21 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಹೋಗಿದ್ದ ಮಗ: ಒಂದು ಫೇಸ್‌ಬುಕ್ ವಿಡಿಯೋದಿಂದ ಮತ್ತೆ ಒಂದಾದ ಕುಟುಂಬ
ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಗೆ ಮಾತ್ರವಲ್ಲ, ಎಷ್ಟೋ ಬಾರಿ ಒಡೆದ ಮನಸ್ಸುಗಳನ್ನ, ಅಗಲಿದ ಕುಟುಂಬಗಳನ್ನ ಒಗ್ಗೂಡಿಸುವ ಕೆಲಸವನ್ನಾ ಸಹ ಮಾಡುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಬರೋಬ್ಬರಿ 21 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಹೋಗಿದ್ದ ಬಿಹಾರದ ಮಧುಬನಿ ಮೂಲದ ರಾಮ್ ಶಂಕರ್ ಕುಶ್ವಾಹಾ ಎಂಬುವವರು ಒಂದು ಫೇಸ್‌ಬುಕ್ ರೀಲ್ ಸಹಾಯದಿಂದ ಮತ್ತೆ ತಮ್ಮ ತಾಯಿಯ ಮಡಿಲು ಸೇರಿದ್ದಾರೆ.
ಗ್ವಾಲಿಯರ್ ಡಿಎಸ್‌ಪಿ ಸಂತೋಷ್ ಪಟೇಲ್ ಅವರ ಸಾಮಾಜಿಕ ಕಳಕಳಿಯಿಂದಾಗಿ ಈ ಘಟನೆ ನಡೆದಿದ್ದು, ಕಳೆದುಕೊಂಡಿದ್ದ ಮಗನನ್ನು ಮರಳಿ ಪಡೆದ 70 ವರ್ಷದ ತಾಯಿ ಲಕ್ಷ್ಮಿ ದೇವಿ ಅವರ ಕಣ್ಣಲ್ಲಿ ಆನಂದಭಾಷ್ಪ ಹರಿದಿದೆ.

ರೈಲಿನ ಮೇಲಿನ ಒಲವು ತಂದ ಕಂಟಕ
ಬಿಹಾರದ ಮಧುಬನಿ ಜಿಲ್ಲೆಯ ಮಹೇಶಪುರ ಗ್ರಾಮದ ನಿವಾಸಿಯಾಗಿದ್ದ ರಾಮ್ ಶಂಕರ್ ಕುಶ್ವಾಹಾ ಅವರಿಗೆ ಬಾಲ್ಯದಿಂದಲೂ ರೈಲುಗಳೆಂದರೆ ಅಚ್ಚುಮೆಚ್ಚು. ಅವರ ಮನೆ ಮಹರೈಲ್ ರೈಲು ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿತ್ತು. 2005ರ ಡಿಸೆಂಬರ್ 6ರಂದು ವಿವಾಹ ಪಂಚಮಿಯ ಸಂಭ್ರಮದಲ್ಲಿದ್ದಾಗ, ಆಗ ಕೇವಲ 15 ವರ್ಷದ ಬಾಲಕನಾಗಿದ್ದ ಶಂಕರ್, ಅಯೋಧ್ಯೆಯ ಸಾಧುವೊಬ್ಬರ ಜೊತೆ ರೈಲು ಹತ್ತಿ ತನ್ನ ಊರು ಬಿಟ್ಟಿದ್ದ.
ಆದರೆ, ಆ ರೈಲು ಪ್ರಯಾಣ ಅವನನ್ನ ಕುಟುಂಬದಿಂದ ಬರೋಬ್ಬರಿ 21 ವರ್ಷಗಳ ಕಾಲ ದೂರ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಶಂಕರ್ ಅವರು ಊರು ಬಿಟ್ಟ ನಂತರ ಸುಮಾರು 1000 ಕಿಲೋಮೀಟರ್ ದೂರವಿರುವ ಮಧ್ಯಪ್ರದೇಶದ ಗ್ವಾಲಿಯರ್ ತಲುಪಿ, ಹಲವು ವರ್ಷಗಳ ಕಾಲ ರೈಲು ನಿಲ್ದಾಣದ ಸುತ್ತಮುತ್ತ, ಪ್ಲಾಟ್‌ಫಾರ್ಮ್‌ಗಳಲ್ಲಿಯೇ ಮಲಗುತ್ತಾ ಅಲೆದಾಡಿ ಜೀವನ ಸವೆಸಿದ್ದರು.
ಡಿಎಸ್‌ಪಿ ಸಂತೋಷ್ ಪಟೇಲ್ ಅವರ ಫೇಸ್‌ಬುಕ್ ವಿಡಿಯೋ
ಕಳೆದ 8 ವರ್ಷಗಳಿಂದ ಶಂಕರ್ ಅವರು ಗ್ವಾಲಿಯರ್‌ನಲ್ಲಿರುವ ಸ್ವರ್ಗ ಸದನ್ ಎಂಬ ಸರ್ಕಾರಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ಗ್ವಾಲಿಯರ್ ಡಿಎಸ್‌ಪಿ ಸಂತೋಷ್ ಪಟೇಲ್ ಅವರು ಆಶ್ರಮಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ತಲೆಗೆ ಮುಂಡಾಸು ಕಟ್ಟಿಕೊಂಡಿದ್ದ ಶಂಕರ್ ಅವರ ಮುಗ್ಧ ನಗು ನೋಡಿ ಆಕರ್ಷಿತರಾಗಿದ್ದರು.
ಶಂಕರ್ ಜೊತೆ ಮಾತನಾಡಿ, ಆತನ ಒಂದು ವಿಡಿಯೋ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಶಂಕರ್ ತಾನು ಬಿಹಾರದ ಆನಂದ್ ನಗರದ ಶಂಕರ್ ಕುಶ್ವಾಹಾ ಎಂದು ಹೇಳಿಕೊಂಡಿದ್ದ. ಈ ವಿಡಿಯೋವನ್ನ ಡಿಎಸ್‌ಪಿ ಸಂತೋಷ್ ಪಟೇಲ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು.
पहली बार लगा कि Reel देखने से किसी का सच में फायदा हुआ है। वरना ज्यादातर फायदा तो Reel बनाने वाले का ही होता है।
— Asif Iqbal (@AsifInsights) September 27, 2026
बिहार के मधुबनी के राम शंकर कुशवाहा सिर्फ 15 साल के थे, जब 6 दिसंबर 2005 को ट्रेन के सफर पर निकले और फिर घर वापस नहीं लौटे। उन्हें ट्रेनों का इतना शौक था कि पहले भी… pic.twitter.com/Z7ADxRLa7E
ಜನ್ಮಾಷ್ಟಮಿಯ ದಿನ ಸಿಕ್ಕ ಸುಳಿವು
2026ರ ಸೆಪ್ಟೆಂಬರ್ 4ರಂದು ಕೃಷ್ಣ ಜನ್ಮಾಷ್ಟಮಿಯ ದಿನ, ಶಂಕರ್ ಅವರ ಅಣ್ಣ ಲಲಿತ್ ಶಾಸ್ತ್ರಿ ಆಕಸ್ಮಿಕವಾಗಿ ಈ ಫೇಸ್‌ಬುಕ್ ವಿಡಿಯೋವನ್ನ ನೋಡಿದ್ದಾರೆ. ವಿಡಿಯೋದಲ್ಲಿದ್ದ ವ್ಯಕ್ತಿ ತನ್ನ ತಮ್ಮನೇ ಇರಬಹುದು ಎಂಬ ಭರವಸೆಯಿಂದ, ನಡುಗುವ ಕೈಗಳಲ್ಲಿಯೇ ಪೋಸ್ಟ್‌ನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ.
ಅಂತಿಮವಾಗಿ ಡಿಎಸ್‌ಪಿ ಅವರ ನೆರವಿನಿಂದ ಸೆಪ್ಟೆಂಬರ್ 7ರಂದು 36 ವರ್ಷದ ಶಂಕರ್ ಮತ್ತೆ ತಮ್ಮ ಕುಟುಂಬವನ್ನ ಸೇರಿಕೊಂಡಿದ್ದಾರೆ. 21 ವರ್ಷಗಳ ಬಳಿಕ ತನ್ನ ಮಗನನ್ನ ನೋಡಿದ 70 ವರ್ಷದ ತಾಯಿ ಲಕ್ಷ್ಮಿ ದೇವಿ, "ಅರೆ, ಇವನು ನನ್ನ ಶಂಕರ್ಬಾ, ನನ್ನ ಮಗು" ಎಂದು ಭಾವುಕರಾಗಿ ಅಪ್ಪಿಕೊಂಡಿದ್ದಾರೆ.
"ವಿವಾಹ ಪಂಚಮಿಯಂದು ನಾಪತ್ತೆಯಾಗಿದ್ದ ಮಗ ಜನ್ಮಾಷ್ಟಮಿಯಂದು ಮರಳಿ ಸಿಕ್ಕಿದ್ದಾನೆ. ಇದು ಅವನಿಗೆ ಪುನರ್ಜನ್ಮ" ಎಂದು ಕುಟುಂಬಸ್ಥರು ಸಂತಸ ಹಂಚಿಕೊಂಡಿದ್ದಾರೆ.
ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣವನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಎಂತಹ ಪವಾಡಗಳು ಬೇಕಾದ್ರೂ ಆಗಬಹುದು ಎಂಬುದಕ್ಕೆ ನಾಪತ್ತೆಯಾಗಿದ್ದ ಬಿಹಾರದ ವ್ಯಕ್ತಿ ಪತ್ತೆ ಆಗಿರುವ ಈ ಘಟನೆಯೇ ಸಾಕ್ಷಿ.


Click it and Unblock the Notifications
