Dharmendra Pradhan: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಇದೇ ಕಾರಣ ಎಂದ ಅಮಿತ್ ಶಾ!

Dharmendra Pradhan: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ನೂತನ ಶಿಕ್ಷಣ ಸಚಿವರಾಗಿ ಕನ್ನಡಿಗ ಪ್ರಹ್ಲಾದ ಜೋಶಿ ಅವರು ಆಯ್ಕೆಯಾಗಿದ್ದಾರೆ. ದೇಶದಾದ್ಯಂತ ಜೆನ್ ಜೀ ನಡೆಸಿದ ಹೋರಾಟಕ್ಕೆ ಮಣಿದು ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದರು. ಇದೀಗ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಇದೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರಣ ವಿವರಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ, ದೇಶ, ನಮ್ಮ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ತಮ್ಮ ಸಚಿವ ಸ್ಥಾನಕ್ಕಿಂತಲೂ ಹೆಚ್ಚು ಮುಖ್ಯ ಎನ್ನುವುದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟಿರುವುದು ಪ್ರತಿಬಿಂಬಿಸುತ್ತದೆ.

Dharmendra Pradhan

ಮೋದಿ ಸರ್ಕಾರವು ದೇಶದ ಯುವಕರ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸುವ ಮೋದಿ ಜಿ ಅವರ ನಿರ್ಧಾರಗಳು ಶ್ಲಾಘನೀಯ. ಈ ಕ್ರಮಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ನ್ಯಾಯವನ್ನು ಖಚಿತಪಡಿಸುತ್ತವೆ ಎಂದು ನನಗೆ ವಿಶ್ವಾಸವಿದೆ.

ತಮ್ಮ ಅಧಿಕಾರಾವಧಿಯಲ್ಲಿ, ಧರ್ಮೇಂದ್ರ ಪ್ರಧಾನ್ ಜಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಪರಿಣಾಮಕಾರಿ ಅನುಷ್ಠಾನ, ಮಾತೃಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಬೇಕಾದ ಸಿದ್ಧತೆ, ಪಿಎಂ ಶ್ರೀ ಶಾಲೆಗಳ ವಿಸ್ತರಣೆ, ಡಿಜಿಟಲ್ ಶಿಕ್ಷಣದ ಉತ್ತೇಜನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ-ಶೈಕ್ಷಣಿಕ ಸಮನ್ವಯವನ್ನು ಬಲಪಡಿಸುವಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಸಮಗ್ರ ಮತ್ತು ವಿದ್ಯಾರ್ಥಿ ಕೇಂದ್ರಿತವಾಗಿಸುವ ಅವರ ಪ್ರಯತ್ನಗಳು ಗಮನಾರ್ಹವಾಗಿವೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪಕ್ಕೆ ಅವರ ಸಮರ್ಪಣೆಯನ್ನು ಅವರ ಅಧಿಕಾರಾವಧಿಯು ಪ್ರತಿಬಿಂಬಿಸುತ್ತದೆ ಎಂದೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ದೇಶದ ಯುವಕರು ಭ್ರಮೆಗಳ ವಿಷವರ್ತುಲಕ್ಕೆ ಬೀಳಲು ನಾನು ಬಿಡುವುದಿಲ್ಲ: ಧರ್ಮೇಂದ್ರ ಪ್ರಧಾನ್

ಇನ್ನು ದೇಶದ ಯುವಕರು ಭ್ರಮೆಗಳ ವಿಷವರ್ತುಲಕ್ಕೆ ಬೀಳಲು ನಾನು ಬಿಡುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದರು.

ದೇಶದ ಯುವಕರ ಆಕಾಂಕ್ಷೆಗಳು, ಭಾವನೆಗಳು ಮತ್ತು ಸಮಂಜಸವಾದ ನಿರೀಕ್ಷೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಭಾರತದ ಯುವಜನರ ಕನಸುಗಳನ್ನು ನನಸಾಗಿಸುವುದು ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿರುವ ನಮ್ಮೆಲ್ಲರ ನೈತಿಕ ಹೊಣೆಗಾರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಡಿ ರಾಷ್ಟ್ರಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ದೇಶದ ಯುವಕರು ಭ್ರಮೆಗಳ ವಿಷವರ್ತುಲಕ್ಕೆ ಬೀಳಲು ನಾನು ಬಿಡುವುದಿಲ್ಲ, ಇದು ನನ್ನ ಸಂಕಲ್ಪ. ದೆಹಲಿಯ ಜಂತರ್ ಮಂತರ್ ಮತ್ತು ದೇಶಾದ್ಯಂತ ಬೆಳೆದಿರುವ ಪರಿಸ್ಥಿತಿಯನ್ನು ದೇಶ ವಿರೋಧಿ ಶಕ್ತಿಗಳು ಬಳಸಿಕೊಳ್ಳಲು ನಾನು ಬಿಡುವುದಿಲ್ಲ, ದೇಶದ ಏಕತೆಯನ್ನು ಕಾಪಾಡಿಕೊಳ್ಳಬೇಕು, ಭಾರತದಲ್ಲಿ ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ತೊಡಕುಗಳಲ್ಲಿ ಸಿಲುಕಿಕೊಳ್ಳಬಾರದು, ನಮ್ಮ ಮಕ್ಕಳು ತಮ್ಮ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು ಮತ್ತು ಅವರ ವೃತ್ತಿಜೀವನವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ನನ್ನ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದೇನೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+