India vs Canada: ಕೆನಾಡದಲ್ಲಿರುವ ಭಾರತದ ಪ್ರಜೆಗಳಿಗೆ 'ಎಚ್ಚರಿಕೆ ವಹಿಸಿ' ಎಂದ ಕೇಂದ್ರ ಸರ್ಕಾರ- ಹಿಂಸಾಚಾರದ ಮುನ್ಸೂಚನೆ?
ನವದೆಹಲಿ, ಸೆಪ್ಟೆಂಬರ್ 20: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದಾರೆ. ಇದು ಭಾರತ ಹಾಗೂ ಕೆನಡಾ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಭಾರತ ಸರ್ಕಾರ ಸಲಹೆ ನೀಡಿದೆ.
ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಮತ್ತು ದ್ವೇಷದ ಅಪರಾಧಗಳು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತ ಮೂಲದ ನಾಗರಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿಳಿಸಿದೆ.
ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಜಾಗರೂತೆಯನ್ನು ವಹಿಸಬೇಕು. ಭಾರತೀಯ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ದಾಳಿಯಾಗುವ ಸಂಭವವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಭಾರತ ವಿರೋಧಿ ಕಾರ್ಯಸೂಚಿಯನ್ನು ವಿರೋಧಿಸುವ ಭಾರತೀಯ ಸಮುದಾಯದ ಸದಸ್ಯರ ವಿರುದ್ಧವೂ ಬೆದರಿಕೆ ಕರೆಗಳು ಬಂದಿವೆ ಎಂದು ಸರ್ಕಾರ ತಿಳಿಸಿದೆ.
ಭಾರತ ಹಾಗೂ ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಭಾರತದ ಹಿಂದೂಗಳಿಗೆ ದೇಶ ಬಿಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ದ್ವೇಷದ ಅಪರಾಧಗಳಿಗೆ ಕೆನಡಾದಲ್ಲಿ ರಾಜಕೀಯವಾಗಿ ಮನ್ನಣೆ ದೊರೆಯುತ್ತಿದೆ. ಹಿಂಸಾಚಾರವು ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಅಲ್ಲಿನ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಜಾಗರೂಕರಾಗಿರಿ ಎಂದು ಸಲಹೆ ನೀಡಲಾಗಿದೆ.
ಕೆನಡಾದಲ್ಲಿ ಖಲಿಸ್ತಾನಿಗಳು ಹೆಚ್ಚಿರುವ ನಗರಗಳಿಗೆ ಭಾರತೀಯರು ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್‌ನ ವೆಬ್‌ಸೈಟ್ ಪ್ರಕಾರ, ಕೆನಡಾದಲ್ಲಿ ಒಟ್ಟು 2,30,000 ಭಾರತೀಯ ವಿದ್ಯಾರ್ಥಿಗಳು ಮತ್ತು 7,00,000 ಅನಿವಾಸಿ ಭಾರತೀಯರಿದ್ದಾರೆ.
ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಹೈಕಮಿಷನ್ ಮತ್ತು ಕಾನ್ಸುಲೇಟ್‌ಗಳು ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾ ತೊರೆಯುವಂತೆ ಭಾರತದ ಹಿಂದೂಗಳಿಗೆ ಬೆದರಿಕೆ
ಕೆನಡಾದಲ್ಲಿರುವ ಭಾರತದ ಹಿಂದೂಗಳು ದೇಶವನ್ನು ತೊರೆಯಬೇಕೆಂದು ಜಸ್ಟಿಸ್ ಫಾರ್ ಸಿಖ್ಖ್ ಸಂಸ್ಥೆಯು ಅಭಿಯಾನ ಆರಂಭಿಸಿದೆ.

ಖಲಿಸ್ತಾನಿ ನಾಯಕ ನಿಜ್ಜರ್ ಹತ್ಯೆಯನ್ನು ಕೆನಡಾದಲ್ಲಿರುವ ಭಾರತದ ಹಿಂದೂಗಳು ಸಂಭ್ರಮಿಸಿದ್ದಾರೆ. ಅವರು ಕೆನಡಾದಲ್ಲಿ ಶಾಂತಿ ಕದಡಲು ಮುಂದಾಗಿದ್ದಾರೆ. ಸಿಖ್ಖರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಭಾರತ ಸರ್ಕಾರದ ಪರ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಹಿಂದೂಗಳು ಕೆನಡಾವನ್ನು ತೊರೆಯಬೇಕು ಎಂದು ಖಲಿಸ್ತಾನಿಗಳು ಕ್ಯಾಂಪೇನ್ ಆರಂಭಿಸಿದ್ದಾರೆ.
ಈ ಬೆಳವಣಿಗೆಗಳು ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಾಸಿಸುತ್ತಿರುವ ಭಾರತದ ಹಿಂದೂಗಳು ಆತಂಕ ವ್ಯಕ್ತಪಡಿಸಿದ್ದಾರೆ.











Click it and Unblock the Notifications