ಕೋರ್ಟ್ ತೀರ್ಪಿನ ಬಳಿಕವೂ ರಾಹುಲ್ ಗಾಂಧಿಗೆ ತಪ್ಪಿನ ಅರಿವಾಗಿಲ್ಲ, ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ
ನವದೆಹಲಿ, ಮಾರ್ಚ್ 24: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ದೇಶದ ಪ್ರಜಾಪ್ರಭುತ್ವದ ಸಂಸ್ಥೆಗಳಿಗೆ ಅಗೌರವ ತೋರಿರರುವುದು ಸ್ಪಷ್ಟವಾಗಿದೆ. ಸೂರತ್ ನ ನ್ಯಾಯಾಲಯ ಕೂಡ ಈಗ ತೀರ್ಪು ನೀಡಿದೆ. ಆದರೂ ರಾಹುಲ್ ಗಾಂಧಿಗೆ ತಮ್ಮ ತಪ್ಪಿನ ಅರಿವಾಗಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಹೊರಕ್ಕೆ ಕಳುಹಿಸಿದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಕಾಂಗ್ರೆಸ್ ನಾಯಕರ ಖಂಡನಾತ್ಮಕ ಹೇಳಿಕೆಗಳು ಕಾಂಗ್ರೆಸ್ ಸಂಸ್ಕೃತಿ ಏನು ಎಂಬುದನ್ನು ತೋರಿಸುತ್ತದೆ ಎಂದರು.

ಭಾರತದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಾಲಯದ ತೀರ್ಪು ಅನ್ನು ಖಂಡಿಸುವವರು ಕಂಡು ಬರುವುದು ಅದು ಕೇವಲ ಕಾಂಗ್ರೆಸ್‌ನಲ್ಲಿ ಮಾತ್ರ. ನ್ಯಾಯಾಲಯದ ತೀರ್ಪನ್ನು ಗೌರವಿಸುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿಲ್ಲ ಎಂಬುದು ಕಾಂಗ್ರೆಸ್ ನಾಯಕರ ವರ್ತನೆಯನ್ನು ಬಿಂಬಿಸುತ್ತದೆ. ನ್ಯಾಯಾಲಯದ ಎದುರು ಕೇಳುವಂತಹ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸ್‌ನವರಿಗೆ ಇಲ್ಲದಾಗಿದೆ. ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡುತ್ತಾರೆ. ಇದು ಕಾಂಗ್ರೆಸ್‌ನ ಅಸಲಿ ಸಂಸ್ಕೃತಿ ಎಂದು ಅವರು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ಸಂಬಂಧಿಸಿದಂತೆ ಸೂರತ್‌ನ ನ್ಯಾಯಾಲಯದ ತೀರ್ಪಿನ ಕುರಿತು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಸರಿಯಾದುದಲ್ಲ. ಅವರ ಹೇಳಿಕೆಯನ್ನು ಪ್ರಹ್ಲಾದ್ ಜೋಶಿ ಖಂಡಿಸಿದರು. ರಾಹುಲ್ ಗಾಂಧಿ ಅವರ ಈ ವರ್ತನೆಗೆ ದೇಶದ ಜನತೆ ತಕ್ಕ ಪಾಠ ಕಲಿಸ್ತಾರೆ ಎಂದು ಇದೇ ಜೋಶಿ ಭವಿಷ್ಯ ನುಡಿದರು.
ರಾಹುಲ್ ಗಾಂಧಿ ಹೇಳಿದ್ದೇನು : ತೀರ್ಪಲ್ಲಿ ಏನಿದೆ?
ಈ ಹಿಂದಿನ ಲೋಕಸಭೆ ಚುನಾವಣೆ (2019ರಲ್ಲಿ) ವೇಳೆ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಲ್ಲಿ ನಡೆದಿದ್ದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಅವರು "ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಹೇಗೆ ಇರುತ್ತದೆ ಎಂಬುದು ಆಶ್ಚರ್ಯ" ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ಮಹತ್ವ ತೀರ್ಪನ್ನು ಗುರುವಾರ ಪ್ರಕಟಿಸಿದೆ. ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ತಿಳಿಸಿದೆ. ಜೊತೆಗೆ ಅವರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿತ್ತು. ಬಳಿಕ ಅವರಿಗೆ ಜಾಮೀನು ಮಂಜೂರು ಮಾಡಿತು. ಈ ವೇಳೆ ರಾಹುಲ್ ಗಾಂಧಿಯವರು ಕೋರ್ಟ್‌ಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಈ ತೀರ್ಪನ್ನು ಕಾಂಗ್ರೆಸ್‌ನವರು ಸ್ವೀಕರಿಸಿಲ್ಲ. ಕೆಲವರು ಪ್ರತಿಭಟನೆಗೆ ಇಳಿದಿದ್ದಾರೆ. ಇತ್ತ ರಾಹುಲ್ ಗಾಂಧಿಯವರು ತೀರ್ಪಿನ ಬಗ್ಗೆ ಟ್ವೀಟ್ ಮಾಡಿ, ಅದರಲ್ಲಿ ಮಹಾತ್ಮ ಗಾಂಧಿಯವರ ಹೇಳಿಕೆ ಉಲ್ಲೇಖಿಸಿದ್ದಾರೆ. "ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ, ಸತ್ಯವೇ ನನ್ನ ದೇವರು, ಅಹಿಂಸೆ ಅದನ್ನು ಪಡೆಯುವ ಸಾಧನ ಆಗಿದೆ" ಎಂದಿದ್ದಾರೆ.
ತೀರ್ಪು ಬಂದ ಬಳಿಕ ಬಿಜೆಪಿಯ ನಾಯಕರು ಲಂಡನ್‌ನಲ್ಲಿ (UK) ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ರಾಹುಲ್ ಗಾಂಧಿ ಏನು ಹೇಳಿದರೂ ಅದು ಅವರ ಪಕ್ಷಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications