ರಾಜ್ಯ ರಾಜಕಾರಣಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ?

Posted By:
Subscribe to Oneindia Kannada

ನವದೆಹಲಿ, ಮೇ 3 (ಪಿಟಿಐ): ನೆಹರೂ ಕುಟುಂಬದ ರಾಜಕೀಯ ಕರ್ಮಭೂಮಿ ಉತ್ತರಪ್ರದೇಶದಲ್ಲಿ ಬರುವ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಕಳೆದ ಮೂರು ದಶಕಗಳಿಂದ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡುವ ಕಾರ್ಯಕ್ಕೆ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಮುಂದಾಗಿದ್ದಾರೆ.

ಎರಡು ಸ್ಥಳೀಯ ಪಕ್ಷ ಮತ್ತು ಒಂದು ರಾಷ್ಟ್ರೀಯ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ವಾಧ್ರಾ ಅವರನ್ನು ಬಿಂಬಿಸಬೇಕೆಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. (ಆಧುನಿಕ ಚಾಣಕ್ಯನ ಬೆನ್ನೇರಿದ ಸೋನಿಯಾ ಪಡೆ)

ಪ್ರಶಾಂತ್ ಕಿಶೋರ್ ನೀಡಿದ ಸಲಹೆಯನ್ನು ಒಪ್ಪಲು ಕಾಂಗ್ರೆಸ್ ಹೈಕಮಾಂಡ್ ನಿರಾಕರಿಸಿದರೆ, ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆಂದು ವರದಿಯಾಗಿದೆ. ಉತ್ತರಪ್ರದೇಶದ ಜನಸಂಖ್ಯೆಯಲ್ಲಿ ಶೇ. 13ರಷ್ಟು ಬ್ರಾಹ್ಮಣರಿದ್ದಾರೆ.

Election strategist Prashant Kishor favours projecting Rahul Gandhi as UP CM candidate

ಪ್ರಶಾಂತ್ ಕಿಶೋರ್ ಸಲಹೆಯಂತೆ ಉತ್ತರ ಪ್ರದೇಶ ಘಟಕವನ್ನು ಸಂಪೂರ್ಣ ಪುನಾರಚಿಸುವ ಸಿದ್ಧತೆಯಲ್ಲಿರುವ ಕಾಂಗ್ರೆಸ್, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರನ್ನೂ ಮುಖ್ಯಮಂತ್ರಿ ಹುದ್ದೆಗೆ ಪರಿಶೀಲಿಸುವ ಸಾಧ್ಯತೆಯಿದೆ.

404 ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಗೆ ರಣತಂತ್ರ ರೂಪಿಸಲು ಈಗಾಗಲೇ ಪ್ರಶಾಂತ್ ಕಿಶೋರ್ ತನ್ನ ತಂಡದೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.

ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಮೇಲುಗೈ ಸಾಧಿಸಿದರೆ, ರಾಜ್ಯದಲ್ಲಿ ಎಂಬತ್ತು ಸ್ಥಾನ ಹೊಂದಿರುವ ಲೋಕಸಭಾ ಚುನಾವಣೆಗೂ ಅನುಕೂಲವಾಗಲಿದೆ ಎನ್ನುವುದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ.

ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವ ಪಕ್ಷದೊಳಗಿನ ಕೂಗು ಇಂದು ನಿನ್ನೆಯದಲ್ಲ. ಜೊತೆಗೆ, ಪಕ್ಷದ ಒಂದು ವರ್ಗ ಉತ್ತರ ಪ್ರದೇಶದಲ್ಲಿ ರಾಹುಲ್‌ ಅಥವಾ ಪ್ರಿಯಾಂಕಾ ನಾಯಕತ್ವ ವಹಿಸಿಕೊಳ್ಳಬೇಕು ಎನ್ನುವ ಬಯಕೆಯನ್ನೂ ಹೊಂದಿದೆ.

ಆದರೆ, ರಾಹುಲ್‌ ಗಾಂಧಿಯವರನ್ನು ಉತ್ತರಪ್ರದೇಶ ಸಿಎಂ ಅಭ್ಯಥಿಯೆಂದು ಘೋಷಿಸಿದರೆ ಅವರ ರಾಜಕೀಯ ಜೀವನ ರಾಜ್ಯ ಮಟ್ಟಕ್ಕೆ ಸೀಮಿತವಾಗಲಿದೆ ಎನ್ನುವ ಭಯ ಕಾಂಗ್ರೆಸ್‌ ಪಕ್ಷಕ್ಕೆ ಕಾಡುವ ಸಾಧ್ಯತೆಯಿರುವುದರಿಂದ ಹೈಕಮಾಂಡ್ ಈವರೆಗೂ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿಲ್ಲ.

ಮೇ 19ಕ್ಕೆ ಪಂಚರಾಜ್ಯ ಚುನಾವಣೆ ಫ‌ಲಿತಾಂಶ ಹೊರಬೀಳಲಿದ್ದು, ಅನಂತರ ಉತ್ತರಪ್ರದೇಶ ಕಾಂಗ್ರೆಸ್ ಘಟಕಕ್ಕೆ ಆಮೂಲಾಗ್ರ ಬದಲಾವಣೆ ತರಲು ಕಾಂಗ್ರೆಸ್ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Election strategist Prashant Kishor is said to favour projecting Congress Vice President Rahul Gandhi or Priyanka Gandhi Vadhra as parties Chief Minister candidate for Uttar Pradesh, where assembly polls will be held next year.
Please Wait while comments are loading...