G20 Summit: ಚೀನಾ ಅಧ್ಯಕ್ಷರ ಬಗ್ಗೆ ಅಮೆರಿಕ ಅಧ್ಯಕ್ಷ ಹೇಳಿದ್ದೇನು?
ಭಾರತದ ನೇತೃತ್ವದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಸಭೆಗೆ ಬಾರದೆ ಕೈಕೊಟ್ಟು ಹೋಗುವ ಲಕ್ಷಣ ಕಾಣುತ್ತಿದೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಬರಲ್ಲ ಎನ್ನಲಾಗಿದೆ. ಈ ಕುರಿತು ಅಮೆರಿಕ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅಮೆರಿಕ ಅಧ್ಯಕ್ಷರ ರಿಯಾಕ್ಷನ್ ಏನು? ಚೀನಾ ಅಧ್ಯಕ್ಷರ ಬಗ್ಗೆ ಜೋ ಬೈಡನ್ ಹೇಳಿದ್ದೇನು?
ಜಗತ್ತಿನಾದ್ಯಂತ ಈಗ ಒಂದೇ ಚರ್ಚೆ ಅದು ಜಿ20 ಶೃಂಗಸಭೆಯ ಬಗ್ಗೆ. ಇಡೀ ಪ್ರಪಂಚವೇ ಭಾರತದ ಕಡೆ ಗಮನ ಇಟ್ಟು ಕೂತಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಚೀನಾ ಅಧ್ಯಕ್ಷರು ಬರುವುದು ಅನುಮಾನ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಬೈಡನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ನನಗೆ ಇದರಿಂದ ಬೇಸರವಾಗಿದೆ. ಆದರೆ ನಾನು ಅವರನ್ನು ನೋಡಿಯೇ ಬರುತ್ತೇನೆ ಎಂದಿದ್ದಾರೆ ಬೈಡನ್. ಅಕಸ್ಮಾತ್ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾರತಕ್ಕೆ ಬರದೇ ಇದ್ದರೆ ಬೈಡನ್ ಎಲ್ಲಿ ಭೇಟಿ ಮಾಡ್ತಾರೆ? ಅನ್ನೋದೆ ಈಗ ಯಕ್ಷ ಪ್ರಶ್ನೆಯಾಗಿದೆ.

ಭಾರತ & ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ
ಗಡಿಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ, ಅದರಲ್ಲೂ ಭಾರತ ಮತ್ತು ಚೀನಾ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಹೀಗೆ ಚೀನಾ ಹಾಗೂ ಭಾರತ ನಡುವೆ ಉದ್ಭವಿಸಿರುವ ಉದ್ವಿಗ್ನಿತೆಯ ವೇಳೆ ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಜಿನ್‌ಪಿಂಗ್ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಾಗಿ ಪ್ರಧಾನಿ ಲಿ ಕಿಯಾಂಗ್ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದರ ಜೊತೆ ಚೀನಾ ಪ್ರಧಾನಿ ಕಿಯಾಂಗ್ ಭೇಟಿ ಕುರಿತು ಚೀನಾದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಅಮೆರಿಕ & ಚೀನಾ ನಡುವೆ ಸಿಟ್ಟು?
ಮತ್ತೊಂದ್ಕಡೆ ಕಳೆದ ವರ್ಷ ನವೆಂಬರ್‌ನಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ನಡೆದಿದ್ದ ಜಿ20 ಸಭೆಯಲ್ಲಿ ಬೈಡನ್ & ಜಿನ್‌ಪಿಂಗ್ ಭೇಟಿಯಾಗಿತ್ತು. ಆದರೆ ಚೀನಾ ಬೇಹುಗಾರಿಕಾ ಬಲೂನಿನ ಆರೋಪ ಕಿಚ್ಚು ಹಚ್ಚಿತ್ತು. ಇದರ ಜೊತೆಗೆ ತೈವಾನ್ ವಿಚಾರದಲ್ಲೂ ಅಮೆರಿಕ & ಚೀನಾ ಸಂಬಂಧ ಹದಗೆಟ್ಟು ಹೋಗಿದೆ. ಇಷ್ಟೆಲ್ಲಾ ಕಿರಿಕ್ ಮಧ್ಯೆ ಇದೀಗ ಚೀನಾ ಅಧ್ಯಕ್ಷರು ಜಿ20 ಸಮ್ಮೇಳನಕ್ಕೆ ಬರುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಅಧಿಕೃತವಾಗಿ ಮಾಹಿತಿ ಹೊರಬೀಳಬೇಕು ಅಷ್ಟೇ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಬೇಸರ ಸೂಚಿಸಿ, ನಾನು ಭೇಟಿ ಮಾಡೇ ಮಾಡುತ್ತೇನೆ ಎಂದಿದ್ದಾರೆ.

ಭಾರತಕ್ಕೆ ಬರುತ್ತಿರುವ ಬಲಶಾಲಿ ನಾಯಕರು!
ಇನ್ನು ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಬಲಶಾಲಿ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ಈ ಪೈಕಿ ಅಮೆರಿಕ ಅಧ್ಯಕ್ಷ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಥೊಣಿ ಆಲ್ಬನೆಸ್, ಜರ್ಮನ್ ಚಾನ್ಸಲರ್ ಒಲಾಫ್ ಸ್ಕೋಲ್ಜ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಷಿದಾ ಹಾಗೂ ಬ್ರಜಿಲ್ ಅಧ್ಯಕ್ಷ ಲ್ಯೂಜ್ ಇನಾಸಿಯೊ ಲುಲಾ ಡಿಸಿಲ್ವಾ ಸೇರಿದಂತೆ ಮತ್ತಿತರರು ಹಾಜರಾಗಿ ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಜೊತೆ ಬೈಡನ್ ಚರ್ಚೆ
ಜಗತ್ತು ಈ ಬಾರಿಯ ಜಿ20 ಶೃಂಗಸಭೆಗೆ ಕಾಯುತ್ತಿದೆ. ಏಕೆಂದರೆ ಈ ಬಾರಿಯ ಜಿ20 ಶೃಂಗಸಭೆ ನೇತೃತ್ವ ಭಾರತ ವಹಿಸಿದೆ. ಜಿ20 ಶೃಂಗಸಭೆ ಸೆಪ್ಟೆಂಬರ್ 9 & 10 ರಂದು ನವದೆಹಲಿಯಲ್ಲಿ ನಡೆಯಲಿದೆ. ಹೀಗೆ ಭಾರತ ಜಿ20 ನಾಯಕತ್ವ ವಹಿಸಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಬೈಡನ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಿದ್ದಾರೆ. ಅಲ್ಲದೆ ಜಿ20 ಶೃಂಗ ಸಭೆಗೂ ಎರಡು ದಿನ ಮೊದಲು ಅಂದ್ರೆ ಸೆಪ್ಟೆಂಬರ್ 7ರಂದು ಬೈಡನ್ ನವದೆಹಲಿಗೆ ಬರಲಿದ್ದಾರೆ. ಸೆಪ್ಟೆಂಬರ್ 8ಕ್ಕೆ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಭಾರತ & ಅಮೆರಿಕದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲಿದೆ.

ಹಾಗೇ ಜಿ20 ಶೃಂಗಸಭೆಯಲ್ಲಿ ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರಜಿಲ್, ಕೆನಾಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ & ಐರೋಪ್ಯ ಒಕ್ಕೂಟಗಳು ಭಾಗವಹಿಸಲಿವೆ. ಭಾರತ ಕೂಡ ಜಿ20 ಒಕ್ಕೂಟದ ಪ್ರಮುಖ ರಾಷ್ಟ್ರವಾಗಿದೆ. ಇದೇ ರಾಷ್ಟ್ರ ಈ ಬಾರಿಯ ಜಿ20 ಶೃಂಗಸಭೆ ನೇತೃತ್ವ ವಹಿಸಿರುವುದು ವಿಶೇಷ.
ಯುದ್ಧ ವಿಚಾರ ಪ್ರಸ್ತಾಪ ಆಗುತ್ತಾ?
ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶುದ್ಧ ಇಂಧನ ಪರಿವರ್ತನೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಜಾಗತಿಕ ಸಮಸ್ಯೆ ಬಗ್ಗೆ ಪಸ್ತಾಪಿಸಲಿದ್ದಾರೆ ಅಂತಾ ಹೇಳಲಾಗಿದೆ. ಇದರ ಜತೆ ರಷ್ಯಾ & ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದ ಪರಿಣಾಮ, ಯುದ್ಧದಿಂದ ಎದುರಾದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಬೈಡನ್ ಜಿ20 ಶೃಂಗಸಭೆಯಲ್ಲಿ ಸಮಾಲೋಚಿಸುತ್ತಾರೆ ಎನ್ನಲಾಗಿದೆ. ಈ ಮೂಲಕ ರಷ್ಯಾ ವಿರುದ್ಧ ಮತ್ತೆ ಅಮೆರಿಕ ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸುವ ಸಾಧ್ಯತೆ ಇದೆ.
ರಷ್ಯಾ ಅಧ್ಯಕ್ಷ ಪುಟಿನ್ ಬರೋದಿಲ್ಲ
ಸೆಪ್ಟೆಂಬರ್ 9 & 10ರಂದು ರಾಜಧಾನಿ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಈಗಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ವಾರಂಟ್ ಇರುವ ಕಾರಣ ಬಂಧನದ ಭೀತಿ ಇದ್ದು. ಹೀಗಾಗಿಯೇ ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷರು ಕೂಡ ಬರುವುದಿಲ್ಲ ಅಂತಾ ಹೇಳುತ್ತಿರುವುದು ಗಮನ ಸೆಳೆದಿದೆ.
ಒಟ್ನಲ್ಲಿ ಭಾರತ ಜಿ20 ಶೃಂಗಸಭೆ ಮೂಲಕ ಜಾಗತಿಕವಾಗಿ ತನ್ನ ಶಕ್ತಿಯನ್ನು ತೋರಿಸಲು ಸಜ್ಜಾಗಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಲ್ಲೂ ಜಗತ್ತಿನ ಗಣ್ಯರೆಲ್ಲಾ ಭಾರತದ ರಾಜಧಾನಿ ನವದೆಹಲಿಗೆ ಬರುತ್ತಿರುವ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಂಡಿದೆ ಕೇಂದ್ರ ಸರ್ಕಾರ. ಹೀಗಾಗಿ ದೆಹಲಿ 7 ಸುತ್ತಿನ ಕೋಟೆಯಾಗಿದೆ. ಎಲ್ಲೆಡೆ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಹಲವು ರಸ್ತೆಗಳನ್ನು ಬಂದ್ ಮಾಡಿ, ಬದಲಿ ಸಂಚಾರ ವ್ಯವಸ್ಥೆಯನ್ನ ಮಾಡಲಾಗಿದೆ. ಭದ್ರತೆಗಾಗಿ ಸೇನೆ, ಪೊಲೀಸರನ್ನು ನಿಯೋಜನೆ ಮಾಡಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಗಣ್ಯರು ಉಳಿಯುವ ಹೋಟೆಲ್‌ನಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications