ಆರೆಸ್ಸೆಸ್ ಗೆ ಪ್ರಣಬ್ ಕನ್ನಡಿ ಹಿಡಿದಿದ್ದಾರೆ: ಕಾಂಗ್ರೆಸ್ ವಿಶ್ಲೇಷಣೆ
ನವದೆಹಲಿ, ಜೂನ್ 7: "ಆರ್.ಎಸ್.ಎಸ್ ಕೇಂದ್ರ ಕಚೇರಿಗೆ ಇಂದು ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ನೀಡಿದ ಭೇಟಿ ವ್ಯಾಪಕವಾದ ಚರ್ಚೆಯನ್ನು ಹುಟ್ಟುಹಾಕಿದೆ. ಇವತ್ತು ಪ್ರಣಬ್ ಮುಖರ್ಜಿ ತಮ್ಮ ಕೇಂದ್ರ ಕಚೇರಿಯಲ್ಲೇ ಆರ್.ಎಸ್.ಎಸ್ ಗೆ ಕನ್ನಡಿಯನ್ನು ತೋರಿಸಿದ್ದಾರೆ. ಅವರು ಬಹುತ್ವ, ಸಹಿಷ್ಣುತೆ ಮತ್ತು ಬಹುಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ," ಎಂದು ಕಾಂಗ್ರೆಸ್ ವಿಶ್ಲೇಷಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ, "ಅತಿಥಿಯಾಗಿ ಪ್ರಣಬ್ ಮುಖರ್ಜಿ ಹೇಳಿದ ವಿಚಾರಗಳು ಚರ್ಚೆಯಾಗಬೇಕು ಮತ್ತು ಪ್ರಾಮುಖ್ಯತೆಯನ್ನು ಪಡೆಯಬೇಕು. ಅದಕ್ಕೆ ಬದಲಾಗಿ ಔಪಚಾರಿಕವಾಗಿ ನಡೆದ ಕ್ರಮಗಳು ಚರ್ಚೆಯಾಗಬಾರದು," ಎಂದು ಅವರು ಹೇಳಿದ್ದಾರೆ. ಕೆಬಿ ಹೆಡಗೇವಾರ್ 'ತಾಯಿ ಭಾರತಾಂಬೆಯ ಮಹಾನ್ ಮಗ' ಎಂದು ಅತಿಥಿಗಳ ಪುಸ್ತಕದಲ್ಲಿ ಮುಖರ್ಜಿ ಬರೆದಿದ್ದರ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

"ಪ್ರಣಬ್ ಮುಖರ್ಜಿ ಅವರು ಭಾರತದ ಇತಿಹಾಸವನ್ನು ಆರ್.ಎಸ್.ಎಸ್ ಗೆ ನೆನಪಿಸಿದ್ದಾರೆ. ಅವರು ಭಾರತದ ಸೌಂದರ್ಯವು ಭಿನ್ನಾಭಿಪ್ರಾಯಗಳು, ಧರ್ಮಗಳು ಮತ್ತು ಭಾಷೆಗಳ ಬಗ್ಗೆ ಸಹಿಷ್ಣುತೆ ಹೊಂದುವುದರಲ್ಲಿದೆ ಎಂಬುದನ್ನು ಆರ್.ಎಸ್.ಎಸ್ ಗೆ ಕಲಿಸಿದರು. ಆರ್.ಎಸ್.ಎಸ್ ಇದನ್ನು ಕೇಳಲು ಸಿದ್ಧವಾಗಿದೆಯೇ?," ಎಂದು ಪ್ರಶ್ನಿಸಿದ್ದಾರೆ.
ಪ್ರಣಬ್ ಮುಖರ್ಜಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, "ಆರ್.ಎಸ್.ಎಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಏರಿದ್ದಾಗಲೀ ಅಥವಾ ರಾಷ್ಟ್ರ ಗೀತೆ ಹಾಡಿದ್ದಾಗಲೀ ಎಂದೂ ನಾವು ನೋಡಿಲ್ಲ. ಪ್ರಣಬ್ ಮುಖರ್ಜಿ ಅವರ ಅಭಿವ್ಯಕ್ತಿ ಮತ್ತು ವಿಷಯವನ್ನು ಮನವರಿಕೆ ಮಾಡಿಕೊಡುವ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹವೂ ಇಲ್ಲ. ಆದರೆ ಮಾತುಕತೆಗೆ ಇನ್ನೊಂದು ಕಡೆಯವರು ಕೇಳಬೇಕು ಮತ್ತು ಬದಲಾಗಬೇಕು. ಆರ್.ಎಸ್.ಎಸ್ ಅದನ್ನು ಮಾಡುತ್ತದೆ ಎಂದು ನಂಬೋಣ," ಎಂದು ಹೇಳಿದ್ದಾರೆ.











Click it and Unblock the Notifications