ನ್ಯಾಷನಲ್ ಹೆರಾಲ್ಡ್ ಪ್ರಕರಣ; ಮಂಗಳವಾರವೂ ರಾಹುಲ್ ಗಾಂಧಿ ವಿಚಾರಣೆ
ನವದೆಹಲಿ, ಜೂನ್ 13: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ಪೂರ್ಣಗೊಂಡಿದೆ. ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಮತ್ತೆ ಕರೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ನೀಡಿತ್ತು. ರಾಹುಲ್ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆಯನ್ನು ವಿಚಾರಣಾ ನ್ಯಾಯಾಲಯವು ಗಮನಕ್ಕೆ ತಂದ ನಂತರ ಇತ್ತೀಚೆಗೆ ಏಜೆನ್ಸಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಸ್ವಾಧೀನದಲ್ಲಿ ವಂಚನೆ, ಪಿತೂರಿ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪಗಳನ್ನು ಈ ಪ್ರಕರಣವು ಒಳಗೊಂಡಿದೆ.

ಜಾರಿ ನಿರ್ದೇಶನಾಲಯದ ವಿಚಾರಣೆಯು ಆಡಳಿತಾರೂಢ ಬಿಜೆಪಿಯ ಸೇಡಿನ ರಾಜಕಾರಣದ ಭಾಗ ಎಂದು ಕಾಂಗ್ರೆಸ್ ಕೆಂಡ ಕಾರಿದೆ. ಕಾಂಗ್ರೆಸ್ ನಾಯಕರು ವಿವಿಧ ರಾಜ್ಯಗಳಲ್ಲಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ, ರಾಹುಲ್ ವಿಚಾರಣೆ: ಕಾಂಗ್ರೆಸ್ ಬೃಹತ್ ಪ್ರತಿಭಟನೆಯ ವೇಳೆ ಪೊಲೀಸ್ ದಬ್ಬಾಳಿಕೆ ನಡೆದಿದೆ ಎಂಬ ಆರೋಪವೂ ಇದೆ. ಇದರ ನಡುವೆಯೇ ರಾಹುಲ್ ಗಾಂಧಿ ವಿಚಾರಣೆಯನ್ನು ಸೋಮವಾರ ಬೆಳಿಗ್ಗೆ ಪ್ರಾರಂಭಿಸಲಾಗಿತ್ತು. ದೇಶಾದ್ಯಂತ ಜಾರಿ ನಿರ್ದೇಶನಾಲಯದ ಕಚೇರಿಗಳ ಹೊರಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿ ಧಿಕ್ಕಾರ ಕೂಗಿದರು.
ದೆಹಲಿಯಲ್ಲಿ ಪಕ್ಷದ ಸಂಸದರು ಸೇರಿದಂತೆ ಹಿರಿಯ ನಾಯಕರು ರಾಹುಲ್ ಗಾಂಧಿಯವರೊಂದಿಗೆ ಪಕ್ಷದ ಕಚೇರಿಯಿಂದ ಜಾರಿ ನಿರ್ದೇಶನಾಲಯದ ಕಚೇರಿ ತನಕ ಮೆರವಣಿಗೆ ನಡೆಸಿದರು. ಭಾನುವಾರ ಸಂಜೆಯೇ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದ ದೆಹಲಿ ಪೊಲೀಸರು ಸೋಮವಾರ ಮುಂಜಾನೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಸುತ್ತುವರಿದು ಅವರನ್ನು ತಡೆದರು.
ಇಡಿ ಕಚೇರಿಗೆ ಪೊಲೀಸರು ಬ್ಯಾರಿಕೇಡ್ ಹಾಕುವುದರೊಂದಿಗೆ ರಾಹುಲ್ ಗಾಂಧಿ ಜೊತೆಗೆ ಬಂದಿದ್ದ ನಾಯಕರನ್ನು ನಿಯಂತ್ರಿಸಲು ಕ್ರಮ ತೆಗೆದುಕೊಂಡಿದ್ದರು. ರಾಹುಲ್ ಗಾಂಧಿ ಒಳಗೆ ಹೋದ ನಂತರ ಬ್ಯಾರಿಕೇಡ್ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿಭಟನೆಗೆ ಕುಳಿತರು.
ಖಾಕಿ ತೋರಿತಾ ದರ್ಪ?: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, ಕಾಂಗ್ರೆಸ್ ವಕ್ತಾರ ಅಧೀರ್ ರಂಜನ್ ಚೌಧರಿ, ಪಕ್ಷದ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ದೀಪೇಂದರ್ ಹೂಡಾ ಮತ್ತು ಜೈರಾಮ್ ರಮೇಶ್ ಸೇರಿದಂತೆ ಅನೇಕ ನಾಯಕರನ್ನು ಬಂಧಿಸಿ ಬಸ್‌ಗಳಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಳ್ಳಿರುವ ವಿಡಿಯೋಗಳು ವೈರಲ್ ಆಗಿವೆ. ವೇಣುಗೋಪಾಲ್ ಅವರನ್ನುಎತ್ತಿಕೊಂಡು ಹೋಗಿ ಬಸ್ಸಿನೊಳಗೆ ಬಿಡಲಾಯಿತು. ದೆಹಲಿ ಪೊಲೀಸರು ತಳ್ಳಿದ ನಂತರ ಚಿದಂಬರಂ ಪಕ್ಕೆಲುಬು ಮುರಿದಿದೆ ಎಂದು ಹಿರಿಯ ನಾಯಕ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ; ನ್ಯಾಷನಲ್ ಹೆರಾಲ್ಡ್ ಇತರ ಪತ್ರಿಕೆಗಳಿಗೆ ಪೈಪೋಟಿ ನೀಡುವುದುಕ್ಕೆ ಸಾಧ್ಯವಾಗದೇ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದೇ ತೀವ್ರ ವೈಫಲ್ಯವನ್ನು ಅನುಭವಿಸಿತು. ಇದರ ಪರಿಣಾಮವಾಗಿ ಜಾಹೀರಾತು ಆದಾಯದ ಕೊರತೆ ಸೃಷ್ಟಿಯಾಯಿತು. ಕಳೆದ 2008ರಲ್ಲಿ ಮೂರೂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಘೋಷಿಸಿತು. 29.09.2010ರ ವೇಳೆಗೆ ಷೇರು ಹೋಲ್ಡರುಗಳ ಸಂಖ್ಯೆ 1057ಕ್ಕೆ ಇಳಿದಿತ್ತು. ಆ ಸಮಯದಲ್ಲಿ ಸಂಸ್ಥೆಯು 90.25 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು.
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು ಎಂದು ಹೇಳಲಾಗುತ್ತಿದೆ.












Click it and Unblock the Notifications