ಟಿಕೆಟ್ ರಾಜಕೀಯ: ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ಆಕಾಂಕ್ಷಿಗಳು
ಇಂಫಾಲ, ಫೆಬ್ರವರಿ 01: ಮಣಿಪುರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಿಜೆಪಿಗೆ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ. ಟಿಕೆಟ್ ವಂಚಿತ ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ಕಮಲ ಪಕ್ಷ ತೊರೆದು ಕಾಂಗ್ರೆಸ್ ಕಡೆಗೆ ಹೊರನಡೆಯುತ್ತಿದ್ದಾರೆ. ಕಾಂಗ್ರೆಸ್ ಅಥವಾ ಅವರಿಗೆ ಟಿಕೆಟ್ ನೀಡುವ ಯಾವುದೇ ಪಕ್ಷವಾದರೂ ಸರಿ ಟಿಕೆಟ್ ಪಡೆದು ಕಣಕ್ಕಿಳಿಯಲು ಪೈಪೋಟಿ ಜೋರಾಗಿ ನಡೆದಿದೆ.
ಪಕ್ಷದ ಅಭ್ಯರ್ಥಿ ಪಟ್ಟಿ ಘೋಷಣೆಯಾದ ಒಂದು ದಿನದ ನಂತರ, ಮೊಯಿರಾಂಗ್ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಪಿ ಶರತ್ ಚಂದ್ರ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಸೆಕ್ಮೈ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರಾದ ನಿಂಗ್ತೌಜಮ್ ಬಿರೆನ್ ಮತ್ತು ನಿಂಗ್ತೌಜಮ್ ಜೋಯ್ಕುಮಾರ್ ಸಿಂಗ್ ಕೂಡ ಕೈ ಪಡೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಇನ್ನೂ 12 ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯದ 60 ವಿಧಾನಸಭಾ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆ ನಿನ್ನೆ ಮಣಿಪುರದಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಟಿಕೆಟ್ ವಂಚಿತರ ಬೆಂಬಲಿಗರು ಪಕ್ಷದ ಧ್ವಜ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪ್ರತಿಕೃತಿಗಳನ್ನು ಸುಟ್ಟು ಹಾಕಿದ್ದರು. ರಾಜ್ಯದ ವಿವಿಧೆಡೆ ಪಕ್ಷದ ಕಚೇರಿಗಳಿಗೆ ದಾಳಿ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

2017ರ ನಂತರ ಸೇರ್ಪಡೆಯಾದ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಪಟ್ಟಿಯಲ್ಲಿರುವ 16 ಮಂದಿಯಲ್ಲಿ ಹತ್ತು ಮಂದಿ ಕಾಂಗ್ರೆಸ್‌ನವರಾಗಿದ್ದರೆ, 4 ಮಂದಿ ಇತರ ಪಕ್ಷಗಳಿಂದ ಸೇರಿದವರಾಗಿದ್ದಾರೆ. ಹೀಗಾಗಿ, ಮೂಲ ಬಿಜೆಪಿಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಬರುವವರಿಗೆ ಸ್ವಾಗತ ಎಂದು ಮಣಿಪುರ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ವಕ್ತಾರ ಕೆ.ಎಚ್.ದೇವಬ್ರತ ಎನ್‌ಡಿಟಿವಿಗೆ ತಿಳಿಸಿದ್ದಾರೆ.
"ನಾವು ಈಗಾಗಲೇ 40 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದೇವೆ ಮತ್ತು ಇನ್ನೆರಡು ಮೂರು ದಿನಗಳಲ್ಲಿ ಇನ್ನೊಬ್ಬರು ಹೊರಬರುತ್ತಾರೆ. ಆದರೆ ಈಗ, ಟಿಕೆಟ್ ನಿರಾಕರಿಸಿದ ಹಲವಾರು ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕಿಸಿ ಕಾಂಗ್ರೆಸ್ ನಿಷ್ಠೆಯ ಭರವಸೆ ನೀಡುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನಾವು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.
ಬಿಜೆಪಿ ಶಾಸಕರ ಒಂದು ಭಾಗವು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಥವಾ ಎನ್‌ಪಿಪಿಯತ್ತ ಸಾಗುತ್ತಿದೆ ಮತ್ತು ಒಂದು ಅಥವಾ ಎರಡು ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.

ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರು ಇದ್ದಾರೆ - ವಾಂಗ್‌ಖೈ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ವೈ ಎರಬೋಟ್ ಸಿಂಗ್ ಮತ್ತು ಕಾಕ್ಚಿಂಗ್ ಕ್ಷೇತ್ರದ ಶಾಸಕ ರಾಮೇಶ್ವರ್, ಇಬ್ಬರಿಗೂ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹೀಂಗಾಂಗ್‌ನ ಸಾಂಪ್ರದಾಯಿಕ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಮಣಿಪುರದ ಮತ್ತೊಬ್ಬ ಪ್ರಮುಖ ಸಚಿವ ಬಿಸ್ವಜಿತ್ ಸಿಂಗ್ ಅವರು ತೊಂಗ್ಜು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಸೋಮತೈ ಸೈಜಾ ಉಖ್ರುಲ್‌ನಿಂದ ಸ್ಪರ್ಧಿಸಲಿದ್ದಾರೆ.
ಮಣಿಪುರ ಬಿಜೆಪಿ ಮೂರು ಮಹಿಳೆಯರು ಮತ್ತು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ. ಬಿಜೆಪಿಗೆ ಸೇರ್ಪಡೆಗೊಂಡ ಮಣಿಪುರ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಗೋವಿಂದಸ್ ಕೊಂತೌಜಮ್ ಕೂಡ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆದಿದ್ದಾರೆ. ಮುಖ್ಯಮಂತ್ರಿಯವರ ಬಹುತೇಕ ನಿಷ್ಠಾವಂತರಿಗೆ ಪಕ್ಷದ ಟಿಕೆಟ್ ಸಿಕ್ಕಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಬಹುಮತ ಹೊಂದಿದೆ. ಇದರಲ್ಲಿ 30 ಬಿಜೆಪಿ ಶಾಸಕರು, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮೂವರು ಶಾಸಕರು, ನಾಲ್ಕು ನಾಗಾ ಪೀಪಲ್ಸ್ ಫ್ರಂಟ್ ಮತ್ತು ಮೂವರು ಸ್ವತಂತ್ರರು ಸೇರಿದ್ದಾರೆ.
ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 27ರಂದು 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸೈಕುಲ್, ಕಂಗ್ ಪೊಕ್ಪಿ, ಸೈತು, ತಿಪಾಯಿಮುಖ್, ಥಾಂಲೊನ್, ಹೆಂಗ್ಲೆಪ್, ಚುರಾಚಂದಾಪುರ್, ಸಾಯಿಕೋಟ್ ಹಾಗೂ ಸಿಂಘಾಟ್ ಕ್ಷೇತ್ರಗಳು ಗುಡ್ಡಗಾಡು ಪ್ರದೇಶದಲ್ಲಿದ್ದು ಈ ಪ್ರದೇಶದಲ್ಲಿ ಬಹುತೇಕ ಕ್ರೈಸ್ತ ಸಮುದಾಯದ ಮತದಾರರಿದ್ದಾರೆ. ಎರಡನೇ ಮತದಾನ ಮಾರ್ಚ್ 3 ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ.
ಮಾರ್ಚ್ 10 ರಂದು ಫಲಿತಾಂಶ: ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆ. ಇವುಗಳಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.












Click it and Unblock the Notifications