ಕೊರೊನಾ ಭೀತಿಯಿಂದ ತುರ್ತು ಪರಿಸ್ಥಿತಿ ಘೋಷಣೆ: ಫೇಕ್ ಎಂದ ಆರ್ಮಿ
ನವದೆಹಲಿ, ಮಾರ್ಚ್ 30: ಕೊರೊನಾವೈರಸ್ ಜೊತೆ ಹೋರಾಟದ ಜೊತೆಗೆ ವೈರಸ್ ಕುರಿತಂತೆ, ಸರ್ಕಾರದ ಆದೇಶಗಳ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧವೂ ಕೇಂದ್ರ ಸರ್ಕಾರ ಹೋರಾಟ ನಡೆಸುತ್ತಿದೆ. ಇಂಟರ್ನೆಟ್ ಬಂದ್, ಲಾಕ್ ಡೌನ್ ವಿಸ್ತರಣೆ, ಸೋಂಕು ಹರಡುವ ರೀತಿ, ರಾಜ್ಯಗಳ ನಡುವಿನ ತಿಕ್ಕಾಟ ಹೀಗೆ ಪ್ರತಿ ವಿಷಯದಲ್ಲೂ ಒಂದು ಸುಳ್ಳು ಸುದ್ದಿ ಸೃಷ್ಟಿಸಿ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ.
ಇಂಥವರ ಬಗ್ಗೆ ಈಗಾಗಲೇ ಸೈಬರ್ ಕ್ರೈಂ ವಿಭಾಗದವರು ನಿಗಾ ವಹಿಸಿದ್ದಾರೆ. ದೆಹಲಿ ಪೊಲೀಸರು ಈಗಾಗಲೇ ಸುಳ್ಳು ಸುದ್ದಿ ಹಬ್ಬಿಸುವ ಹತ್ತಾರು ವೆಬ್ ತಾಣಗಳ ಪಟ್ಟಿಯನ್ನು ಪ್ರಕಟಿಸಿ, ಜನರಿಗೆ ಇಂಥ ವೆಬ್ ಸೈಟ್ ನಿಂದ ದೂರ ಇರುವಂತೆ ಜಾಗೃತಿ ಮೂಡಿಸಿದ್ದಾರೆ.
ಈಗ ಹಬ್ಬಿರುವ ಸುಳ್ಳು ಸುದ್ದಿಯೆಂದರೆ, ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತದೆ. ಭಾರತೀಯ ಸೇನೆ, ಎನ್ ಸಿಸಿ, ಎನ್ಎಸ್ ಸಿ ಕೆಡೆಟ್ ಗಳನ್ನು ನಾಗರಿಕರನ್ನು ನಿಯಂತ್ರಿಸಲು ನಿಯೋಜಿಸಲಾಗುತ್ತದೆ ಎಂದು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹಬ್ಬಿಸಲಾಗಿದೆ.

ಭಾರತೀಯ ಸೇನೆಯ ಎಡಿಜಿಪಿ ಈ ಬಗ್ಗೆ ತಕ್ಷಣವೇ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲವೂ ಸುಳ್ಳು ಸುದ್ದಿ ಎಂದಿದ್ದಾರೆ.
Fake and malicious messages are circulating on social media about likely declaration of emergency in mid April and employment of #IndianArmy, #Veterans, NCC and NSS to assist the civil administration.
— ADG PI - INDIAN ARMY (@adgpi) March 30, 2020
It is clarified that this is absolutely FAKE. pic.twitter.com/YnbLnBZGY0
ಕೊವಿಡ್19 ಸೋಂಕು ಹರಡದಂತೆ ತಡೆಗಟ್ಟಲು ಭಾರತದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಹಲವೆಡೆ ಕರ್ಫ್ಯೂ ಇದ್ದರೂ ಸಾರ್ವಜನಿಕರು ಎಂದಿನಂತೆ ಓಡಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಪಾಯ, ಆತಂಕ ಉಂಟು ಮಾಡುತ್ತಿದ್ದಾರೆ. ಹೀಗಾಗಿ, ಇವರಿಗೆಲ್ಲ ಬುದ್ಧಿ ಕಲಿಸಲು ಪೊಲೀಸರ ಲಾಠಿ ಬದಲು ಮಿಲಿಟರಿ ಬಂದರೆ ಸರಿ ಎಂದು ಸಾರ್ವಜನಿಕರು ಬಿಡುವಿನ ವೇಳೆ ಮಾತನಾಡಿಕೊಳ್ಳುವುದನ್ನು ಯಾರೋ ಫೇಸ್ ಬುಕ್, ವಾಟ್ಸಾಪ್ ನಲ್ಲಿ ಭಾರತೀಯ ಸೇನೆ ಹೆಸರನಲ್ಲಿ ಪೋಸ್ಟ್ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.












Click it and Unblock the Notifications