ಬಿಜೆಪಿ ಜಮ್ಮು ಮತ್ತು ಕಾಶ್ಮೀರದ ಅಸ್ತಿತ್ವವನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದೆ; ಫಾರೂಕ್ ಅಬ್ದುಲ್ಲಾ ಆಕ್ರೋಶ
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮತದಾರರು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಅಕ್ಟೋಬರ್ 1ರಂದು 40 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಇದು ಮೊದಲ ಚುನಾವಣೆಯಾಗಿತ್ತು, ಪ್ರಚಾರದಲ್ಲಿ ಇದನ್ನು ಎಲ್ಲಾ ಪಕ್ಷಗಳು ಪ್ರಸ್ತಾಪಿಸಿದವು. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಒನ್ ಇಂಡಿಯಾಗೆ ನೀಡಿರುವ ಸಂದರ್ಶನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಕ್ರಮಗಳನ್ನು ನೋಡಿದಾಗ ಆಘಾತವಾಗುತ್ತದೆ ಎಂದರು. 2019ರಲ್ಲಿ ಆರ್ಟಿಕಲ್ 370 ರದ್ದು ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮಾತನಾಡಿದ ಬಳಿಕ ಬೆಚ್ಚಿಬಿದ್ದಿದ್ದೇನೆ ಎಂದರು.

ಅವರ ಜೊತೆ ಮಾತನಾಡಿದ ಸಂದರ್ಭದಲ್ಲಿ ಸೈನಿಕರ ಕಾರ್ಯಾಚರಣೆ ಬಗ್ಗೆ ಏನೂ ಹೇಳಲಿಲ್ಲ, ಪಾಕಿಸ್ತಾನದ ಜೊತೆ ಸಂಘರ್ಷಕ್ಕೆ ತಯಾರಿ ನಡೆಯುತ್ತಿದೆಯೇ ಎಂದು ಕೇಳಿದಾಗಲೂ ಅವರು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಸುಳ್ಳು ಕಾರಣ ನೀಡಿ ಏಕಾಏಕಿ ಅಮರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ಅಬ್ದುಲ್ಲಾ ಆರೋಪಿಸಿದರು.
ಆರ್ಟಿಕಲ್ 370 ರದ್ದು ಮಾಡುವ ಸಮಯದಲ್ಲಿ ಅಧಿಕಾರದಲ್ಲಿದ್ದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಪರವಾಗಿ ಫಾರೂಕ್ ಅಬ್ದುಲ್ಲಾ ಬ್ಯಾಟ್ ಬೀಸಿದರು. ಸತ್ಯಪಾಲ್ ಮಲಿಕ್ ಅವರಿಗೆ ತಮ್ಮ ಅಧಿಕಾರ ಬಗ್ಗೆ ಅರಿವು ಇರದಂತೆ ಮಾಡಲಾಗಿತ್ತು. 370ನೇ ವಿಧಿ ರದ್ದು ಮಾಡಿದ ಬಗ್ಗೆ ಸತ್ಯಪಾಲ್ ಸ್ವತಃ ವಿಷಾದ ವ್ಯಕ್ತಪಡಿಸಿದ್ದಾರೆ. ಏನಾಗುತ್ತಿದೆ ಎನ್ನುವ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಧಿವೇಶನದಲ್ಲಿ ಚರ್ಚೆ ಮಾಡಬೇಕಿತ್ತು, ಮೆಹಬೂಬಾ ಮುಫ್ತಿ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವುದರಿಂದ ಮಲಿಕ್ ಅವರನ್ನು ಕಟ್ಟಿಹಾಕುವವರೆಗೆ ಎಲ್ಲವನ್ನೂ ಯೋಜಿಸಲಾಗಿತ್ತು ಎಂದು ಆರೋಪಿಸಿದರು.
ಆತಂಕ ವ್ಯಕ್ತಪಡಿಸಿದ ಅಬ್ದುಲ್ಲಾ
ಬಿಜೆಪಿ ಏನಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದರೆ, ಅವರ ಭವಿಷ್ಯದ ಯೋಜನೆಗಳ ಬಗ್ಗೆ ಆತಂಕವಿದೆ ಎಂದು ಅಬ್ದುಲ್ಲಾ ಹೇಳಿದರು. ಬಿಜೆಪಿ ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ರಚನೆ (ಡೆಮಾಗ್ರಾಫಿಕ್) ಅನ್ನೇ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಲಸಿಗರನ್ನು ಕರೆತಂದು ಇಲ್ಲಿ ನೆಲೆಸುವಂತೆ ಮಾಡುವ ಮೂಲಕ ಜನಸಂಖ್ಯಾ ರಚನೆಯನ್ನು ಬದಲಾವಣೆ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಮುಸ್ಲಿಂ ಜನಸಂಖ್ಯೆಯನ್ನು ಕಡಿಮೆ ಮಾಡಲು ಬಿಜೆಪಿ ಬಯಸುತ್ತಿದೆ ಎಂದು ನನಗೆ ಆತಂಕವಿದೆ ಎಂದು ಹೇಳಿದರು.












Click it and Unblock the Notifications