ಭಾರತೀಯ ಮಾರುಕಟ್ಟೆಯಲ್ಲಿ DRDO ಕೊವಿಡ್-19 ಔಷಧಿ ಲಭ್ಯ
ನವದೆಹಲಿ, ಮೇ 26: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಔಷಧಿ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಗುರುವಾರದಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಮೇ 27ರಂದು ಡಾಕ್ಟರ್ ರೆಡ್ಡೀಸ್ ವೈದ್ಯಕೀಯ ಪ್ರಯೋಗಾಲಯವು 10,000 ಪ್ಯಾಕೆಟ್ ಔಷಧೀಯ ಪುಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಮಾಹಿತಿ ನೀಡಿದೆ.
ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಬಹುಪಾಲು ರೋಗಿಗಳಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆ ಜೀವಕೋಶ ಪ್ರವೇಶಿಸುವ 2ಡಿಜಿ ಔಷಧಿಯು ರೋಗಾಣುವಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ನೋಡಿಕೊಳ್ಳುವ ಶಕ್ತಿ ಈ ಔಷಧಿಗಿದೆ ಎಂದು ಸಂಸ್ಥೆ ಹೇಳಿದೆ. 2ಡಿಜಿ ಔಷಧಿ ಸಹಾಯದಿಂದ ಕೊವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2ಡಿಜಿ ಔಷಧಿಗೆ ಮೇ 15ರಂದು ಅನುಮೋದನೆ:
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಗೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಮೇ 15ರಂದು ಅನುಮೋದನೆ ನೀಡಿತ್ತು.
2ಡಿಜಿ ಔಷಧಿಯ ಬೆಲೆ ಇನ್ನೂ ನಿಗದಿಯಾಗಿಲ್ಲ:
ಭಾರತದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧಿಯ ಬೆಲೆ ಎಷ್ಟು ಎಂಬುದನ್ನು ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ನ್ಯೂಸ್ 18 ಮೂಲಗಳ ಪ್ರಕಾರ, ರೆಡ್ಡೀಸ್ ಪ್ರಯೋಗಾಲಯ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಔಷಧಿಗೆ 500-600 ರೂಪಾಯಿ ನಿಗದಿಗೊಳಿಸುವ ಸಾಧ್ಯತೆಯಿದೆ. ಪ್ರಸ್ತುತ ಆಸ್ಪತ್ರೆಗಳ ಅಗತ್ಯತೆಗೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಔಷಧಿ ಉತ್ಪಾದನೆ ಮಾಡಲಾಗುತ್ತಿದೆ. ಈ ಔಷಧಿ ಉತ್ಪಾದನೆ ರೀತಿ ತುಂಬಾ ಸುಲಭವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆಟುಕಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications