Assembly Elections 2023 : ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಚುನಾವಣೆ ದಿನಾಂಕ ಘೋಷಣೆ
ನವದೆಹಲಿ, ಜನವರಿ 18; ಕೇಂದ್ರ ಚುನಾವಣಾ ಆಯೋಗ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 2023ನೇ ವರ್ಷದಲ್ಲಿ ಮೊದಲು ನಡೆಯುತ್ತಿರುವ ವಿಧಾನಸಭೆ ಚುನಾವಣೆ ಇದಾಗಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಯ ಅವಧಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22ರಂದು ಅಂತ್ಯಗೊಳ್ಳಲಿದೆ ಎಂದು ಹೇಳಿದರು.

ತ್ರಿಪುರ ರಾಜ್ಯದಲ್ಲಿ ಫೆಬ್ರವರಿ 16, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮೂರು ರಾಜ್ಯಗಳ ಒಟ್ಟು ಮತದಾರರ ಸಂಖ್ಯೆ 62.8 ಲಕ್ಷ ಆಗಿದೆ. ನಾಗಾಲ್ಯಾಂಡ್ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 13,09,651 ಆಗಿದೆ. ಇವರಲ್ಲಿ ಪುರುಷರು 6,53,616, ಮಹಿಳೆಯರು 6,56,035. ಮೊದಲ ಬಾರಿಯ ಮತದಾರರು 30,049.
ಮೇಘಾಲಯ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 21,61,129. ಪುರುಷರು 10,68,801, ಮಹಿಳೆಯರು 10,92,396. ಹೊಸ ಮತದಾರರು 81,443.
ತ್ರಿಪುರ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 28,13,478. ಪುರುಷರು 14,14,576. ಮಹಿಳೆಯರು 13,98,825. ಹೊಸ ಮತದಾರರು 65,044.
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರದಲ್ಲಿ ಕೆಲವು ಮತಗಟ್ಟೆಗಳನ್ನು ಮಹಿಳೆಯರು ಮತ್ತು ದಿವ್ಯಾಂಗರು ನಿರ್ವಹಣೆ ಮಾಡಲಿದ್ದಾರೆ. ಮೂರು ರಾಜ್ಯಗಳು ಸೇರಿ 376 ಮತಗಟ್ಟೆಗಳನ್ನು ಮಹಿಳೆಯರು ಮತ್ತು ದಿವ್ಯಾಂಗರು ನಿರ್ವಹಣೆ ಮಾಡಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ತಂಡ ಮೂರು ರಾಜ್ಯಗಳಿಗೆ ಇತ್ತೀಚೆಗೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ಪಡೆದಿದೆ. ರಾಜ್ಯ ಚುನಾವಣಾ ಆಯೋಗಗಳು ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದು ಆಯೋಗ ಹೇಳಿದೆ.
ತ್ರಿಪುರ ರಾಜ್ಯ; ತ್ರಿಪುರ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 33, ಐಪಿಎಫ್‌ಟಿ 4, ಸಿಪಿಐ (ಎಂ) 15, ಕಾಂಗ್ರೆಸ್ 1 ಸ್ಥಾನದಲ್ಲಿ ಜಯಗಳಿಸಿತ್ತು. ಬುಡಕಟ್ಟು ಸಮುದಾಯಗಳು 20 ಸ್ಥಾನಗಳಲ್ಲಿ ಪ್ರಭಾವ ಹೊಂದಿವೆ. ಡಾ. ಮಾಣಿಕ್ ಷಾ ಸದ್ಯ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ.
ಮೇಘಾಲಯ ರಾಜ್ಯ; ಮೇಘಾಲಯ ರಾಜ್ಯದಲ್ಲಿಯೂ 60 ವಿಧಾನಸಭಾ ಕ್ಷೇತ್ರಗಳಿವೆ. ಎನ್‌ಪಿಪಿ ಪಕ್ಷ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಜಯಗಳಿಸಿತ್ತು. ರಾಜ್ಯದ ಮುಖ್ಯಮಂತ್ರಿ ಕಾರ್ನಾಡ್ ಸಂಗ್ಮಾ. ಯುಡಿಪಿ 8, ಪಿಡಿಎಫ್ 2, ಬಿಜೆಪಿ 2 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಟಿಎಂಸಿ ರಾಜ್ಯದ ಪ್ರತಿಪಕ್ಷವಾಗಿದ್ದು 9 ಸ್ಥಾನದಲ್ಲಿ ಜಯಗಳಿಸಿದೆ.
ನಾಗಾಲ್ಯಾಂಡ್ ರಾಜ್ಯ; 60 ವಿಧಾನಸಭೆಯ ನಾಗಾಲ್ಯಾಂಡ್‌ನಲ್ಲಿ ಯುಡಿಎ ಮೈತ್ರಿಕೂಟದ ಸರ್ಕಾರವಿದೆ. ಎನ್‌ಡಿಪಿಪಿ, ಬಿಜೆಪಿ, ಎನ್‌ಪಿಎಫ್ ಈ ಮೈತ್ರಿಕೂಟದಲ್ಲಿವೆ. ಎನ್‌ಡಿಪಿಪಿ ಪಕ್ಷದ ನೆಯ್‌ಫಿಯ ರಿಯೊ ಮುಖ್ಯಮಂತ್ರಿ. ರಾಜ್ಯದಲ್ಲಿ ಪ್ರತಿಪಕ್ಷವೇ ಇಲ್ಲ. 21 ಶಾಸಕರು ಯುಡಿಎ ಮೈತ್ರಿಕೂಟ ಸೇರಿದ್ದಾರೆ. 2018ರ ಚುನಾವಣೆಯಲ್ಲಿ ಎನ್‌ಪಿಎಫ್ 26, ಎನ್‌ಡಿಪಿಪಿ 18, ಬಿಜೆಪಿ 12, ಎನ್‌ಪಿಪಿ 2, ಜೆಡಿಯು 1 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಜಯಗಳಿಸಿದ್ದರು.












Click it and Unblock the Notifications