Work From Jail: ‘ವರ್ಕ್ ಫ್ರಂ ಹೋಂ’ ಗೊತ್ತು, ‘ವರ್ಕ್ ಫ್ರಂ ಜೈಲ್’ ಗೊತ್ತಾ?
ದೆಹಲಿ ಅಬಕಾರಿ ಕೇಸ್ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಕಿರಿಕ್ ಜೋರಾಗುತ್ತಿದೆ. ಇದೇ ಸಮಯದಲ್ಲಿ, ಎಎಪಿ ಪಕ್ಷ ಕೂಡ ರೊಚ್ಚಿಗೆದ್ದಿದೆ. ಅಕಸ್ಮಾತ್ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೆ ಏನ್ ಮಾಡುತ್ತೇವೆ? ಅನ್ನೋದನ್ನೂ ತಿಳಿಸಿದೆ ಆಪ್. ಹಾಗೇ, 'ವರ್ಕ್ ಫ್ರಂ ಜೈಲ್' ಬಗ್ಗೆ ಇದೀಗ ಮುನ್ಸೂಚನೆ ಸಿಕ್ಕಿದೆ!
ಹೌದು, ದೆಹಲಿ ಅಬಕಾರಿ ಕೇಸ್ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಕೊಟ್ಟಿದೆ 'ಇಡಿ'. ಇದೇ ಕೇಸ್‌ನಲ್ಲಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಮತ್ತು ಸಚಿವರು ಈಗ ಜೈಲು ಸೇರಿದ್ದಾರೆ. ಈ ಸಮಯದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಜೈಲು ಸೇರಬಹುದು ಎಂಬ ಭಯ ಆಪ್ ನಾಯಕರು & ದೆಹಲಿ ಸರ್ಕಾರಕ್ಕೆ ಕಾಡುತ್ತಿದೆ. ಆದ್ರೆ ಈ ರೀತಿ ಅಕಸ್ಮಾತ್ ಆಗೋದರೆ ತಮ್ಮ ರಣತಂತ್ರ ಏನು? ಅನ್ನೋದನ್ನು ಈಗ ಆಪ್ ತಿಳಿಸಿದೆ. ಹಾಗಾದರೆ ಅಕಸ್ಮಾತ್ ಕೇಜ್ರಿವಾಲ್ ಅವರು ಜೈಲಿಗೆ ಹೋದರೆ ಮುಂದೆ ಏನಾಗಬಹುದು?

'ವರ್ಕ್ ಫ್ರಂ ಜೈಲ್' ರಣತಂತ್ರ?
ಅಷ್ಟಕ್ಕೂ, ಅಕಸ್ಮಾತ್ ಅರವಿಂದ್ ಕೇಜ್ರಿವಾಲ್ ಅವರೇನಾದರೂ 'ಇಡಿ' ಕಡೆಯಿಂದ ಅರೆಸ್ಟ್ ಆದರೆ. ಕೇಜ್ರಿವಾಲ್ ಅವರು ಜೈಲಿನಿಂದಲೇ ಕಾರ್ಯನಿರ್ವಹಿಸಲು, ಕೋರ್ಟ್ ಪರ್ಮಿಷನ್‌ಗೆ ಅರ್ಜಿ ಹಾಕಬೇಕು ಎಂಬ ಚಿಂತನೆ ನಡೆಸಿದೆಯಂತೆ ಆಪ್. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಗರಂ ಆಗಿದೆ. ಅಷ್ಟಕ್ಕು ಇಂದು ನಡೆದ ಸಭೆ ವೇಳೆ ಈ ವಿಚಾರವು ಪ್ರಸ್ತಾಪವಾಗಿದೆ. ಅಕಸ್ಮಾತ್ ಕೇಂದ್ರ ತನಿಖಾ ಸಂಸ್ಥೆಗಳು ಕೇಜ್ರಿವಾಲ್ ಅವರನ್ನ ಬಂಧಿಸಿದರೆ, ಅವರು ಜೈಲಿನಿಂದ ಕಾರ್ಯನಿರ್ವಹಿಸಬೇಕು ಎಂದು ಆಪ್ ಶಾಸಕರು ಒತ್ತಾಯಿಸಿದ್ರು ಎಂದು ಇದೀಗ ವರದಿಯಾಗಿದೆ.
ಕೇಂದ್ರದ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ?
ಹಾಗೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರದ ಸಚಿವೆ ಅತಿಶಿ ಅವರು, ನಾವು ಜನರ ನಡುವೆ ಹೋಗ್ತೀವಿ. ಆಪ್ & ಅರವಿಂದ್ ಕೇಜ್ರಿವಾಲ್ ವಿರುದ್ಧ ದೌರ್ಜನ್ಯ ನಡೆಸಲಾಗ್ತಿದೆ ಅಂತಾ ಆರೋಪ ಮಾಡಿದ್ದಾರೆ. ಹೀಗಾಗಿ ಅಕಸ್ಮಾತ್ ಮುಖ್ಯಮಂತ್ರಿಗಳು ಜೈಲಿಗೆ ಹೋದರೆ, ಆಗಲೂ ಅವರು ಸಿಎಂ ಆಗಿ ಉಳಿಯಬೇಕು ಎಂದು ಎಲ್ಲಾ ಶಾಸಕರು ಮನವಿ ಮಾಡಿದ್ದಾರೆ. ದೆಹಲಿ ಜನ ಅವರನ್ನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ & ಅವರು ಮುಖ್ಯಮಂತ್ರಿಯಾಗಿಯೇ ಉಳಿಯಬೇಕು ಎಂದಿದ್ದಾರೆ ಸಚಿವೆ ಅತಿಶಿ. ಈ ಮೂಲಕ ಇದೀಗ ಆಪ್ ಪಕ್ಷದ ನಾಯಕರು ಕೇಂದ್ರದ ವಿರುದ್ಧ ಬೇರೆಯದ್ದೇ ತಂತ್ರ ರೂಪಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಏನೆಲ್ಲಾ ನಡೆಯುತ್ತಿದೆ?
ಒಟ್ಟಾರೆ ಈ ಪ್ರಕರಣ ನೋಡುವುದಾರೆ, ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಯಾಕೆ ಅಂದ್ರೆ ಅಬಕಾರಿ ನೀತಿ ಹಗರಣವನ್ನ ಅಕ್ರಮ ಹಣ ವರ್ಗಾವಣೆ ಆಯಾಮದಲ್ಲಿ ತನಿಖೆ ಮಾಡ್ತ ಇರುವ ಜಾರಿ ನಿರ್ದೇಶನಾಲಯ, ಸಿಎಂ ಕೇಜ್ರಿವಾಲ್‌ಗೆ ನ. 2ಕ್ಕೆ ತನ್ನ ಮುಂದೆ ಹಾಜರಾಗಲು ಸಮನ್ಸ್ ನೀಡಿತ್ತು. ಹೀಗಾದರೂ ಕೇಜ್ರಿವಾಲ್ ಅವರು ಹಾಜರಾಗಿಲ್ಲ. ಹೀಗಾಗಿ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಬಂಧಿಸಬಹುದು ಎಂಬ ಮಾತುಗಳು ಓಡಾಡುತ್ತಿವೆ. ಇದೇ ಪರಿಸ್ಥಿತಿ ವೇಳೆ, ಆಪ್ ನಾಯಕರು ಕೂಡ ಪ್ರತ್ಯಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಕಸ್ಮಾತ್ ಈಗ ಕೇಜ್ರಿವಾಲ್ ಜೈಲಿಗೆ ಹೋದರೆ ಜೈಲಿನಿಂದ ಅವರು ತಮ್ಮ ಸಿಎಂ ಕಾರ್ಯ ನಿರ್ವಹಿಸಲು ಅವಕಾಶ ನೀಡಲು ಕೋರಿ, ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications