ಚಂದ್ರಯಾನ-3ಗೆ ಅಮೆರಿಕ ಸಹಾಯ: ಇಸ್ರೋಗೆ ‘ನಾಸಾ’ ಸಾಥ್!
ಕೆಲವೇ ನಿಮಿಷ ಬಾಕಿ ಅಷ್ಟೇ ಭಾರತ ಚಂದ್ರನ ಮೇಲೆ ಇತಿಹಾಸ ಸೃಷ್ಟಿಸಲಿದೆ. ಭಾರತದ 'ಚಂದ್ರಯಾನ-3' ಯೋಜನೆ ಇಡೀ ಜಗತ್ತನ್ನ ಆವರಿಸಿದ್ದು, ಹೀಗಾಗಿ ಪ್ರಪಂಚ ಅಮೋಘ ಘಳಿಗೆಗೆ ಕಾಯ್ತಿದೆ. ಹೀಗೆ ಭಾರತದ ಇಸ್ರೋ ಸಂಸ್ಥೆ, ಚಂದ್ರನ ಮೇಲೆ ಮಹತ್ವದ ಸಾಧನೆ ಮಾಡಲು ಅಮೆರಿಕದ ಸಹಾಯವೂ ಇದೆ. ಅಲ್ಲದೆ ಯುರೋಪ್ ಬಾಹ್ಯಾಕಾಶ ಸಂಸ್ಥೆಯೂ ಇಸ್ರೋಗೆ ನೆರವಾಗಿ ನಿಂತಿದೆ.
ವಿಕ್ರಮ್ ಲ್ಯಾಂಡರ್ ಅನ್ನ ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಅಮೆರಿಕನ್ನರ ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಏಜೆನ್ಸಿ ಕೂಡ ಸಾಥ್ ಕೊಟ್ಟಿದೆ. ಈ ವಿಚಾರವನ್ನ ಯುರೋಪ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದ್ದು, ಲ್ಯಾಂಡರ್‌ನಲ್ಲಿ ಅಮೆರಿಕದ ನಾಸಾ ನೀಡಿರುವ ರೆಟ್ರೊರಿಫ್ಲೆಕ್ಟರ್ ಲೇಸರ್ ಅಳವಡಿಸಲಾಗಿದೆ. ಹೀಗಾಗಿ ಚಂದ್ರನ ಮೇಲ್ಮೈ ತಾಪಮಾನ ಹಾಗೂ ಭೂಕಂಪನದ ಮಾಹಿತಿ ಬೇಸ್ ಸ್ಟೇಷನ್‌ಗೆ ಸಿಗುತ್ತೆ. ಇದರಿಂದ ಲ್ಯಾಂಡರ್ ಅನ್ನ ಸುರಕ್ಷಿತವಾಗಿ ಇಳಿಸಲು ಸಹಾಯ ಆಗಲಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ತಿಳಿಸಿದೆ.

ಅನಿರೀಕ್ಷಿತ ಅಪಾಯಕ್ಕೆ ಇಲ್ಲಿದೆ ಔಷಧ!
ಹಾಗೇ ಇದರ ಜೊತೆ, ರೋವರ್‌ನಲ್ಲಿ ಅಳವಡಿಸಿರುವ ವೈಜ್ಞಾನಿಕ ಉಪಕರಣದಿಂದ ಚಂದ್ರನ ಮೇಲ್ಮೈ ರಚನೆ ಕುರಿತು ಮಾಹಿತಿ ಸಿಗಲಿದೆ. ಗ್ರೌಂಡ್ ಸ್ಟೇಷನ್ ನೆರವಿಲ್ಲದೆ ನೌಕೆಯ ಯಾವುದೇ ಮಾಹಿತಿ ಪಡೆಯುವುದು ಅಸಾಧ್ಯ. ಭೂಮಿ ಮೇಲಿನ ನಿಯಂತ್ರಣ ಕೇಂದ್ರದೊಂದಿಗೆ ನೌಕೆಯು ನಿರಂತರ ಸಂಪರ್ಕ ಹೊಂದಿದರೆ ಅನಿರೀಕ್ಷಿತ ಅಪಾಯವನ್ನ ತಪ್ಪಿಸುವ ಅವಕಾಶ ಸಿಗುತ್ತದೆ. ಹೀಗಾಗಿ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಸಂವಹನ ಅತಿ ಮುಖ್ಯವಾದ ಸಂಗತಿ. ಹೀಗಾಗಿ ಇದೀಗ ಅಮೆರಿಕದ ನಾಸಾ ಹಾಗೂ ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಕೂಡ ಭಾರತದ ಜೊತೆ ಕೈಜೋಡಿಸಿದೆ.
ತಂತ್ರಜ್ಞಾನ ಇಲ್ಲದೆ ಸಾಧನೆ ಅಸಾಧ್ಯ
ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ 32 ಮೀಟರ್ ಡೀಪ್ ಸ್ಪೇಸ್ ಟ್ರ್ಯಾಕಿಂಗ್ ಸ್ಟೇಷನ್ ಅನ್ನು ನಿರ್ವಹಿಸುತ್ತಿದೆ. ಇಲ್ಲಿ ನೌಕೆ ಇರುವ ಸ್ಥಳ ಅದರ ಚಲನವಲನ, ಭೂಮಿಯಿಂದ ಕಳುಹಿಸುವ ನಿರ್ದೇಶನ ನೌಕೆ ಪಾಲಿಸುತ್ತಿದೆಯೇ? ಎಂಬ ಪರೀಕ್ಷೆ ಸೇರಿ ಟೆಲಿಮೆಟ್ರಿ ಹಾಗೂ ವೈಜ್ಞಾನಿಕ ಮಾಹಿತಿ ನೌಕೆ ಕಳುಹಿಸುತ್ತಿದೆಯೇ ಎಂಬ ಅಂಶಗಳನ್ನ ಈ ಕೇಂದ್ರದಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಈಗ ನಾಸಾ ಮತ್ತು ಯುರೋಪ್ ಸ್ಪೇಸ್ ಏಜೆನ್ಸಿ ಸಹಾಯ ಮಾಡುತ್ತಿರುವ ಕಾರಣ ಭಾರತಕ್ಕೆ ಇನ್ನಷ್ಟು ಸಹಾಯವಾಗಿದೆ. ಅದು ಹೇಗೆ ಗೊತ್ತಾ? ಮುಂದೆ ಓದಿ.
ಹೌದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಣವನ್ನ ನೀರಿನಂತೆ ಸುರಿಯಬೇಕು. ಅಲ್ಲಿ ಸಾವಿರಾರು ಕೋಟಿಗೆ ಲೆಕ್ಕವೇ ಇರುವುದಿಲ್ಲ. ಆದರೆ ಭಾರತಕ್ಕೆ ಇದು ಕಷ್ಟವಾಗುತ್ತದೆ. ಹೀಗಾಗಿ ಇಸ್ರೋ ಸಂಸ್ಥೆ ಕಡಿಮೆ ಖರ್ಚಿನಲ್ಲೇ ಅತ್ಯದ್ಭುತ ಸಾಧನೆ ಮಾಡುತ್ತಿದೆ. ಹೀಗಾಗಿಯೇ ತನ್ನ ನೌಕೆಯ ಪ್ರತಿ ಚಲನವಲನದ ಮೇಲೆ ನಿಗಾ ಇಡಲು, ಜಗತ್ತಿನ ಹಲವು ಕಡೆ ಬೃಹತ್ ಆಯಂಟೆನಾಗಳನ್ನ ಹಾಕುವುದು ಅಸಾಧ್ಯ & ದುಬಾರಿ. ಇಂತಹ ವೇಳೆ ಜಗತ್ತಿನ ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಹಾಗೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಖಾಸಗಿ ಸಂಸ್ಥೆಗಳ ನೆರವನ್ನ ಇಸ್ರೋ ಸಂಸ್ಥೆ ಪಡೆಯುತ್ತಿದೆ. ಅದೇ ರೀತಿ ಈಗ ಭಾರತದ ಚಂದ್ರಯಾನ-3 ಯೋಜನೆಗೂ ನಾಸಾ ಹಾಗೂ ಯುರೋಪ್ ಬಾಹ್ಯಾಕಾಶ ಸಂಸ್ಥೆ ಸಹಾಯ ಮಾಡುತ್ತಿದೆ.

ಭಾರತೀಯರಿಂದ ವಿಶೇಷ ಪೂಜೆ, ಪ್ರಾರ್ಥನೆ
ಚಂದ್ರನ ಮೇಲ್ಮೈ ಮೇಲೆ ಭಾರತದ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಈಗ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಹೀಗಾಗಿ ಯಶಸ್ಸಿಗಾಗಿ ಭಾರತೀಯರು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಹಾಗೇ ಜಗತ್ತು ಕೂಡ ಭಾರತದ ಈ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದು, ಇದರಿಂದ ಭಾರತಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಒಳ್ಳೆಯ ಸುದ್ದಿ ಸಿಗಲಿದೆ. ಮನುಷ್ಯರ ಭವಿಷ್ಯ ಚಂದ್ರಯಾನ-3 ಯೋಜನೆ ಮೂಲಕ ಉಜ್ವಲವಾಗಲಿದೆ.












Click it and Unblock the Notifications