ಸ್ಮಾರ್ಟ್‌ಪೋನ್‌ಗಳಿಗೆ ಅಂಟಿಕೊಂಡಿದ್ದಿರಾ, ಕತ್ತಲೆಯಲ್ಲೂ ಬಿಡುವುದಿಲ್ಲವೇ? ವೈದ್ಯರು ಹೇಳುವುದು ಒಮ್ಮೆ ಕೇಳಿ
ಜೀವನದ ಭಾಗವೇ ಆಗಿರುವ ಸ್ಮಾರ್ಟ್‌ಫೋನ್ ಸಹಾಯದ ಜೊತೆಗೆ ಸಂಕಷ್ಟವನ್ನು ತರುತ್ತದೆ. ನಮ್ಮ ಆರೋಗ್ಯದ ಮೇಲೆ, ನಮ್ಮ ದಿನಚರಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಬಗ್ಗೆ ವೈದ್ಯರು ಹೇಳಿದ್ದು ಹೀಗೆ.
ಹೈದರಾಬಾದ್, ಫೆಬ್ರವರಿ. 06: ಈಗಂತೂ ಮೊಬೈಲ್ ಇಲ್ಲದೆ ದಿನ ಸಾಗುವುದೇ ಇಲ್ಲ. ಅದರಲ್ಲೂ ಸ್ಮಾರ್ಟ್‌ಪೋನ್‌ಗಳಿಲ್ಲದ ಕೈಗಳಿಲ್ಲ. ಮಕ್ಕಳಿಂದ ವಯಸ್ಸಾದವರವರೆಗೂ ಎಲ್ಲರ ಬಳಿ ಸ್ಮಾರ್ಟ್‌ಪೋನ್. ಆದರೆ, ಇವುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಚಿಂತಿಸಿದ್ದೇವಾ...?
ಖಂಡಿತ ಇಲ್ಲ. ನಮ್ಮ ದೈನಂದಿನ ದಿನಚರಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಒಂದು ಸಣ್ಣ ಚಟ, ಅಭ್ಯಾಸ ತಕ್ಷಣವೇ ಯಾವ ಕೆಡುಕು ಮಾಡದಿದ್ದರೂ, ನಿಧಾನವಾಗಿ ಅದು ಬೀರುವ ಪ್ರಭಾವ ವಿನಾಶಕಾರಿಯಾಗಿರುತ್ತದೆ.
ಇಂತಹದ್ದೆ ಒಂದು ಘಟನೆಯನ್ನು ಹೈದರಾಬಾದ್‌ನ ಡಾ. ಸುಧೀರ್ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿದರೆ ಸ್ವಲ್ಪ ಭಯವಾಗಬಹುದು. ಆದರೆ ತಂತ್ರಜ್ಞಾನವು ನಮ್ಮ ಪರಿಸರದ ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪಿರುವ ಈ ಡಿಜಿಟಲ್ ಯುಗದಲ್ಲಿ ಇದು ಸಾಮಾನ್ಯ ಜನರ ಕಣ್ಣು ತೆರೆಸುತ್ತದೆ.

ಮಹಿಳೆಯ ದೃಷ್ಟಿ ಕಸಿದುಕೊಂಡ ಸ್ಮಾರ್ಟ್‌ಪೋನ್ ಬಳಕೆ
ತಮ್ಮ ಟ್ವಿಟರ್ ಥ್ರೆಡ್‌ನಲ್ಲಿ ಡಾ.ಸುಧೀರ್ ಅವರು ದಿನನಿತ್ಯದ ಅಭ್ಯಾಸದಿಂದ ಮಹಿಳೆ ಹೇಗೆ ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದರು ಎಂಬುದನ್ನು ವಿವರಿಸಿದ್ದಾರೆ.
30 ವರ್ಷದ ಮಂಜು ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಕತ್ತಲೆಯಲ್ಲಿ ಸ್ಮಾರ್ಟ್‌ಪೋನ್ ಅನ್ನು ಹೆಚ್ಚು ಹೊತ್ತು ಬಳಸಿದರಿಂದ ಕುರುಡುತನದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಫ್ಲೋಟರ್‌ಗಳು, ತೀವ್ರವಾದ ಬೆಳಕು, ಅಂಕುಡೊಂಕಾದ ಮಾದರಿಗಳು ಮತ್ತು ಸಾಂದರ್ಭಿಕವಾಗಿ ದೃಷ್ಟಿ ಕೊರತೆ ಅಥವಾ ವಸ್ತುಗಳ ಮೇಲೆ ಏಕಾಗ್ರತೆ ಕಳೆದುಕೊಳ್ಳುವುದು ಇದರ ಮೊದಲ ರೋಗಲಕ್ಷಣಗಳು.
|
ರಾತ್ರಿಯ ಕತ್ತಲಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಫೋನ್ ಬಳಕೆ
ಮಹಿಳೆಯು ತನ್ನ ಮಗುವನ್ನು ನೋಡಿಕೊಳ್ಳುವ ಕಾರಣ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಮನೆಯಲಿದ್ದರು. ಈ ವೇಳೆ ಪ್ರತಿದಿನ ಹಲವಾರು ಗಂಟೆಗಳ ಕಾಲ ತನ್ನ ಸ್ಮಾರ್ಟ್‌ಫೋನ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅದರಲ್ಲೂ ರಾತ್ರಿಯಲ್ಲಿ ದೀಪಗಳು ಸ್ವಿಚ್ ಆಫ್ ಆದ ಬಳಿಕ ಎರಡು ಗಂಟೆಗಳ ಕಾಲ ಮೊಬೈಲ್ ಬಳಸುತ್ತಿದ್ದರು. ಇದು ಕಣ್ಣಿನ ನರಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ಕೆಲವೊಮ್ಮೆ ಸೆಕೆಂಡುಗಳ ಕಾಲ ಕತ್ತಲು ಅವರಿಸುತ್ತಿತ್ತು. ಇದರ ಪರಿಣಾಮವಾಗಿ ಆಕೆ ವೈದ್ಯರ ಬಳಿ ಪರೀಕ್ಷೆಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಮಹಿಳೆ
ಈ ರೋಗದ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ಮಹಿಳೆಯು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (SVS) ನಿಂದ ಬಳಲುತ್ತಿದ್ದರು ಎಂದಿದ್ದಾರೆ. ಅಂದರೆ, ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂತಹ ಸಾಧನಗಳನ್ನು ದೀರ್ಘಾವಧಿಯ ಬಳಕೆಯಿಂದ ಉಂಟಾಗುವ "ಕಂಪ್ಯೂಟರ್ ವಿಷನ್ ಸಿಂಡ್ರೋಮ್" (CVS) ಅಥವಾ "ಡಿಜಿಟಲ್ ವಿಷನ್ ಸಿಂಡ್ರೋಮ್" ಎಂದು ಕರೆಯುವ ವಿವಿಧ ಕಣ್ಣಿನ ಸಂಬಂಧಿತ ಕಾಯಿಲೆಗಳು. ಇವು ಕಣ್ಣಿನ ದೃಷ್ಟಿಯನ್ನು ನಿಷ್ಕ್ರಿಯಗೊಳಿಸುವ ಲಕ್ಷಣಗಳನ್ನು ಉಂಟುಮಾಡಬಹುದು.
ಮುಂದುವರಿದು, " ನಾನು ಯಾವುದೇ ಔಷಧಿಗಳನ್ನು ಮಹಿಳೆಗೆ ಶಿಫಾರಸು ಮಾಡಿಲ್ಲ. ಆಕೆಯ ದೃಷ್ಟಿ ದೋಷಕ್ಕೆ ಸಂಭವನೀಯ ಕಾರಣಗಳ ಬಗ್ಗೆ ಸಲಹೆ ನೀಡಿದ್ದೇನೆ. ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದೆ" ಎಂದು ತಿಳಿಸಿದ್ದಾರೆ.
ಔಷಧಿಯಿಲ್ಲದೆ ಮಂಜು ಆತಂಕಕ್ಕೆ ಒಳಗಾಗಿದ್ದರು, ತನ್ನ ಮೆದುಳಿನ ನರಗಳಿಗೆ ಏನಾದರೂ ಆಗಿದೆಯೇ ಎಂದು ಹೆದರಿದ್ದರು. ಆದರೆ, ತಾನೇ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದರು. ಮೊಬೈಲ್ ನೋಡುವುದನ್ನು ಕಡಿಮೆ ಮಾಡುವ ಬದಲು, ಅಗತ್ಯವಿಲ್ಲದಿದ್ದರೇ ಸ್ಮಾರ್ಟ್‌ಫೋನ್ ಬಳಕೆಯನ್ನು ಸಂಪೂರ್ಣವಾಗಿ ಬಿಡುತ್ತೇನೆ ಎಂದಿದ್ದರು.

20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ
ಇನ್ನು ಇಂದು ತಿಂಗಳ ವಿಮರ್ಶೆಯಲ್ಲಿ, ಮಂಜು ಸಂಪೂರ್ಣವಾಗಿ ಗುಣವಾಗಿದ್ದು. ಆಕೆಯ 18 ತಿಂಗಳ ದೃಷ್ಟಿ ದೋಷ ಮಾಯವಾಗಿತ್ತು. ಆಕೆ ಮತ್ತೆ ಸಾಮಾನ್ಯವಾಗಿ ನೋಡಲಾರಂಬಿಸಿದ್ದರು. ರಾತ್ರಿಯಲ್ಲಿ ಕತ್ತಲಾಗುತ್ತಿದ್ದ ದೃಷ್ಟಿ ಮತ್ತೆ ಸಹಜ ಸ್ಥತಿಗೆ ಬಂದಿತ್ತು.
ಈ ಪೂರ್ಣ ಮಾಹಿತಿ ನೀಡಿರುವ ವೈದ್ಯರು, ಜನರಿಗಾಗಿ ಒಂದು ಸಂದೇಶವನ್ನು ನೀಡಿದ್ದಾರೆ. "ಡಿಜಿಟಲ್ ಸಾಧನಗಳ ಪರದೆಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ, ಏಕೆಂದರೆ, ಇದು ತೀವ್ರ ಮತ್ತು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಡಿಜಿಟಲ್ ಪರದೆಯನ್ನು ಬಳಸುವಾಗ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಳ್ಳಿ ಅಂದರೆ, 20-20-20 ನಿಯಮ ಬಳಸಿ" ಎಂದಿದ್ದಾರೆ.
ಒಟ್ಟಾರೆ, ನಮ್ಮ ಒಂದು ಅಭ್ಯಾಸ ನಮ್ ಇಡೀ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟ. ಸ್ಮಾರ್ಟ್‌ಪೋನ್, ಡಿಜಿಟಲ್ ಸಾಧಗಳ ಬಳಕೆಯನ್ನು ಮಿತವಾಗಿ ಬಳಸಿದಷ್ಟು ನಮ್ಮ ಆರೋಗ್ಯ ನಮ್ಮ ಕೈತಪ್ಪುವುದು ನಿಲ್ಲುತ್ತದೆ ಎಂಬುದು ವೈದ್ಯರ ಅಭಿಪ್ರಾಯ.












Click it and Unblock the Notifications