ದೇವೇಂದ್ರ ಫಡ್ನವಿಸ್‌ಗಿಂತ ಏಕನಾಥ ಶಿಂಧೆ ಹೆಚ್ಚು ಜನಪ್ರಿಯ ಸಿಎಂ: ಶಿವಸೇನಾ ಜಾಹೀರಾತಿನಿಂದ ಬಿಜೆಪಿಗೆ ಮುಜುಗರ
ಮುಂಬೈ, ಜೂನ್ 13: ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್‌ಗಿಂತ ಸಿಎಂ ಏಕನಾಥ್ ಶಿಂಧೆ ಹೆಚ್ಚು ಜನಪ್ರಿಯ ಎಂದು ಶಿವಸೇನಾ ಆಂತರಿಕ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯ ಪೂರ್ಣ ಪುಟದ ಜಾಹೀರಾತನ್ನು ಮಹಾರಾಷ್ಟ್ರದ ಪತ್ರಿಕೆಗಳಲ್ಲಿ ನೀಡಲಾಗಿದೆ. ಇದು ಬಿಜೆಪಿ- ಶಿವಸೇನಾ ಮೈತ್ರಿ ಸರ್ಕಾರಕ್ಕೆ ಮುಜುಗರ ತಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಮಹಾರಾಷ್ಟ್ರದ ಜನರು ಏಕನಾಥ್ ಶಿಂಧೆ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂಬ ಸಾಲುಗಳು ಜಾಹೀರಾತಿನಲ್ಲಿ ಕಾಣಿಸಿಕೊಂಡಿದೆ.

ಇತ್ತೀಚಿನ ಕಲ್ಯಾಣ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಧೆ ಮಹಾರಾಷ್ಟ್ರವನ್ನು ಅತ್ಯುನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬುದನ್ನು ಜಾಹೀರಾತಿ ಬಹಿರಂಗ ಪಡಿಸಿದೆ.
'ಮೋದಿ ಫಾರ್ ಇಂಡಿಯಾ, ಶಿಂಧೆ ಫಾರ್ ಮಹಾರಾಷ್ಟ್ರ' ಎಂಬುದು ಜಾಹೀರಾತಿನ ಶೀರ್ಷಿಕೆಯಾಗಿದೆ. 'ಎಲ್ಲರಿಂದ ಪ್ರೀತಿಸಲ್ಪಡುವ ಕನಸಿನ ತಂಡ' ಎಂದೂ ಜಾಹೀರಾತಿನಲ್ಲಿ ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಧೆ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಏನನ್ನೋ ತೋರಿಸುತ್ತಿರುವಾಗ ಒಬ್ಬರನ್ನೊಬ್ಬರು ನೋಡಿ ನಗುತ್ತಿರುವ ಫೋಟೋ ಜಾಹೀರಾತಿನಲ್ಲಿ ಇದೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಟ್ರಬಲ್‌ಶೂಟರ್ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿ ಫಡ್ನವೀಸ್ ಅವರ ಫೋಟೋ ಜಾಹೀರಾತಿನಲ್ಲಿ ಇಲ್ಲದಿರುವ ವಿಚಾರವೀಗ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಚುನಾವಣಾ ಸಮೀಕ್ಷೆಗಳ ಪ್ರಕಾರ, ಮಹಾರಾಷ್ಟ್ರದ ಶೇಕಡಾ 30.2 ರಷ್ಟು ನಾಗರಿಕರು ಬಿಜೆಪಿಗೆ ಒಲವು ತೋರಿದರೆ, ಶೇಕಡಾ 16.2 ರಷ್ಟು ಜನರು ಶಿಂಧೆ ನೇತೃತ್ವದ ಶಿವಸೇನೆಗೆ ಆದ್ಯತೆ ನೀಡುತ್ತಾರೆ ಎಂದು ಜಾಹೀರಾತು ಹೇಳುತ್ತದೆ.
'ಈ ಅಂಕಿಅಂಶಗಳು ಮಹಾರಾಷ್ಟ್ರದ ಒಟ್ಟು 46.4 ಪ್ರತಿಶತದಷ್ಟು ಜನರು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಯನ್ನು ನಂಬಿದ್ದಾರೆ ಎಂದು ತೋರಿಸುತ್ತದೆ' ಎಂದು ಜಾಹೀರಾತು ಹೇಳಿದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಡಿದ ಸಮೀಕ್ಷೆಗಳ ಪ್ರಕಾರ, ಮಹಾರಾಷ್ಟ್ರದ ಶೇ 26.1 ಜನರು ಏಕನಾಥ್ ಶಿಂಧೆ ಮತ್ತು ಶೇ 23.2 ಜನರು ದೇವೇಂದ್ರ ಫಡ್ನವಿಸ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂಬುದು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಜಾಹೀರಾತಿನ ಪ್ರಕಾರ, ಮಹಾರಾಷ್ಟ್ರದ ಶೇಕಡಾ 49.3 ರಷ್ಟು ಜನರು ತಮ್ಮ ರಾಜ್ಯದ ನಾಯಕತ್ವಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಬಲವಾದ ಮೈತ್ರಿಯನ್ನು ನೋಡಲು ಬಯಸುತ್ತಾರೆ.
ಜಾಹೀರಾತಿನ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ಮುಖ್ಯ ವಕ್ತಾರ ಸಂಜಯ್ ರಾವುತ್, 'ಬಾಳಾಸಾಹೇಬ್ ಠಾಕ್ರೆ ಅವರ ಯಾವುದೇ ಉಲ್ಲೇಖ ಅಥವಾ ಫೋಟೋ ಇಲ್ಲ. ಎಲ್ಲಿ ಉಲ್ಲೇಖಿಸಲಾಗಿದೆ? ಈ ಸಮೀಕ್ಷೆ ಎಲ್ಲಿ ನಡೆದಿದೆ? ಇದು ಮಹಾರಾಷ್ಟ್ರದಲ್ಲಿ? ಸಿಎಂ ಬಂಗಲೆಯಲ್ಲಿ?. ಅಥವಾ ಗುಜರಾತಿನಲ್ಲಿ?' ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಜನರಿಗೆ ತಿಳಿಯಲಿದೆ ಎಂದು ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಹೇಳಿದ್ದಾರೆ.
'ದೇಶ್ ಮೇ ನರೇಂದ್ರ, ರಾಜ್ಯ ಮೇ ದೇವೇಂದ್ರ' ಎಂಬ ಘೋಷಣೆಯನ್ನು ನೀಡಿದವರು, ನಂತರ ಭಾರವಾದ ಹೃದಯದಿಂದ ಫಡ್ನವೀಸ್ ಬದಲಿಗೆ ಶಿಂಧೆ ಅವರನ್ನು ಸಿಎಂ ಎಂದು ಒಪ್ಪಿಕೊಂಡರು. ಈ ಜಾಹೀರಾತು ನೋಡಿ ತುಂಬಾ ದುಃಖಿತರಾಗಬೇಕು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಮನರಂಜನೆ ಆರಂಭವಾಗಿದೆ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಟೀಕಿಸಿದ್ದಾರೆ.












Click it and Unblock the Notifications