ಟೂಲ್‌ಕಿಟ್ ಸೃಷ್ಟಿಸಿದ್ದಷ್ಟೇ, ಅದನ್ನು ಎಡಿಟ್ ಮಾಡಿದ್ದು ನನಗೆ ಗೊತ್ತೇ ಇಲ್ಲ: ಶಂತನು
ನವದೆಹಲಿ, ಫೆಬ್ರವರಿ 24: ರೈತರ ಪ್ರತಿಭಟನೆಯ ವಿಚಾರವಾಗಿ ವಿವಾದ ಸೃಷ್ಟಿಸಿರುವ ಟೂಲ್ ಕಿಟ್ ಪ್ರಕರಣದಲ್ಲಿ ದಿಶಾ ರವಿ, ನಿಕಿತಾ ಜೇಕಬ್ ಅವರೊಂದಿಗೆ ಆರೋಪಿಯಾಗರುವ ಶಂತನು ಮುಲುಕ್ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ತಾವು ಪ್ರತಿಭಟನೆಯ ಕುರಿತಾದ ಮಾಹಿತಿ ನೀಡುವ ದಾಖಲೆಯನ್ನಷ್ಟೇ ಸಿದ್ಧಪಡಿಸಿದ್ದು, ತಮಗೆ ಅರಿವಿಲ್ಲದೆಯೇ ಇತರರು ಅದನ್ನು ಬದಲಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಶಂತನು ಮುಲುಕ್, ದಿಶಾ ರವಿ ಮತ್ತು ನಿಕಿತಾ ಜೇಕಬ್ ಅವರು ದೇಶದ್ರೋಹ ಮತ್ತು ರೈತರ ಪ್ರತಿಭಟನೆ ವಿಚಾರದಲ್ಲಿ ಸಂಚು ನಡೆಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭಾರತಕ್ಕೆ ಕಳಂಕ ತರಲು ಹಾಗೂ ಹಿಂಸಾಚಾರ ಹೆಚ್ಚಿಸಲು ಟೂಲ್‌ಕಿಟ್ ಮುಖ್ಯ ಪಾತ್ರ ವಹಿಸಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಪುಣೆ ಮೂಲದ ಎಂಜಿನಿಯರ್ ಆಗಿರುವ ಶಂತನು, ರೈತರ ಪ್ರತಿಭಟನೆಯ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದು ಇತರರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರ ಸಿದ್ಧಪಡಿಸಲು ನೆರವು ನೀಡಿದ್ದು ಮಾತ್ರ ಎಂದು ತಿಳಿಸಿದ್ದಾರೆ. ರೈತರ ಪ್ರತಿಭಟನೆ ಹಾಗೂ ಯಾವುದೇ ರೀತಿಯ ಹಿಂಸಾಚಾರದೊಂದಿಗೆ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ನಡುವೆ ಸಂಬಂಧವಿಲ್ಲ ಎನ್ನುವುದನ್ನು ಟೂಲ್‌ಕಿಟ್ ಸ್ಪಷ್ಟವಾಗಿ ತಿಳಿಸಿದೆ. ಅವರು ಪ್ರತಿಭಟನೆಯ ಕುರಿತಾದ ವಿವರವುಳ್ಳ ದಾಖಲೆಯನ್ನು ಸಿದ್ಧಪಡಿಸಿದ್ದರಷ್ಟೇ. ಅವರ ಗಮನಕ್ಕೆ ಬಾರದೆ ಅಥವಾ ಅವರು ಭಾಗಿಯಾಗಿಲ್ಲದೆಯೇ ಇತರರು ಅದನ್ನು ಬದಲಿಸಿದ್ದಾರೆ ಎಂದು ಶಂತನು ಪರ ವಕೀಲರು ಜಾಮೀನು ಅರ್ಜಿಯಲ್ಲಿ ವಿವರಿಸಿದ್ದಾರೆ.
ಜನವರಿ 20ರ ಬಳಿಕ ಆ ದಾಖಲೆಯನ್ನು ಶಂತನು ಮತ್ತೆ ನೋಡಿಲ್ಲ. ಟೂಲ್‌ಕಿಟ್ ವಿಚಾರದಲ್ಲಿ ಭಾರತದ ಹೊರಗಿನ ಯಾವುದೇ ವ್ಯಕ್ತಿ ಜತೆಗೂ ಯಾವುದೇ ರೀತಿ ಸಂಪರ್ಕ ಹೊಂದಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.












Click it and Unblock the Notifications