ಏಕನಾಥ್ ಶಿಂಧೆ ಬಣದ ಶಾಸಕರ ಭದ್ರತೆ ವಾಪಸ್ ಪಡೆದ ದೇವೇಂದ್ರ ಫಡ್ನವೀಸ್!
ಮುಂಬೈ, ಫೆಬ್ರವರಿ 18: ಮಹಾರಾಷ್ಟ್ರ ಮುಖ್ಯಮಂತ್ರಿ, ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಎಲ್ಲರೂ ಸರಿಯಿಲ್ಲವೇ? ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಶಿವಸೇನೆ (ಏಕನಾಥ್ ಶಿಂಧೆ) ಬಣದ 20 ಶಾಸಕರ ಭದ್ರತೆಯನ್ನು ಗೃಹ ಇಲಾಖೆ ವಾಪಸ್ ಪಡೆದಿದೆ. ಗೃಹ ಇಲಾಖೆಗೆ ಸಿಎಂ ದೇವೇಂದ್ರ ಫಡ್ನವೀಸ್ ಮುಖ್ಯಸ್ಥರಾದ ಕಾರಣ ಈ ನಡೆ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಗೃಹ ಸಚಿವಾಲಯ ಶಿವಸೇನೆ (ಏಕನಾಥ್ ಶಿಂಧೆ) ಬಣದ 20 ಶಾಸಕರಿಗೆ ನೀಡಿದ್ದ 'ವೈ' ಕೆಟಗರಿ ಭದ್ರತೆಯನ್ನು ವಾಪಸ್ ಪಡೆದು ಆದೇಶವನ್ನು ಹೊರಡಿಸಿದೆ. ಅಲ್ಲದೇ ಎನ್‌ಸಿಪಿ (ಅಜಿತ್ ಪವಾರ್ ಬಣ)ದ ಶಾಸಕರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.

ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾಗ ಹಲವು ಶಾಸಕರಿಗೆ 'ವೈ'-ಕೆಟಗರಿ ಭದ್ರತೆಯನ್ನು ನೀಡಲಾಗಿತ್ತು. ಹಲವು ಶಾಸಕರು ಸಚಿವರಲ್ಲದಿದ್ದರೂ ಸಹ ಅವರಿಗೆ 'ವೈ' ಶ್ರೇಣಿಯ ಭದ್ರತೆಯನ್ನು ನೀಡಿ, ರಾಜ್ಯದ ಬೊಕ್ಕಸದಿಂದ ಹಣ ಪಾವತಿ ಮಾಡಲಾಗುತ್ತಿದೆ. ಈಗ ರಾಜ್ಯದ ಸಂಪನ್ಮೂಲದ ವೆಚ್ಚ ಕಡಿಮೆ ಮಾಡಲು ಭದ್ರತೆ ವಾಪಸ್ ಪಡೆಯಲಾಗಿದೆ ಎಂಬ ಸುದ್ದಿಗಳು ಹಬ್ಬಿದೆ.
2022ರಿಂದ ಭದ್ರತೆ: 2022ರಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಸರ್ಕಾರ ಪತನಗೊಂಡು ಮಹಾಯತಿ ಮೈತ್ರಿಕೂಟ ರಚನೆಗೊಂಡಿತು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರು. ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾದರು. ಆಗ ಶಿಂಧೆ ಹಲವು ಶಾಸಕರಿಗೆ 'ವೈ' ಶ್ರೇಣಿಯ ಭದ್ರತೆಯನ್ನು ನೀಡಿದರು. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಮಹಾರಾಷ್ಟ್ರದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ)ದ ಮಹಾಯತಿ ಮೈತ್ರಿಕೂಟ 230 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ ಏಕಾಂಗಿಯಾಗಿ 132 ಸೀಟುಗಳಲ್ಲಿ ಗೆದ್ದಿದ್ದು, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದಾರೆ.
ಶಿವಸೇನೆ 57, ಎನ್‌ಸಿಪಿ 41 ಸೀಟುಗಳನ್ನು ಹೊಂದಿದ್ದು, 'ಮಹಾಯತಿ' ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳು. ಗೃಹ ಖಾತೆ ತಮಗೆ ಬೇಕು ಎಂದು ಶಿಂಧೆ ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿ ಅದಕ್ಕೆ ಒಪ್ಪಿಲ್ಲ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಳಿಯೇ ಗೃಹ ಖಾತೆ ಇದೆ.
ರಾಜಕೀಯ ವಲಯದ ಮಾಹಿತಿ ಪ್ರಕಾರ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಏಕನಾಥ್ ಶಿಂಧೆ ನಡುವೆ ಎಲ್ಲವೂ ಸರಿಯಿಲ್ಲ. ಹಲವು ವಿಚಾರಗಳಿಗೆ ಜಟಾಪಟಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇಂತಹ ಸಮಯದಲ್ಲಿಯೇ ಶಾಸಕರಿಗೆ ನೀಡಿದ್ದ ವೈ-ಶ್ರೇಣಿಯ ಭದ್ರತೆ ವಾಪಸ್ ಪಡೆಯಲಾಗಿದೆ.
ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಸಂಸದೆ ಪ್ರಿಯಾಂಕಾ ಚರ್ತುವೇದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, "ಮಹಾಯತಿ ಮೈತ್ರಿಕೂಟ ಪ್ರೇಮಿಗಳ ದಿನಾಚರಣೆ ತಿಂಗಳು ಆಚರಿಸುತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ ತಿಂಗಳು ದಾವೋಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಎನ್‌ಸಿಪಿ (ಅಜಿತ್ ಪವಾರ್ ಬಣ)ದ ನಾಯಕರ ಜೊತೆ ಇದಕ್ಕೂ ಮೊದಲು ಅವರು ಚರ್ಚೆ ನಡೆಸಿದ್ದರು. ಆದರೆ ಏಕನಾಥ್ ಶಿಂಧೆ ಜೊತೆ ಯಾವುದೇ ಸಭೆ ನಡೆಸಿರಲಿಲ್ಲ. ಈ ಕುರಿತು ಭಾರೀ ಚರ್ಚೆಯಾಗಿತ್ತು.












Click it and Unblock the Notifications