ಹವಾಮಾನ ವೈಪರೀತ್ಯ: 2023ರ ಜನವರಿ ಮತ್ತು ಏಪ್ರಿಲ್ ನಡುವೆ ಭಾರತದಲ್ಲಿ ಸಂಭವಿಸಿದ ಹಾನಿಗಳ ವಿವರ
ನವದೆಹಲಿ, ಜೂನ್, 09: ಭಾರತದಲ್ಲಿ ಹವಾಮಾನ ವೈಪರೀತ್ಯದಿಂದ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಂದರೆ ಜನವರಿಯಿಂದ ಏಪ್ರಿಲ್‌ವರೆಗೂ 233 ಜನರು ಬಲಿಯಾಗಿದ್ದು, 0.95 ಮಿಲಿಯನ್ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಸಾವು ಹಾಗೂ ಬೆಳೆ ಹಾನಿಯಾಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಇಂತಹ ಘಟನೆಗಳು ಕಳೆದ ವರ್ಷ 27 ರಾಜ್ಯಗಳಲ್ಲಿ ಸಂಭವಿಸಿದರೆ, ಈ ಬಾರಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 32 ರಾಜ್ಯಗಳಲ್ಲಿ ಸಂಭವಿಸಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ತಲಾ 30, ಹಿಮಾಚಲ ಪ್ರದೇಶ 28, ಮತ್ತು ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ತಲಾ 27 ಜನರು ಹವಾಮಾನ ವೈಪರೀದಿಂದ ಸಾವನ್ನಪ್ಪಿದ್ದಾರೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಮಾಹಿತಿ ಅಂತಾ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇನ್ನು ಕಳೆದ ವರ್ಷದ ಅವಧಿಯಲ್ಲಿ ನವದೆಹಲಿಯಲ್ಲಿ ಈ ನಾಲ್ಕು ತಿಂಗಳ 25 ದಿನಗಳಲ್ಲಿ ಅಪಾರ ಹಾನಿಯಾಗಿತ್ತು. ಹಾಗೆಯೇ ಈ ಬಾರಿ ಇಲ್ಲಿ 12 ದಿನಗಳಲ್ಲಿಯೇ ತೀವ್ರ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಹೀಗೆ 2022ರ ಜನವರಿ ಮತ್ತು ಏಪ್ರಿಲ್ ನಡುವೆ ಇಲ್ಲಿ ಹವಾಮಾನ ವೈಪರಿತ್ಯವು 86 ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಒಟ್ಟು 0.03 ಮಿಲಿಯನ್ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದೆ.
2022ರ ಇದೇ ಅವಧಿಯಲ್ಲಿ 35 ದಿನಗಳಿಗಲ್ಲಿ ಅಪಾರ ಹಾನಿ ಸಂಭವಿಸಿದರೆ, ಈ ಬಾರಿ 58 ದಿನಗಳಲ್ಲಿ ಮಿಂಚು, ಗುಡುಗು ಮತ್ತು ಚಂಡಮಾರುತಗಳ ಆರ್ಭಟ ಹೆಚ್ಚಾಗಿದೆ. ಈ ಘಟನೆಗಳಲ್ಲಿ ಹೆಚ್ಚಿನವು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸಂಭವಿಸಿವೆ ಎನ್ನಲಾಗಿದೆ. ಇನ್ನು ಕಳೆದ ವರ್ಷದ 40 ದಿನಗಳಿಗೆ ಹೋಲಿಸಿದರೆ, 2023ರ ಮೊದಲ ನಾಲ್ಕು ತಿಂಗಳಲ್ಲಿ ದೇಶದಲ್ಲಿ ಕೇವಲ 15 ದಿನದಲ್ಲೇ ಅತೀ ಹೆಚ್ಚು ಬಿಸಿಲಿನ ತಾಪಮಾನ ದಾಖಲಾಗಿದೆ.
ಹವಾಮಾನ ಇಲಾಖೆಯ ತಜ್ಞರು ಕಡಿಮೆ ತಾಪಮಾನದ ವಾತಾವರಣವು ಪಾಶ್ಚಿಮಾತ್ಯ ಅಡಚಣೆಗಳಿಗೆ ಕಾರಣವೆಂದು ಹೇಳುತ್ತಾರೆ. ಹವಾಮಾನ ವೈಪರೀತ್ಯಗಳು ಮೊದಲು ಮೆಡಿಟರೇನಿಯನ್ ಪ್ರದೇಶದಲ್ಲಿ ಆರಂಭವಾಗುತ್ತವೆ. ನಂತರ ಮಾರ್ಚ್ ಮತ್ತು ಏಪ್ರಿಲ್ ಸಮಯದಲ್ಲಿ ವಾಯುವ್ಯ ಭಾರತಕ್ಕೆ ಅಕಾಲಿಕ ಮಳೆಯನ್ನು ತರುತ್ತವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ 2022ರಲ್ಲಿ 365ರಲ್ಲಿ 314 ದಿನಗಳ ಕಾಲ ಹವಾಮಾನ ವೈಪರೀತ್ಯಗಳು ಸಂಭವಿಸಿದ್ದವು. ಈ ವೇಳೆ ಹವಾಮಾನ ವೈಪರೀತ್ಯದಿಂದ ಒಟ್ಟು 3,026 ಜೀವಗಳನ್ನು ಬಲಿಯಾಗಿದ್ದು, 1.96 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಹವಾಮಾನ ವೈಪರೀತ್ಯ, ನೀರಿನ ಸಂಬಂಧಿತ ಘಟನೆಗಳು 1970 ಮತ್ತು 2021ರ ನಡುವೆ ಭಾರತದಲ್ಲಿ 573 ವಿಪತ್ತುಗಳನ್ನು ಉಂಟುಮಾಡಿದವು. ಇದರಿಂದ 1,38,377 ಜೀವಗಳು ಬಲಿಯಾದವು ಎಂದು ವಿಶ್ವ ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications