ಅಕ್ರಮ ಹಣ ವರ್ಗಾವಣೆ ಪ್ರಕರಣ: ಎಎಪಿ ಸಂಸದ ಸಂಜಯ್ ಸಿಂಗ್‌ರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ
ದೆಹಲಿಯ ಅಬಕಾರಿ ನೀತಿ 2021-22 ರಲ್ಲಿನ ಅಕ್ರಮಗಳ ಹಣ ವರ್ಗಾವಣೆಯ ತನಿಖೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿತರಾಗಿರುವ ಸಿಂಗ್, ಕೆಲವು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕವಾದ ಈಗ ರದ್ದಾದ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಂಗ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿತ್ತು.

ಈ ವರ್ಷದ ಮೇ ತಿಂಗಳಲ್ಲಿ, ಬಂಧಿತ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಲ್ಲಿಸಲಾದ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ದಿನೇಶ್ ಅರೋರಾ ಎಂಬ ರೆಸ್ಟೋರೆಂಟ್ ಮಾಲಿಕ ಸಂಜಯ್ ಸಿಂಗ್ ಮತ್ತು ಸಿಸೋಡಿಯಾ ಇಬ್ಬರಿಗೂ ಅತ್ಯಂತ ನಿಕಟವಾಗಿದ್ದರು ಎಂದು ಹೇಳಿದೆ.
ಜುಲೈನಲ್ಲಿ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು, ಅವರು ಪ್ರಕರಣದಲ್ಲಿ ಪ್ರಮುಖ ವ್ಯಕ್ತಿ ಎಂದು ಹೇಳಿದ್ದರು. 2020 ರಲ್ಲಿ ಅರೋರಾ ಅವರು ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ ಮತ್ತು ಎಎಪಿಗೆ ಹಣದ ಅವಶ್ಯಕತೆ ಇದೆ ಎಂದು ಎಎಪಿ ಸಂಸದರಿಂದ ಕರೆ ಬಂದಿದೆ ಎಂದು ಒಪ್ಪಿಕೊಂಡಿರುವುದಾಗಿ ಇಡಿ ಹೇಳಿದೆ.
ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, "ಕಳೆದ ವರ್ಷದಿಂದ ಆಪಾದಿತ ಮದ್ಯ ಹಗರಣದ ಬಗ್ಗೆ ತನಿಖೆ ಮಾಡುತ್ತಿದೆ ಆದರೆ ಇನ್ನೂ ಏನೂ ಪತ್ತೆಯಾಗಿಲ್ಲ. ಸಂಜಯ್ ಸಿಂಗ್ ನಿವಾಸದಲ್ಲಿ ಏನೂ ಸಿಗುವುದಿಲ್ಲ. ಯಾರಾದರೂ ಸೋಲುವ ಭಯದಲ್ಲಿದ್ದಾಗ ನೋಡುತ್ತಿರುವಾಗ, ಅವರು ಹತಾಶ ಕ್ರಮಗಳನ್ನು ಆಶ್ರಯಿಸುತ್ತಾರೆ. ಅದೇ ಈಗ ಆಗುತ್ತಿದೆ". ಎಂದು ಕಿಡಿ ಕಾರಿದ್ದರು.
ಕೇಜ್ರಿವಾಲ್ ಕಿಂಗ್‌ಪಿನ್ ಎಂದ ಬಿಜೆಪಿ
ಮತ್ತೊಂದೆಡೆ, ಭಾರತೀಯ ಜನತಾ ಪಕ್ಷವು ಕೇಜ್ರಿವಾಲ್ ಅವರನ್ನು ಈ ಪ್ರಕರಣದ 'ಕಿಂಗ್‌ಪಿನ್' ಎಂದು ಗಂಭೀರ ಆರೋಪ ಮಾಡಿದೆ. "ಮದ್ಯ ಹಗರಣದಲ್ಲಿ ಯಾರಾದರು ಕಿಂಗ್‌ಪಿನ್ ಇದ್ದರೆ ಅದು ಅರವಿಂದ್ ಕೇಜ್ರಿವಾಲ್ ಎಂದು ಭಾರತ ಮತ್ತು ದೆಹಲಿಯ ಜನತೆಗೆ ತಿಳಿದಿದೆ. ಕೇಜ್ರಿವಾಲ್ ಅವರ ಸೂಚನೆಗಳ ಮೇಲೆ ದೆಹಲಿಯಲ್ಲಿ ಮದ್ಯ ಹಗರಣ ನಡೆದಿದೆ. ದೆಹಲಿ ಸಿಎಂ ಕೇಜ್ರಿವಾಲ್ ಮನೆಯಲ್ಲಿ ಸಭೆ ನಡೆದಿದೆ ಆರೋಪಿ ಉದ್ಯಮಿ ದಿನೇಶ್ ಅರೋರಾ ಒಪ್ಪಿಕೊಂಡಿದ್ದಾರೆ" ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ಸಂಜಯ್ ಸಿಂಗ್ ಅವರು ಆಮ್ ಆದ್ಮಿ ಪಕ್ಷಕ್ಕೆ ₹32 ಲಕ್ಷ ನೀಡುವಂತೆ ಹೇಳಿದರು. ಸಂಸದರೊಬ್ಬರು ಸಿಎಂ ನಿವಾಸದಲ್ಲಿ ಕುಳಿತು ವಸೂಲಿ ಮಾಡುತ್ತಾರೆ. 32 ಲಕ್ಷ ಹಣವನ್ನು ಚೆಕ್ ಮೂಲಕ ನೀಡಲಾಗಿದೆ. ಕೋಟಿಗಟ್ಟಲೆ ಹಣ ನೀಡಿರಬಹುದು, ಅದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಭಾಟಿಯಾ ಹೇಳಿದರು.












Click it and Unblock the Notifications