Breaking: ಉತ್ತರ ಕಾರ್ಗಿಲ್‌ನಲ್ಲಿ 4.3 ತೀವ್ರತೆ ಭೂಕಂಪ
ಕಾರ್ಗಿಲ್, ನವೆಂಬರ್ 22: ಕಣಿವೆ ರಾಜ್ಯದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಮಂಗಳವಾರ ಜಮ್ಮು-ಕಾಶ್ಮೀರದಲ್ಲಿ ಭೂಮಿ ಕಂಪಿಸಿರುವ ಅನುಭವ ಆಗಿದೆ. ಉತ್ತರ ಕಾರ್ಗಿಲ್‌ನಲ್ಲಿ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ.
ಮಂಗಳವಾರ ಲಡಾಖ್‌ನಲ್ಲಿ ಉತ್ತರ ಭಾಗದಲ್ಲಿರುವ ಕಾರ್ಗಿಲ್‌ನಲ್ಲಿ ಭೂಕಂಪನ ಸಂಭವಿಸಿದೆ. ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ.
ಭೂಕಂಪನದ ಕೇಂದ್ರ ಬಿಂದು ಲಡಾಖ್‌ನ ಕಾರ್ಗಿಲ್‌ನಿಂದ ಉತ್ತರಕ್ಕೆ 191 ಕಿಲೋ ಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಗೆ ಸೊಲೊಮನ್ ದ್ವೀಪದಲ್ಲಿ ಕಂಪನ:
ಮಂಗಳವಾರ ಬೆಳಗ್ಗೆ 7 ಗಂಟೆ 33 ನಿಮಿಷಕ್ಕೆ ಸೊಲೊಮನ್ ದ್ವೀಪಗಳ ಮಲಂಗೋ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾದಕದಲ್ಲಿ ಭೂಕಂಪನದ ತೀವ್ರತೆಯು 7.0ರಷ್ಟು ದಾಖಲಾಗಿತ್ತು. 7.0 ತೀವ್ರತೆಯ ಭೂಕಂಪದ ನಂತರ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಪೆಸಿಫಿಕ್ ಎಚ್ಚರಿಕೆ ಕೇಂದ್ರದಿಂದ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಇಂಡೋನೆಷ್ಯಾದಲ್ಲಿ ಭೂಕಂಪಕ್ಕೆ 162 ಮಂದಿ ಬಲಿ:
ಸೊಲೊಮನ್ ದ್ವೀಪದಲ್ಲಿ ಇದೀಗ ಸುನಾಮಿ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ಇಂಡೋನೆಷ್ಯಾದಲ್ಲಿ ಅದೇ ಪ್ರಕೃತಿ ವಿಕೋಪವು ಮರಣ ಮೃದಂಗವನ್ನು ಬಾರಿಸಿದೆ. ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು 162 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿರುವವರ ಹುಡುಕಾಟ ಕಾರ್ಯ ಮುಂದುವರೆದಿದೆ.
ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಪಶ್ಚಿಮ ಜಾವಾದ ಪರ್ವತದ ಸಿಯಾಂಜೂರ್ ಪಟ್ಟಣದ ಸಮೀಪ ಸಂಭವಿಸಿದೆ. ಈ ಪ್ರದೇಶದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಭೂಕಂಪದ ಬಳಿಕ, ಪಶ್ಚಿಮ ಜಾವಾ ಗವರ್ನರ್ ರಿದ್ವಾನ್ ಕಾಮಿಲ್ ಇನ್ಸ್ಟಾಗ್ರಾಮ್‌ನಲ್ಲಿ 162 ಜನರು ಸಾವನ್ನಪ್ಪಿದ್ದಾರೆ ಮತ್ತು 326 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ರಿದ್ವಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.












Click it and Unblock the Notifications