Exit Poll: ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ 2026: ಕಳೆದ ಬಾರಿ 5 ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ
ನವದೆಹಲಿ: ಪಂಚ ರಾಜ್ಯಗಳಾದ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮತದಾನ ಪ್ರಕ್ರಿಯೆ ಬಹುತೇಕ ಮುಗಿದಿದೆ. ಇದೀಗ ಎಲ್ಲರ ಚಿತ್ತ ಮತಗಟ್ಟೆ ಸಮೀಕ್ಷೆಯ ಫಲಿತಾಂಶ (Exit Poll Result 2026) ಮೇಲೆ ನೆಟ್ಟಿದೆ. ಮತದಾನದ ನಂತರ ಮತಗಟ್ಟೆ ಸಮೀಕ್ಷೆ ಪ್ರಕಟವಾಗಲಿದೆ. ಇದರ ಮೇಲೆ ಸೋಲು, ಗೆಲುವಿನ ಲೆಕ್ಕಾಚಾರ ಹಾಕುತ್ತಾರೆ. ಇದೊಂದು ಅಂದಾಜು ಎನ್ನಬಹುದು. ಆದರೆ ನಿಖರ ಫಲಿತಾಂಶವನ್ನು ಚುನಾವಣೆ ಆಯೋಗ ಮೇ 4 ರಂದು ಬಿಡುಗಡೆ ಮಾಡಲಿದೆ. ಹಾಗಾದರೆ ಕಳೆದ ಬಾರಿ ಇದೇ ಪಂಚ ರಾಜ್ಯಗಳ ಮತಗಟ್ಟೆ ಸಮೀಕ್ಷೆ ಎಷ್ಟು ನಿಖರವಾಗಿತ್ತು? ಇಲ್ಲಿದೆ ವಿವರ.
ಕಳೆದ ಬಾರಿ ಕೇರಳ, ತಮಿಳುನಾಡು, ಅಸ್ಸಾ ಸೇರಿ ಇದೇ ಐದು ರಾಜ್ಯಗಳ ಚುನಾವಣೆಗಳಲ್ಲಿ ಕೆಲವು ಸಮೀಕ್ಷೆಗಳು ಒಂದಷ್ಟು ನಿಖರವಾಗಿದ್ದರೆ, ಇನ್ನೂ ಕೆಲವು ಭಿನ್ನವಾಗಿದ್ದವು. ಇಂದಿನ ಸನ್ನಿವೇಶನದಲ್ಲಿ ಕಳೆದ ಬಾರಿ ಸಮೀಕ್ಷೆ ಫಲಿತಾಂಶ ಮತ್ತು ಅಂತಿಮ ಫಲಿತಾಂಶ ಅವಲೋಕಿಸುವುದು ಸೂಕ್ತವಾಗಿದೆ.

ಕೇರಳ ರಾಜ್ಯದಲ್ಲಿ ಪ್ರಕಟವಾಗಿದ್ದ ಎಕ್ಸಿಟ್ ಪೋಲ್‌ಗಳು ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಪರ ಗೆಲುವಿನ ಮುನ್ಸೂಚನೆ ನೀಡಿದ್ದವು. ಸಮೀಕ್ಷೆಗಳಲ್ಲಿ ಸರಾಸರಿಯು ಎಲ್‌ಡಿಎಫ್ ಪಕ್ಷಕ್ಕೆ ಸುಮಾರು 82 ಸೀಟು ಬರಬಹುದೆಂದು ಹೇಳಲಾಗಿತ್ತು. ಇನ್ನೂ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವು (ಯುಡಿಎಫ್) ಅಂದಾಜು 56 ಸ್ಥಾನ ಗಳಿಸಲಿದೆ ಎನ್ನಲಾಗಿತ್ತು. ಅಂತಿಮವಾಗಿ ಫಲಿತಾಂಶವು ಎಲ್‌ಡಿಎಫ್ ನಿರೀಕ್ಷೆಗಿಂತ ಹೆಚ್ಚು 99 ಸ್ಥಾನ ಗಳಿಸಿತು. ಇನ್ನೊಂದೆಡೆ ಯುಡಿಎಫ್ ಕೇವಲ 41 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ತಮಿಳುನಾಡಿನ ಅಂದಿನ ಭವಿಷ್ಯವಾಣಿ ಏನಾಗಿತ್ತು?
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಗೆಲುವು ಮತಗಟ್ಟೆ ಸಮೀಕ್ಷೆಗಳು ಬಹುತೇಕ ಸರಿಯಾಗಿ ಊಹಿಸಿದ್ದವು. ಡಿಎಂಕೆ ಮೈತ್ರಿಕೂಟಕ್ಕೆ ಸರಾಸರಿ 166 ಸೀಟು ಗಳಿಸುವ ಅಂದಾಜಿತ್ತು. ಆದರೆ ವಾಸ್ತವದಲ್ಲಿ 159 ಸ್ಥಾನ ಪಡೆದು ಮರಳಿ ಅಧಿಕಾರ ಹಿಡಿಯಿತು. ವಿಪಕ್ಷ ಎಐಎಡಿಎಂಕೆ ಮೈತ್ರಿಕೂಟವು ಸುಮಾರು 63 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ವಾಸ್ತವದಲ್ಲಿ ಅದು 75 ಸೀಟು ಪಡೆದು ಪ್ರಬಲ ಪಕ್ಷವಾಯಿತು.
ಅಸ್ಸಾಂ ರಾಜ್ಯದಲ್ಲಿ ಎಕ್ಸಿಟ್ ಪೋಲ್‌ಗಳು ಫಲಿತಾಂಶ ನಿಖರವಾಗಿ ಊಹಿಸಿದ್ದವು. ಕಾರಣ ಬಿಜೆಪಿ ನೇತೃತ್ವದ ಎನ್‌ಡಿಎ ಸುಮಾರು 71 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಒಟ್ಟು 54 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎನ್ನಳಾಗಿತ್ತು. ಚುನಾವಣೆ ಆಯೋಗ ನೀಡಿದ ಅಂತಿಮ ಫಲಿತಾಂಶಗಳು ಇದೆಲ್ಲ ಭವಿಷ್ಯ ಸತ್ಯಕ್ಕೆ ಹತ್ತಿರವಾಗಿತ್ತು. ಎನ್‌ಡಿಎ 75 ಸ್ಥಾನ ಗೆದ್ದರೆ, ವಿಪಕ್ಷವು ಮೈತ್ರಿಕೂಟ 50 ಸೀಟು ಗಳಿಸಿತು. ಕೇವಲ ನಾಲ್ಕು ಸೀಟುಗಳ ಅಂತರದಲ್ಲಿ ಭವಿಷ್ಯ ನಿಜವಾಗಿತ್ತು.
ಅದೇ ರೀತಿ ಪುದುಚೇರಿಯಲ್ಲಿ ಎನ್‌ಡಿಎ ಪರ ಚುನಾವಣೆ ಭವಿಷ್ಯ ಪ್ರಕಟವಾಗಿತ್ತು. ಎನ್‌ಡಿಎ ಹೆಚ್ಚು ಸೀಟು ಗಳಿಸುವ ಮೂಲಕ ವಿಜಯ ಸಾಧಿಸಲಿದೆ ಎಂದು ಊಹಿಸಲಾಗಿತ್ತು. ಸಮೀಕ್ಷೆಗಳ ಪ್ರಕಾರ, ಎನ್‌ಡಿಎ 21 ಸೀಟು ಗೆಲ್ಲಬೇಕಿತ್ತು, ಆದರೆ ವಾಸ್ತವದಲ್ಲಿ 16 ಸೀಟುಗಳನ್ನು ಮಾತ್ರ ಗಳಿಸಿತು. ಇನ್ನು ಯುಪಿಎ ಅಂದುಕೊಂಡಂತೆ 9 ಸ್ಥಾನ ಪಡೆದಿತ್ತು. ಪಕ್ಷೇತರ ಅಭ್ಯರ್ಥಿಗಳ ವಿಚಾರದಲ್ಲಿ ದೊಡ್ಡ ವ್ಯತ್ಯಾಸಗಳು ಕಂಡು ಬಂದಿದ್ದವು.
ಬಂಗಾಳದಲ್ಲಿ ಮತಗಟ್ಟೆ ಸಮೀಕ್ಷೆ ಭಿನ್ನ
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶ ಊಹಿಸುವಲ್ಲಿ ಮತಗಟ್ಟೆ ಸಮೀಕ್ಷೆಗಳು ವಿಫಲವಾಗಿದ್ದವು. ಜನಾದೇಶ ಯಾರ ಪರ ಎಂಬ ಸತ್ಯವು ಮುನ್ಸೂಚನೆಯಲ್ಲಿ ತಿಳಿಯಲಿಲ್ಲ. ಅಂದಿನ ಸಮೀಕ್ಷೆ ಪೈಕಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸುಮಾರು 155 ಸೀಟು, ಬಿಜೆಪಿ ನೇತೃತ್ವದ ಎನ್‌ಡಿಎಗೆ 126 ಸ್ಥಾನ ಬರಲಿವೆ. ಉಭಯ ಪಕ್ಷಗಳ ಮಧ್ಯೆ ತೀವ್ರ ಸ್ಫರ್ಧೆ ಏರ್ಪಡಲಿದೆ ಎಂದು ಹೇಳಲಾಯಿತಾದರೂ ಸೀಟು ಗೆಲುವಿನ ವಿಚಾರದಲ್ಲಿ ಲೆಕ್ಕ ನಿಖರವಾಗಿರಲಿಲ್ಲ.
ಅಂತಿಮ ಫಲಿತಾಂಶದಲ್ಲಿ ಟಿಎಂಸಿ 216 ಸ್ಥಾನ ಪಡೆದು ಭರ್ಜರಿ ಜಯ ಗಳಿಸಿತು. ಇದು ನಿರೀಕ್ಷೆಗಿಂತ ಸುಮಾರು 61ಸೀಟು ಹೆಚ್ಚೇ ಗಳಿಸಿತು. ಇನ್ನೂ ಎನ್‌ಡಿಎ ಕೇವಲ 77 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ವಿಪಕ್ಷ ಸ್ಥಾನದಲ್ಲಿ ಕೂತುಕೊಂಡಿತು. ಅದೇ ರೀತಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಸುಮಾರು 12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಅದು ಬರೀ ಒಂದು ಸ್ಥಾನಕ್ಕೆ ಸೀಮಿತವಾಯಿತು. ಒಟ್ಟಾರೆ ಫಲಿತಾಂಶವು ಕಳೆದ ಬಾರಿ ಮಿಶ್ರವಾಗಿತ್ತು. ಅರ್ಧ ನಿಖರ, ಇನ್ನರ್ಧ ಊಹೆ ಅಷ್ಟೆ ಆಗಿದ್ದು, ವಾಸ್ತವ ಫಲಿತಾಂಶ ಬೇರೆಯೇ ಆಗಿತ್ತು.













Click it and Unblock the Notifications