ಫೆಬ್ರವರಿ 12ರಂದು 'ಭಾರತ್ ಬಂದ್': ಏನಿರಲಿದೆ, ಏನಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರದ ಪ್ರಮುಖ ಕಾರ್ಮಿಕ ಮತ್ತು ಕೃಷಿ ನೀತಿಗಳನ್ನು ತೀವ್ರವಾಗಿ ವಿರೋಧಿಸಿ ಪ್ರಮುಖ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಬೃಹತ್ ಒಕ್ಕೂಟವು ಬುಧವಾರ, ಫೆಬ್ರವರಿ 12, 2026 ರಂದು ದೇಶವ್ಯಾಪಿ ಮುಷ್ಕರ ಅಥವಾ 'ಭಾರತ್ ಬಂದ್' (Bharat Bandh) ಗೆ ಕರೆ ನೀಡಿವೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 25 ಕೋಟಿ ಕಾರ್ಮಿಕರು ಭಾಗವಹಿಸಿದ್ದರು. ಆದರೆ, ಈ ಬಾರಿಯ ಮುಷ್ಕರದಲ್ಲಿ ದೇಶಾದ್ಯಂತ ಸರಿಸುಮಾರು 30 ಕೋಟಿಗೂ ಹೆಚ್ಚು ಕಾರ್ಮಿಕರು ಹಾಗೂ ರೈತರು ಭಾಗವಹಿಸುವ ನಿರೀಕ್ಷೆಯಿದೆ.
ದಿನನಿತ್ಯದ ಬ್ಯಾಂಕಿಂಗ್ ಸೇವೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸರ್ಕಾರಿ ಕಚೇರಿಗಳು ಹಾಗೂ ಕೈಗಾರಿಕಾ ವಲಯಗಳ ಮೇಲೆ ಈ ಮುಷ್ಕರ ಭಾರಿ ಪರಿಣಾಮ ಬೀರಲಿದ್ದು, ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅತಿದೊಡ್ಡ ಕಾರ್ಮಿಕ ಮತ್ತು ಕೃಷಿ ಪ್ರತಿಭಟನೆ ಎಂದು ಹೇಳಲಾಗಿದೆ.

ಬಂದ್ ಕರೆ ನೀಡಲು ಪ್ರಮುಖ ಕಾರಣಗಳೇನು?
ಈ ಪ್ರತಿಭಟನೆಗೆ ಪ್ರಮುಖ ಕಾರಣವೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು (Labour Codes). ಈ ಹಿಂದೆ ಇದ್ದ 29 ವಿವಿಧ ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ಈ ನಾಲ್ಕು ಹೊಸ ಸಂಹಿತೆಗಳನ್ನು ರೂಪಿಸಲಾಗಿದೆ. ಆದರೆ, ಈ ಹೊಸ ನಿಯಮಗಳು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ, ಉದ್ಯೋಗ ಭದ್ರತೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತವೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಅಥವಾ ಮಾಲೀಕರಿಗೆ ತಮ್ಮಿಷ್ಟದಂತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಾಗೂ ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದುಹಾಕಲು (Hire and Fire) ಹೆಚ್ಚಿನ ಅಧಿಕಾರ ನೀಡುತ್ತವೆ ಎಂಬುದು ಕಾರ್ಮಿಕ ಸಂಘಟನೆಗಳ ಪ್ರಮುಖ ಆರೋಪವಾಗಿದೆ.
ಇದರ ಜೊತೆಗೆ, ಉದ್ದೇಶಿತ ಕರಡು ಬೀಜ ಮಸೂದೆ (Draft Seed Bill), ವಿದ್ಯುತ್ ತಿದ್ದುಪಡಿ ಮಸೂದೆ (Electricity Amendment Bill) ಮತ್ತು ಇತ್ತೀಚೆಗೆ ತರಲಾದ ಶಾಂತಿ (SHANTI) ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ತೀವ್ರವಾಗಿ ಆಗ್ರಹಿಸುತ್ತಿದ್ದಾರೆ.
ಇದಲ್ಲದೆ, ಗ್ರಾಮೀಣ ಬಡವರ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯನ್ನು ವಿ-ಬಿ ಗ್ರಾಮ್ ಜಿ (VB-G RAM G) ಕಾಯ್ದೆಯಾಗಿ ಬದಲಾಯಿಸಿರುವುದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಗ್ರಾಮೀಣ ಉದ್ಯೋಗಾವಕಾಶಗಳು ಕಡಿತಗೊಳ್ಳಲಿವೆ ಎಂಬ ಆತಂಕ ಎದುರಾಗಿದೆ. ಹಳೆ ಪಿಂಚಣಿ ಯೋಜನೆ (OPS) ಮರುಜಾರಿಗೆ ತರಬೇಕು ಎಂಬ ಕೂಗು ಕೂಡ ಹೆಚ್ಚಾಗಿದೆ.
ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ರೈತರ ತೀವ್ರ ವಿರೋಧ
ಕಾರ್ಮಿಕರ ಸಮಸ್ಯೆಗಳ ಜೊತೆಗೆ ರೈತರ ಭಾರಿ ಆಕ್ರೋಶಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಇತ್ತೀಚೆಗೆ ಪ್ರಸ್ತಾಪಿಸಲಾದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ. ಈ ಒಪ್ಪಂದ ಜಾರಿಯಾದರೆ ಅಮೆರಿಕದ ಕೃಷಿ ಉತ್ಪನ್ನಗಳು, ಸಬ್ಸಿಡಿ ಆಧಾರಿತ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಅಗ್ಗದ ದರದಲ್ಲಿ ಮುಕ್ತವಾಗಿ ಪ್ರವೇಶಿಸಲಿವೆ. ಇದರಿಂದ ಸ್ಥಳೀಯ ಕೃಷಿ ಮತ್ತು ಹೈನುಗಾರಿಕೆ ವಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ (AIKS) ಮುಂತಾದ ಪ್ರಬಲ ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ವಿಶೇಷವಾಗಿ ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಸೇಬು ಬೆಳೆಗಾರರು ಈ ಒಪ್ಪಂದದಿಂದ ಭಾರಿ ನಷ್ಟ ಅನುಭವಿಸಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಅಮೆರಿಕದ ಕಾರ್ಪೊರೇಟ್ ಕೃಷಿ ಉತ್ಪನ್ನಗಳ ಮುಂದೆ ನಮ್ಮ ಸಣ್ಣ ಮತ್ತು ಅತಿ ಸಣ್ಣ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಕೃಷಿ ಮತ್ತು ಹೈನುಗಾರಿಕೆ ವಲಯವನ್ನು ಈ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಿರುವ ಸಂಘಟನೆಗಳು ಯಾವುವು?
ಈ ಬೃಹತ್ ದೇಶವ್ಯಾಪಿ ಮುಷ್ಕರವನ್ನು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) (INTUC), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC), ಎಚ್‌ಎಂಎಸ್ (HMS), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಅಖಿಲ ಭಾರತ ಸಂಯುಕ್ತ ಕಾರ್ಮಿಕ ಕೇಂದ್ರ (AIUTUC), ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಒಕ್ಕೂಟ (AICCTU) ಸೇರಿದಂತೆ 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಆಯೋಜಿಸಿದೆ. ಈ ಬೃಹತ್ ಕಾರ್ಮಿಕ ವೇದಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ (SKM) ದಂತಹ ದೇಶದ ಅತಿದೊಡ್ಡ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ಘೋಷಿಸಿವೆ.
ಬ್ಯಾಂಕಿಂಗ್ ವಲಯದಲ್ಲಿ ಭಾರಿ ಪ್ರಭಾವ ಹೊಂದಿರುವ ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(AIBEA) ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA) ಕೂಡ ಈ ಮುಷ್ಕರದಲ್ಲಿ ಕೈಜೋಡಿಸಿವೆ. ಅಸಂಘಟಿತ ವಲಯದ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಕೃಷಿ ಕೂಲಿಕಾರ್ಮಿಕರು, ಬ್ಯಾಂಕ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ವಲಯಗಳ ನೌಕರರು ಒಂದೇ ವೇದಿಕೆಯಡಿ ಸೇರಿರುವುದು ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧದ ವ್ಯಾಪಕ ಅಸಮಾಧಾನವನ್ನು ಎತ್ತಿತೋರಿಸುತ್ತದೆ.
ಯಾವ ಸೇವೆಗಳು ಲಭ್ಯವಿರುವುದಿಲ್ಲ?
1. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಾಚರಣೆಗಳ ಮೇಲೆ ಈ ಮುಷ್ಕರ ಭಾರಿ ಪರಿಣಾಮ ಬೀರಲಿದೆ. ಬಹುತೇಕ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಶಾಖೆಗಳಲ್ಲಿನ ನಗದು ವಹಿವಾಟು, ಚೆಕ್ ಕ್ಲಿಯರೆನ್ಸ್ ಮುಂತಾದ ಸೇವೆಗಳಲ್ಲಿ ಭಾರಿ ವಿಳಂಬವಾಗಬಹುದು. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ , ಪಿಎನ್‌ಬಿ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಸೇವೆ ವ್ಯತ್ಯಯವಾಗುವ ಬಗ್ಗೆ ಮುಂಚಿತವಾಗಿಯೇ ಮುನ್ಸೂಚನೆ ನೀಡಿವೆ.
2. ಸಾರಿಗೆ ಸಂಪರ್ಕ ಮತ್ತು ಮಾರುಕಟ್ಟೆಗಳು: ದೇಶಾದ್ಯಂತ ಏಕರೂಪದ ಸಾರಿಗೆ ಬಂದ್ ಕಡ್ಡಾಯವಿಲ್ಲದಿದ್ದರೂ, ಕರ್ನಾಟಕದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
3. ಶಾಲಾ-ಕಾಲೇಜುಗಳು: ಶಾಲಾ-ಕಾಲೇಜುಗಳಿಗೆ ರಾಷ್ಟ್ರವ್ಯಾಪಿ ಅಧಿಕೃತ ರಜೆ ಘೋಷಣೆಯಾಗಿಲ್ಲ. ಆದರೆ, ಸಾರಿಗೆ ಸಂಪರ್ಕ ಕಡಿತಗೊಂಡರೆ ಅಥವಾ ಪ್ರತಿಭಟನೆ ತೀವ್ರಗೊಂಡರೆ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಅಥವಾ ಸ್ಥಳೀಯ ಜಿಲ್ಲಾಡಳಿತಗಳು ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ಸಾಧ್ಯತೆಯಿದೆ.
ಸಾರ್ವಜನಿಕರಿಗೆ ಸಿಗುವ ಸೇವೆಗಳೇನು?
1. ಜನಸಾಮಾನ್ಯರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಆಂಬ್ಯುಲೆನ್ಸ್ ಸೇವೆಗಳು, ಔಷಧಾಲಯಗಳು (ಮೆಡಿಕಲ್ ಶಾಪ್), ಅಗ್ನಿಶಾಮಕ ದಳ, ಹಾಲು ಪೂರೈಕೆ ಮತ್ತು ಪತ್ರಿಕೆ ವಿತರಣೆಯಂತಹ ಅತ್ಯಗತ್ಯ ಸೇವೆಗಳು ಎಂದಿನಂತೆ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿವೆ. ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.
2. ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ವಿಮಾನಯಾನ ಸೇವೆಗಳು, ಮೆಟ್ರೋ ರೈಲು ಸೇವೆಗಳು ಹಾಗೂ ಭಾರತೀಯ ರೈಲ್ವೆ ಸೇವೆಗಳು ಸಾಮಾನ್ಯ ಸ್ಥಿತಿಯಲ್ಲಿರುತ್ತವೆ.
3. ಬ್ಯಾಂಕ್ ಶಾಖೆಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡರೂ ಸಹ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ (UPI) ವಹಿವಾಟುಗಳು ಮತ್ತು ಎಟಿಎಂ (ATM) ಸೇವೆಗಳು ತಡೆಯಿಲ್ಲದೆ ಕಾರ್ಯನಿರ್ವಹಿಸಲಿವೆ.
4. ಓಲಾ (Ola), ಉಬರ್ (Uber) ನಂತಹ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳು ಲಭ್ಯವಿರಲಿವೆ. ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಚಾರ ವ್ಯತ್ಯಯಗೊಂಡರೆ ಈ ಕ್ಯಾಬ್‌ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications