾರದೊಂದಿಗೆ ಸದಾ ಜಗಳಕ್ಕಿಳಿಯುವ ಅವರಿಗೆ ಹೊಸ ಹುರುಪು ತುಂಬಲಿದೆ. ಪಂಜಾಬ್ ನಲ್ಲಿ ಅಧಿಕಾರ ಸಿಗದಿದ್ದರೂ ಪ್ರಮುಖ ವಿರೋಧ ಪಕ್ಷವಾಗಿಯೂ ಅದು ಕೆಲಸ ಮಾಡಬಲ್ಲದು.












Click it and Unblock the Notifications