ಆಸ್ತಿ ಮಾರಿ ಜಮೀನಿನಲ್ಲಿ ಹೂತಿಟ್ಟ ಹಣ ಗೆದ್ದಲು ಪಾಲು, ರೈತನ ದೊಡ್ಡ ಕನಸು ನುಚ್ಚುನೂರು
ಸಾಮಾನ್ಯವಾಗಿ ಸುರಕ್ಷಿತೆ ದೃಷ್ಟಿಯಿಂದ ಬಹುತೇಕ ಮಂದಿ ಹಣವನ್ನು ಬ್ಯಾಂಕ್‌ನಲ್ಲಿ ಇಡುತ್ತಾರೆ. ಆದರೆ ಇಲ್ಲೊಬ್ಬ ರೈತ ಜಮೀನೇ ಸೂಕ್ತ ಎಂದು ಭಾವಿಸಿ ಅಲ್ಲೇ ಹೂತಿಟ್ಟ ಕಂತೆ ಕಂತೆ ನೋಟುಗಳಿದ್ದ ದುಡ್ಡು ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್‌ಗಳಿಗಿಂತ ಜಮೀನೇ ಸುರಕ್ಷಿತ ಎಂದು ಭಾವಿಸಿದ ರೈತನೊಬ್ಬ ಕೊನೆಗೆ ತನ್ನ ಜೀವಮಾನದ ಗಳಿಕೆಯನ್ನೇ ಕಳೆದುಕೊಂಡು ಕಂಗಾಲಾಗಿರುವ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಈ ರೈತನ ದೊಡ್ಡ ಕನಸು ನುಚ್ಚು ನೂರಾಗಿದೆ.

ಹೊಸ ಮನೆ ಕನಸು ನುಚ್ಚುನೂರು
ಬಾಲೋತ್ರಾ ಜಿಲ್ಲೆಯ ನೇವಿ ಗ್ರಾಮದ ನಿವಾಸಿ ಮಂಗೀಲಾಲ್ ಎಂಬ ರೈತರು ಇತ್ತೀಚೆಗೆ ತಮ್ಮ ಜಮೀನನ್ನು ಮಾರಿ 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಈ ಹಣದಿಂದ ಹೊಸ ಮನೆ ಕಟ್ಟಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಹಣವನ್ನು ಮನೆಯಲ್ಲಿ ಇಟ್ಟರೆ ಕುಟುಂಬದ ಸದಸ್ಯರಿಗೆ ತಿಳಿದು ಅನಗತ್ಯ ವೆಚ್ಚವಾಗಬಹುದು ಅಥವಾ ಯಾರಾದರೂ ಕದಿಯಬಹುದು ಎಂಬ ಭಯ ಅವರನ್ನು ಕಾಡಿತ್ತು.
ಹೊಲದಲ್ಲಿ ಗುಂಡಿ ತೋಡಿ ಮುಚ್ಚಿಟ್ಟಿದ್ದ ಹಣ
ಹೀಗಾಗಿ ಹಣ ಸುರಕ್ಷಿತವಾಗಿರಲಿ ಎಂಬ ಉದ್ದೇಶದಿಂದ ಮಂಗೀಲಾಲ್ ಎನ್ನುವವರು 5 ಲಕ್ಷ ರೂಪಾಯಿ ನಗದನ್ನು ಒಂದು ಪ್ಲಾಸ್ಟಿಕ್ ಕವರ್ ಹಾಕಿ, ತಮ್ಮ ಹೊಲದಲ್ಲಿ ಗುಂಡಿ ತೋಡಿ ಮುಚ್ಚಿಟ್ಟಿದ್ದರು. ಬಳಿಕ ರೈತ ಮಂಗೀಲಾಲ್ ಅವರು ಆ ನಿಖರವಾದ ಜಾಗವನ್ನು ಸಂಪೂರ್ಣವಾಗಿ ಮರೆತುಬಿಟ್ಟರು.
ಎಷ್ಟು ಹುಡುಕಿದರೂ ಹಣ ಇಟ್ಟ ಜಾಗ ಪತ್ತೆ ಆಗಲಿಲ್ಲ. ಕೊನೆಗೆ ವಿಷಯ ತಿಳಿದ ಕುಟುಂಬಸ್ಥರು ಸಹ ಹೊಲದಲ್ಲೆಲ್ಲಾ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ತಾನು ಕಷ್ಟಪಟ್ಟು ಸಂಪಾದಿಸಿದ ಹಣ ಸಿಗದೇ ರೈತ ತೀವ್ರ ನಿರಾಸೆಗೊಂದಿದ್ದರು.
ಪುಡಿ-ಪುಡಿಯಾಗಿದ್ದ ನೋಟುಗಳು
ಇತ್ತೀಚೆಗಷ್ಟೇ ಮಳೆಗಾಲದ ಬಿತ್ತನೆಗಾಗಿ ಜಮೀನನ್ನು ಹದಗೊಳಿಸುವಾಗ (ಉಳುಮೆ ಮಾಡುವಾಗ) ಮಂಗೀಲಾಲ್ ಅವರಿಗೆ ಅವರು ಮುಚ್ಚಿಟ್ಟಿದ್ದ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದೆ. ಹಣ ಸಿಕ್ಕಿತಲ್ಲ ಎಂದು ಸಂಭ್ರಮಿಸುವಷ್ಟರಲ್ಲೇ ಅವರಿಗೆ ಕಾದಿತ್ತು ದೊಡ್ಡ ಆಘಾತ. ಪ್ಲಾಸ್ಟಿಕ್ ಚೀಲದಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನೆಲ್ಲಾ ಗೆದ್ದಲು ಹುಳುಗಳು ಸಂಪೂರ್ಣವಾಗಿ ತಿಂದು ಹಾಳುಮಾಡಿದ್ದವು. ನೋಟುಗಳು ಪುಡಿ-ಪುಡಿಯಾಗಿದ್ದು, ಬಳಸಲು ಬಾರದ ಸ್ಥಿತಿಯಲ್ಲಿದ್ದವು.
ಬ್ಯಾಂಕ್ ಅಧಿಕಾರಿಗಳು ಹೇಳಿದ್ದೇನು?
ತುಂಡು-ತುಂಡಾದ ನೋಟುಗಳನ್ನು ಹಿಡಿದುಕೊಂಡು ಮಂಗೀಲಾಲ್ ಅವರು ತಕ್ಷಣವೇ ಸಮೀಪದ ಬ್ಯಾಂಕ್‌ಗೆ ತೆರಳಿ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ನೋಟುಗಳು ತುಂಬಾ ಹಾನಿಗೊಳಗಾಗಿದ್ದು, ಅವುಗಳ ಸರಣಿ ಸಂಖ್ಯೆ ಮತ್ತು ಸ್ವರೂಪ ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ಇವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮನೆ ಕಟ್ಟಲು ಇಟ್ಟುಕೊಂಡಿದ್ದ ಹಣವೆಲ್ಲಾ ಕಣ್ಣೆದುರೇ ಗೆದ್ದಲು ಪಾಲಾಗಿದ್ದನ್ನು ಕಂಡು ರೈತ ಮಂಗೀಲಾಲ್ ಕಣ್ಣೀರಿಟ್ಟಿದ್ದಾರೆ. ಹಣವನ್ನು ಬ್ಯಾಂಕ್‌ಗಳಲ್ಲಿ ಇಡದೆ ಹೀಗೆ ಅಸಾಂಪ್ರದಾಯಿಕ ರೀತಿಯಲ್ಲಿ ಮುಚ್ಚಿಟ್ಟಿದ್ದೇ ಈ ಅನಾಹುತಕ್ಕೆ ಕಾರಣವಾಯಿತು ಎನ್ನಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ 'ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ' ಎನ್ನುವ ಮಾತಿನಂತೆ ಈ ಘಟನೆ ನಡೆದು ಅಚ್ಚರಿ ಮೂಡಿಸಿದೆ.


Click it and Unblock the Notifications
