Mumbai Rain: ಮಹಾಮಳೆಗೆ ಬೆಚ್ಚಿಬಿದ್ದ ವಾಣಿಜ್ಯ ನಗರಿ! ಮನೆಯಿಂದ ಹೊರಬರದಂತೆ ಸಿಎಂ ಮನವಿ
ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮುಂಬೈ ಬೆಚ್ಚಿಬಿದ್ದಿದೆ. ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ತೀರಾ ಅಗತ್ಯವಿರದ ಹೊರತು ಮನೆಯಿಂದ ಹೊರಬರದಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜನರಿಗೆ ಮನವಿ ಮಾಡಿದ್ದಾರೆ. ಸಮುದ್ರ ತೀರಗಳಿಗೆ ಯಾರನ್ನೂ ಬಿಡದಂತೆ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಮುಂಬೈನ ಹಲವು ಪ್ರದೇಶಗಳಲ್ಲಿ ಅರ್ಧರಾತ್ರಿ 1 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವೇಳೆಗೆ 300 ಮಿ.ಮೀ ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತವಾಗಿದ್ದು, ರೈಲು ಮತ್ತು ವಿಮಾನ ಸಂಚಾರಕ್ಕೂ ಅಡ್ಡಿಯಾಗಿದೆ. ಸೋಮವಾರ ಬೆಳಗ್ಗೆಯಿಂದ ಮತ್ತೆ ಮಳೆ ಶುರುವಾಗಿದ್ದು, ಪ್ರವಾಹ ಹೆಚ್ಚುವ ಆತಂಕ ಶುರುವಾಗಿದೆ.

ಮುಂಬೈ ಪ್ರವಾಹ ಪರಿಸ್ಥಿತಯನ್ನು ನಿಭಾಯಿಸುವ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿ ಸಿಎಂ ಏಕನಾಥ್ ಶಿಂದೆ, ನಾಗರಿಕ ಮತ್ತು ರಕ್ಷಣಾ ತಂಡಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಹರಸಾಹಸ
ಹಲವಾರು ಸ್ಥಳಗಳಲ್ಲಿ ರೈಲ್ವೆ ಹಳಿಗಳು ಮುಳುಗಿವೆ ಮತ್ತು ರೈಲ್ವೆ, ಎನ್‌ಡಿಆರ್‌ಎಫ್ ಮತ್ತು ನಾಗರಿಕ ಅಧಿಕಾರಿಗಳು ನೀರನ್ನು ಹೊರಹಾಕಲು ಯತ್ನಿಸುತ್ತಿದ್ದಾರೆ. ಸದ್ಯ ರೈಲು ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ನಗರ ಪಾಲಿಕೆಯ 461 ಮೋಟಾರ್ ಪಂಪ್‌ಗಳು ಹಾಗೂ ರೈಲ್ವೆಯ 200 ಪಂಪ್‌ಗಳು ಚಾಲನೆಯಲ್ಲಿವೆ. ಬೆಳಗ್ಗೆಯಿಂದಲೇ ಎಲ್ಲ ಇಲಾಖೆಗಳ ಜತೆ ಸಂಪರ್ಕದಲ್ಲಿದ್ದೇನೆ. ಕೇಂದ್ರ ಮತ್ತು ಬಂದರು ರೈಲು ಸಂಚಾರ ಆರಂಭವಾಗಿದೆ. ಇಡೀ ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆದಿದ್ದೇನೆ, ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಕರಾವಳಿ ಪ್ರದೇಶಗಳಲ್ಲಿ ಅಲರ್ಟ್ ಆಗಿರುವಂತೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೂಚಿಸಲಾಗಿದೆ ಎಂದರು.
ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ನಗರದಲ್ಲಿ ಏಳು ಪಂಪಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಶಾಲೆಗಳಿಗೆ ರಜೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಇಲಾಖೆಗಳು ಕಟ್ಟೆಚ್ಚರ ವಹಿಸಿದ್ದು, ಜಲಾವೃತವಾಗಿರುವ ಪ್ರದೇಶಗಳಲ್ಲಿ ನಾಗರಿಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ರಾಜ್ಯಕ್ಕೆ ಅಪಾರ ನೀರು
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದು ರಾಜ್ಯಕ್ಕೆ ಲಾಭವಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಕೊಲ್ಹಾಪುರದಲ್ಲಿ ಪಂಚಾಗಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, 33,562 ಕ್ಯೂಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಆಲಮಟ್ಟಿ ಜಲಾಶಯದ ಒಳಹರಿವು 60,603 ಕ್ಯೂಸೆಕ್ಸ್ ಇದ್ದು, ನಾಳೆ ವೇಳೆಗೆ 80 ಸಾವಿರ ಕ್ಯೂಸೆಕ್ಸ್‌ಗೆ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications