Maharashtra Election 2024: ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು, ಬಿಜೆಪಿ ಸಿಎಂ ಘೋಷಣೆ ಮತ್ತೆ ಮುಂದೂಡಿಕೆ

ಮುಂಬೈ, ಡಿಸೆಂಬರ್ 03: ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಕಾರಣ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ನೇತೃತ್ವದ 'ಮಹಾಯತಿ' ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಬೇಕಿದೆ. ಈಗಾಗಲೇ ಡಿಸೆಂಬರ್ 5ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಘೋಷಣೆ ಮಾಡಲಾಗಿದೆ.

ಮಂಗಳವಾರ ಏಕನಾಥ್ ಶಿಂಧೆ ಥಾಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳ ಕಾಲ ವಿಶ್ರಾಂತಿಯನ್ನು ಪಡೆದರೂ ಸಹ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ. ಆದ್ದರಿಂದ ಅವರು ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

Eknath Shinde In Hospital Mahayuti To Name CM On December 4

ಮುಂಬೈನ ಬಿಜೆಪಿ ಕಛೇರಿಯಲ್ಲಿ ಬೆಳಗ್ಗೆ ಶಾಸಕರ ಸಭೆ ನಡೆದಿತ್ತು. ಸಂಜೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲಾದ ಕಾರಣ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಆದ್ದರಿಂದ ಇಂದು ಹೊಸ ಸಿಎಂ ಘೋಷಣೆ ಆಗುವುದಿಲ್ಲ.

ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಏಕನಾಥ್ ಶಿಂಧೆ ಆರೋಗ್ಯ ವಿಚಾರಿಸಿದರು. ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು. ಶುಕ್ರವಾರ ಏಕನಾಥ್ ಶಿಂಧೆ ಶೀತ, ಜ್ವರದ ಕಾರಣ ಮಹಾಯತಿ ಮೈತ್ರಿಕೂಟದ ಸಭೆಯನ್ನು ಬಿಟ್ಟು ಸಾತಾರಾ ಪ್ರವಾಸ ಕೈಗೊಂಡಿದ್ದರು. ತವರು ಜಿಲ್ಲೆಯಲ್ಲಿ ಎರಡು ದಿನ ವಿಶ್ರಾಂತಿ ಪಡೆದಿದ್ದ ಅವರು, ಭಾನುವಾರ ಸಂಜೆ ಮುಂಬೈಗೆ ವಾಪಸ್ ಆಗಿದ್ದರು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಜೊತೆ ಶಿವಸೇನೆ (ಏಕನಾಥ್ ಶಿಂಧೆ ಬಣ)ದ ಸಭೆಯೂ ಇಂದು ಸಂಜೆ ನಡೆಯಬೇಕಿತ್ತು. ಆದರೆ ಈಗ ಏಕನಾಥ್ ಶಿಂಧೆ ಅನಾರೋಗ್ಯದ ಕಾರಣ ಎರಡೂ ಸಭೆಯೂ ಮುಂದೂಡಿಕೆಯಾಗಿದೆ. ಮತ್ತೊಂದು ಕಡೆ ಮುಂಬೈನ ಆಜಾದ್ ಮೈದಾನದಲ್ಲಿ ಡಿಸೆಂಬರ್ 5ರಂದು ನಡೆಯುವ ಪ್ರಮಾಣ ವಚನ ಸಮಾರಂಭದ ತಯಾರಿ ಆರಂಭವಾಗಿದೆ.

ಬಿಜೆಪಿ ವರಿಷ್ಠರು ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರನ್ನು ನೇಮಕ ಮಾಡಿದೆ. ನಿರ್ಮಲಾ ಸೀತಾರಾಮನ್ ಸಂಸತ್ ಕಲಾಪದಲ್ಲಿದ್ದು, ಸಂಜೆ ಮುಂಬೈಗೆ ಆಗಮಿಸಬೇಕಿತ್ತು.

ನವೆಂಬರ್ 23ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ. ಆದರೆ 10 ದಿನಗಳು ಕಳೆದರೂ ಸಹ ಇನ್ನೂ ಹೊಸ ಸರ್ಕಾರ ರಚನೆಯಾಗಿಲ್ಲ.

ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟವನ್ನು ನೀಡಲಾಗಿದೆ. 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಬಿಜೆಪಿ ಸರ್ಕಾರವನ್ನು ರಚಿಸಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿವೆ.

ಶಿವಸೇನೆ ನಾಯಕ ಏಕನಾಥ್ ಶಿಂಧೆ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಿಜೆಪಿ ಘೋಷಣೆ ಮಾಡುವ ಮುಖ್ಯಮಂತ್ರಿ ಅಭ್ಯರ್ಥಿಗೆ ತಮ್ಮ ಬೆಂಬಲವಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಎರಡೂ ಪಕ್ಷಗಳಿಗೆ ಯಾವ ಖಾತೆ ಬೇಕು? ಎಂಬ ಕುರಿತು ಇನ್ನೂ ಮಹಾಯತಿ ಮೈತ್ರಿಕೂಟದ ಸಭೆ ನಡೆಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+