ಕೊರೊನಾ ವಿರುದ್ಧದ ಹೋರಾಟ ಸುಳ್ಳು ಸುದ್ದಿಯಿಂದ ಕಠಿಣ
ನವದೆಹಲಿ, ಮಾರ್ಚ್ 31 : ಕೊರೊನಾ ವಿರುದ್ಧದ ಹೋರಾಟದಲ್ಲಿ ಸುಳ್ಳು ಸುದ್ದಿಗಳು ದೊಡ್ಡ ತೊಡಕಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸೋಂಕು ಹರಡದಂತೆ ತಡೆಯಲು ಇಡೀ ದೇಶವನ್ನೇ ಏಪ್ರಿಲ್ 14ರ ತನಕ ಲಾಕ್ ಡೌನ್ ಮಾಡಲಾಗಿದೆ.
ಸುಪ್ರೀಂಕೋರ್ಟ್‌ಗೆ ಕೇಂದ್ರ ಗೃಹ ಇಲಾಖೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಸುಳ್ಳು ಸುದ್ದಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸುಳ್ಳು ಸುದ್ದಿಯ ಕಾರಣದಿಂದಾಗಿ ಕೊರೊನಾ ವಿರುದ್ಧದ ಹೋರಾಟ ಕಠಿಣವಾಗಿದೆ ಎಂದು ತಿಳಿಸಲಾಗಿದೆ.
ದೇಶದಲ್ಲಿನ ಕೊರೊನಾ ಸೋಂಕಿನ ಕುರಿತು ಮಾಹಿತಿ ನೀಡಲು ತಜ್ಞರ ಸಮಿತಿ, ವೆಬ್ ಸೈಟ್ ಆರಂಭಿಸಬೇಕು. 24 ಗಂಟೆಯೊಳಗೆ ಇದನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ವಸತಿ, ಆಹಾರ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ನಿರ್ದೇಶವನ್ನು ನೀಡಿದೆ.
ವಲಸೆ ಕಾರ್ಮಿಕರಿಗೆ ಆಹಾರ, ವಸತಿ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 22.88 ಲಕ್ಷ ಜನರಿಗೆ ಇದುವರೆಗೂ ಆಹಾರವನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಅಗತ್ಯ ಇರುವ ಜನರಿಗೆ, ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಸರ್ಕಾರ ಅಗತ್ಯ ವಸತಿ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications