Maharashtra Election 2024: ಮಹಾರಾಷ್ಟ್ರ ಚುನಾವಣೆ, ಎಕ್ಸಿಟ್ ಪೋಲ್ ಫಲಿತಾಂಶ ನೋಡುವುದು ಎಲ್ಲಿ?
ಮುಂಬೈ, ನವೆಂಬರ್ 19: ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆ ಮತ್ತು ಜಾರ್ಖಂಡ್ ರಾಜ್ಯದ 38 ಕ್ಷೇತ್ರಗಳಿಗೆ ನವೆಂಬರ್ 20ರ ಬುಧವಾರ ಮತದಾನ ನಡೆಯುತ್ತಿದೆ. ಮತದಾನ ಪೂರ್ಣಗೊಂಡ ಬಳಿಕ ವಿವಿಧ ಸಂಸ್ಥೆಗಳು ನಡೆಸುವ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಮಹಾರಾಷ್ಟ್ರ ರಾಜ್ಯದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಘೋಷಣೆಯಾಗಲಿದೆ.
ಮಹಾರಾಷ್ಟ್ರ ರಾಜ್ಯದ 288 ಕ್ಷೇತ್ರಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ 4,136 ಅಭ್ಯರ್ಥಿಗಳಿದ್ದಾರೆ. 2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ 27.7ರಷ್ಟು ಹೆಚ್ಚಾಗಿದೆ. 2019ರಲ್ಲಿ ಬಿಜೆಪಿ-ಶಿವಸೇನೆ ಮತ್ತು ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ನಡುವೆ ಪೈಪೋಟಿ ನಡೆದಿತ್ತು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಪೈಪೋಟಿ ಇದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ಮಹಾರಾಷ್ಟ್ರ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಮಂಗಳವಾರ ಮಸ್ಟರಿಂಗ್ ಕಾರ್ಯ ಪೂರ್ಣಗೊಳಿಸಿ ಚುನಾವಣಾ ಸಿಬ್ಬಂದಿಗಳು ಪೊಲೀಸರ ಜೊತೆ ಮತಗಟ್ಟೆಗೆ ತೆರಳುತ್ತಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಎಕ್ಸಿಟ್ ಪೋಲ್ ನೋಡುವುದು ಹೇಗೆ?: ಆಡಳಿತಾರೂಢ ಮಹಾಯತಿ ಮೈತ್ರಿಕೂಟದಲ್ಲಿ ಬಿಜೆಪಿ 149, ಶಿವಸೇನೆ (ಏಕನಾಥ್ ಶಿಂಧೆ ಬಣ) 81,, ಎನ್‌ಸಿಪಿ (ಅಜಿತ್ ಪವಾರ್ ಬಣ) 59 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ವಿರೋಧ ಪಕ್ಷಗಳ 'ಎಂವಿಎ' ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಶಿವಸೇನೆ (ಉದ್ಧವ್ ಠಾಕ್ರೆ ಬಣ) 95, ಎನ್‌ಸಿಪಿ (ಶರದ್ ಪವಾರ್) 86 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎರಡೂ ಮೈತ್ರಿಕೂಟಗಳ ನಡುವೆ ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಬಿಎಸ್‌ಪಿಯ 237, ಎಐಎಂಐಎಂ 17 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಾರಾಷ್ಟ್ರದಲ್ಲಿ 2086 ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ.
ಬುಧವಾರ ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಚುನಾವಣಾ ಫಲಿತಾಂಶದ ಕುರಿತು ಚುನಾವಣೋತ್ತರ ಸಮೀಕ್ಷೆ ಒಂದು ಸುಳಿವು ನೀಡುವ ಸಾಧ್ಯತೆ ಇದೆ.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ನವೆಂಬರ್ 20ರ ಸಂಜೆ 6 ಗಂಟೆಯ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸಬೇಕಿದೆ. ಈ ನಿಯಮ ಎಲ್ಲಾ ಮುದ್ರಣ, ದೃಶ್ಯ, ಡಿಜಿಟಲ್ ವೆಬ್‌ಸೈಟ್‌ಗಳಿಗೆ ಅನ್ವಯವಾಗುತ್ತದೆ.
ಮಹಾರಾಷ್ಟ್ರದ ಒಂದೇ ಹಂತದ ಜೊತೆಗೆ ಜಾರ್ಖಂಡ್‌ನಲ್ಲೂ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಮತದಾನ ಮುಗಿದ ಬಳಿಕ ಜಾರ್ಖಂಡ್ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶವೂ ಪ್ರಕಟವಾಗುತ್ತಿದೆ.
ಮಾಧ್ಯಮಗಳಲ್ಲಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಜನರು ವಿವಿಧ ವಾಹಿನಿಗಳ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಒನ್ ಇಂಡಿಯಾ ವೆಬ್‌ಸೈಟ್‌ನಲ್ಲಿಯೂ ವೀಕ್ಷಿಸಬಹುದು. ವೆಬ್‌ಸೈಟ್ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಫಲಿತಾಂಶ ಲಭ್ಯವಿದೆ.












Click it and Unblock the Notifications