ಎಲ್ಲೆಡೆ ದಟ್ಟ ಮಂಜು ದಾಖಲು: ಲಕ್ನೋದ ಶಾಲಾ ತರಗತಿ ಸಮಯ ಬದಲಾವಣೆ
ಉತ್ತರ ಪ್ರದೇಶ, ಡಿಸೆಂಬರ್ 22: ಉತ್ತರ ಪ್ರದೇಶದ ಲಕ್ನೋದಲ್ಲಿ ದಿನವೂ ದಟ್ಟ ಮಂಜಿನ ವಾತಾವರಣ ನಿರ್ಮಾಣವಾಗುತ್ತಿದೆ. ತೇವಭರಿತ ಗಾಳಿ ಬೀಸುತ್ತಿದ್ದು, ಎಲ್ಲೆಡೆ ಶೀತ ಹೆಚ್ಚಾಗಿದೆ. ಈ ಕಾರಣಕ್ಕೆ 1 ರಿಂದ 8 ನೇ ತರಗತಿಯ ಮಕ್ಕಳ ಶಾಲಾ ಸಮಯವನ್ನು ಡಿಸೆಂಬರ್ 31 ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.
ಕಳೆದ ಕೆಲವು ವಾರಗಳಿಂದ ರಾಜ್ಯದ ಬಹುತೇಕ ಭಾಗದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಕವಿಯುತ್ತಿದೆ. ನಿತ್ಯವು ಚಳಿಯ ವಾತಾವರಣ ಕಂಡು ಬಂದಿದೆ. ಜನರಿಗೆ ಅನಾರೋಗ್ಯದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತರಗತಿ ನಡೆಸಲು 1 ರಿಂದ 8 ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ಸೂಚಿಸಲಾಗಿದೆ.
ಉತ್ತರ ಭಾರತದಾದ್ಯಂತ ಗುರುವಾರವು ಸಹ ದಟ್ಟ ಮಂಜು ಆವರಿಸಿದ್ದು ಕಂಡು ಬಂತು. ಈ ಪೈಕಿ ಬೆಳಗ್ಗೆ ಪಂಜಾಬ್ ಮತ್ತು ವಾಯುವ್ಯ ರಾಜಸ್ಥಾನದಿಂದ ಹರಿಯಾಣದಾದ್ಯಂತ ಪೂರ್ವ ಉತ್ತರ ಪ್ರದೇಶದವರೆಗೆ ದಟ್ಟವಾಗಿ ಮಂಜು ಕವಿದ ವಾತಾವರಣ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಮಾಹಿತ ನೀಡಿದೆ.

ಕೇವಲ 10 ಮೀಟರ್ ನಷ್ಟು ದೂರದ ವಸ್ತು ಸಹ ಕಾಣದಷ್ಟು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ದಟ್ಟವಾದ ಮಂಜು ಆವರಿಸಿತ್ತು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಅಪಘಾತ: ಮನೆಯಿಂದ ಹೊರ ಬಾರದ ಜನ
ಪ್ರತಿನಿತ್ಯವು ಬೆಳಗ್ಗೆ ಸಾಕಷ್ಟು ತಂಪುಗಾಳಿ ಸಹಿತ ಮಂಜು ಕವಿಯುತ್ತಿದೆ. ಕೆಲವೆಡೆ ಮುಂದಿರುವ ವ್ಯಕ್ತಿ, ವಸ್ತುಗಳು ವಾಹನಗಳು ಕಾಣವುದೇ ಇಲ್ಲ. ಹೀಗಾಗಿ ಬೆಳಗಿನ ಜಾವ ವಾಹನ ಸಂಚಾರ ಸಹ ಇಲ್ಲ. ಇದರಿಂದ ನಿತ್ಯ ಕೆಲಸ ಕಾರ್ಯಗಳಿಗೆ ಬೇರೆ ಬೇರೆ ಕಡೆಗೆ ತೆರಳುವವರಿಗೆ ತೊಂದರೆ ಆಗುತ್ತಿದೆ ಎಂದು ಅಭಿಷೇಕ್ ಸಿಂಗ್ ಎಂಬುವವರು ಹೇಳಿದರು.
ಬೆಳಗ್ಗೆ ವ್ಯಾಪಕವಾಗಿ ಚಳಿ ಇರುವ ಕಾರಣಕ್ಕೆ ಇಲ್ಲಿನ ಜನರು ಮನೆಯಿಂದ ಹೊರ ಬರುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದೂ ಕಷ್ಟವಾಗಿದೆ. ಆದರೆ ವಿಧಿಇಲ್ಲದೇ ಮಕ್ಕಳನ್ನು ಪೋಷಕರೆ ಕೈ ಹಿಡಿದು ಶಾಲೆತನಕ ಕಳುಹಿಸಿ ಬರುತ್ತಿದ್ದಾರೆ.
ಬುಧವಾರ ಇಲ್ಲಿನ ತೆಂಡುವಾ ಟೋಲ್ ಪ್ಲಾಜಾ ಬಳಿ ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಬಿಸಲು ಕಂಡು ಬರುತ್ತಿದೆ. ಆದರೆ ಬೆಳಗಿನ ಮಂಜಿನಿಂದ ವಾಹನಗಳ ಸವಾರರು ಪರಿತಪಿಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವುದೆ ಸವಾಲಾಗಿದೆ. ಈ ಕಾರಣದಿಂದಲೇ ನಾವು ಮನೆಯಿಂದ ಹೊರ ಬರದಂತೆ, ನಿಧಾನವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದೇವೆ ಎಂದು ಗೋರಖ್‌ಪುರದ ಧರ್ಮಪಾಲ್‌ನ ನಿವಾಸಿ ಬೇಸರ ತಿಳಿಸಿದರು.












Click it and Unblock the Notifications