Dhruv Rathee: ಯೂಟ್ಯೂಬರ್ ಧ್ರುವ್ ರಾಠಿಗೆ ಮತ್ತೆ ಕಾನೂನು ಸಂಕಷ್ಟ; ಮಾನನಷ್ಟ ಪ್ರಕರಣದಲ್ಲಿ ಜಾಮೀನು ವಾರಂಟ್

ನವದೆಹಲಿ: ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ದಾಖಲಾಗಿರುವ 2018ರ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಹೊಸದಾಗಿ ಜಾಮೀನು ವಾರಂಟ್ ಜಾರಿ ಮಾಡಿದೆ. ಧ್ರುವ್ ರಾಠಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ್ದ 'BJP IT Cell Part II' ಎಂಬ ವಿಡಿಯೊಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.

ಶನಿವಾರ ದೆಹಲಿಯ ದಕ್ಷಿಣ-ಪೂರ್ವ ವಿಭಾಗದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ರಾಹುಲ್ ಜೈನ್ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು 'ಬಾರ್ ಆ್ಯಂಡ್ ಬೆಂಚ್' ವರದಿ ಮಾಡಿದೆ.

Dhruv Rathee Delhi Court Issues Fresh Bailable Warrant Against YouTuber Rathee in 2018 Defamation Case

ಈ ಹಿಂದೆ ನ್ಯಾಯಾಲಯ ನೀಡಿದ್ದ ಸಮನ್ಸ್‌ ಜಾರಿಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದಾಗ ಧ್ರುವ್ ರಾಠಿ ಅವರ ಮನೆಗೆ ಬೀಗ ಹಾಕಲಾಗಿತ್ತು ಎಂಬ ಮಾಹಿತಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಹೊಸದಾಗಿ ಜಾಮೀನು ವಾರಂಟ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ನಿಗದಿಪಡಿಸಲಾಗಿದ್ದು, ನ್ಯಾಯಾಲಯದ ವಿವರವಾದ ಆದೇಶ ಇನ್ನಷ್ಟೇ ಹೊರಬರಬೇಕಿದೆ.

ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧದ ಪ್ರಕರಣವೇನು?

ಧ್ರುವ್ ರಾಠಿ ವಿರುದ್ಧ ವಿಕಾಸ್ ಸಂಸ್ಕೃತ್ಯಾಯನ್ ಎಂಬುವವರು ಮಾನನಷ್ಟ ದೂರು ದಾಖಲಿಸಿದ್ದಾರೆ. 'BJP IT Cell Part II' ಶೀರ್ಷಿಕೆಯ ವಿಡಿಯೊದಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂಬುದು ದೂರುದಾರರ ಆರೋಪವಾಗಿದೆ.

ವಿಡಿಯೊದಲ್ಲಿ‌ ಯೂಟ್ಯೂಬರ್‌ ಧ್ರುವ್‌ ರಾಠಿ ದೂರುದಾರರ ಕುರಿತು ಹಲವು ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಅವುಗಳನ್ನು ಪ್ರಕಟಿಸಿ ಪ್ರಸಾರ ಮಾಡುವ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಸಂಸ್ಕೃತ್ಯಾಯನ್ ದೂರಿನಲ್ಲಿ ಆರೋಪಿಸಿದ್ದಾರೆ.

Dhruv Rathee: ವಿಚಾರಣೆಯನ್ನು ಮುಂಚಿತಗೊಳಿಸಲು ಮನವಿ

ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 20ರಿಂದ ಮುಂಚಿತವಾಗಿ ನಡೆಸುವಂತೆ ದೂರುದಾರರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಧ್ರುವ್ ರಾಠಿ ಪ್ರಸ್ತುತ ಭಾರತದಲ್ಲಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ವಿಚಾರಣೆಯನ್ನು ಮುಂಚಿತಗೊಳಿಸುವಂತೆ ಮನವಿ ಮಾಡಲಾಗಿತ್ತು.

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಠಿ ಭಾರತಕ್ಕೆ ಬಂದಿದ್ದಾರೆ ಎಂದು ದೂರುದಾರರ ಪರ ವಕೀಲ ಸಮಕ್ಷ್ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ವರದಿಯಾಗಿದೆ.

ರಾಠಿ ಸಾಮಾನ್ಯವಾಗಿ ವಿದೇಶದಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ಭಾರತದಲ್ಲಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂಚಿತಗೊಳಿಸಬೇಕು ಎಂಬುದು ದೂರುದಾರರ ಕಡೆಯ ವಾದವಾಗಿತ್ತು. ಈ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಅಕ್ಟೋಬರ್ 12ರಂದು ಹೊಸ ಸಮನ್ಸ್ ಜಾರಿಗೊಳಿಸಲು ಸೂಚಿಸಿತ್ತು.

2019ರಲ್ಲೇ ಸಮನ್ಸ್ ಜಾರಿಯಾಗಿತ್ತು

ಈ ಪ್ರಕರಣದಲ್ಲಿ ಧ್ರುವ್ ರಾಠಿ ಅವರಿಗೆ 2019ರಲ್ಲಿಯೇ ಮೊದಲ ಬಾರಿಗೆ ಸಮನ್ಸ್ ನೀಡಲಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದು ಪಿಟಿಐ ವರದಿ ತಿಳಿಸಿದೆ. ಇತ್ತೀಚೆಗೆ ಜಾರಿಗೊಳಿಸಲಾದ ಹೊಸ ಸಮನ್ಸ್‌ ಅನ್ನು ಹರಿಯಾಣದ ಗುರುಗ್ರಾಮದಲ್ಲಿರುವ ಅವರ ನಿವಾಸಕ್ಕೆ ತಲುಪಿಸುವಂತೆ ಸೂಚಿಸಲಾಗಿತ್ತು. ಆದರೆ ಸಮನ್ಸ್ ಜಾರಿಗೊಳಿಸುವ ಪ್ರಯತ್ನದ ವೇಳೆ ಯೂಟ್ಯೂಬರ್‌ ಧ್ರುವ್‌ ರಾಠಿ ಅವರ ಮನೆಗೆ ಬೀಗ ಹಾಕಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಇದೀಗ ಹೊಸ ಜಾಮೀನು ವಾರಂಟ್ ಹೊರಡಿಸಿದೆ.

ಅಕ್ಟೋಬರ್ 31ಕ್ಕೆ ಮುಂದಿನ ವಿಚಾರಣೆ

ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31ರಂದು ನಡೆಯಲಿದೆ. ಪ್ರಕರಣದಲ್ಲಿ ದೂರುದಾರರು ಮಾಡಿರುವ ಆರೋಪಗಳು, ಸಮನ್ಸ್ ಜಾರಿ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ನ್ಯಾಯಾಲಯದ ವಿಚಾರಣೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+