Mangaluru-Lakshadweep: ₹200-300 ಬೆಲೆಯ 'ಕ್ರೂಸ್ ಸೇವೆ' ಆರಂಭಿಸಲು ಭಾರೀ ಒತ್ತಾಯ: ಡಿಸಿಗೆ ನಿರ್ದೇಶನ
ಬೆಂಗಳೂರು, ಜನವರಿ 10: ಮಾಲ್ಡೀವ್ಸ್ ಹಾಗೂ ಭಾರತದ ಮಧ್ಯೆ ದ್ವೀಪಗಳ ಪ್ರವಾಸಿ ತಾಣಕ್ಕೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಮಧ್ಯೆ ಕರ್ನಾಟಕದ ಮಂಗಳೂರು-ಲಕ್ಷದ್ವೀಪಕ್ಕೆ ಕ್ರೂಸ್ ಸೇವೆ (Mangalore-Lakshadweep cruise service) ಪುನಾರಂಭಕ್ಕೆ ಪ್ರವಾಸಿಗರ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.
ಹೌದು, ಕರ್ನಾಟಕ ಕರಾವಳಿಯಿಂದ ಲಕ್ಷದ್ವೀಪಕ್ಕೆ ಅತ್ಯಂತ ಕಡಿಮೆ ₹200-300 ದರದಲ್ಲಿ ಕ್ರೂಸ್ ಸೇವೆಯು ಸ್ಥಗಿತಗೊಂಡು ವರ್ಷಗಳು ಕಳೆದಿವೆ. ಮಾಲ್ಡೀವ್ಸ್- ಭಾರತದ ಮಧ್ಯೆ ವಿವಾದದ ಬಳಿಕ ಲಕ್ಷದ್ವೀಪಕ್ಕೆ ಕ್ರೂಸ್ ಸೇವೆ ಪುನಾರಂಭಕ್ಕೆ ಕಾಲ ಕೂಡ ಬಂದಿದೆ.

ಲಕ್ಷದ್ವೀಪ ಅನ್ವೇಷಣೆಯಲ್ಲಿ ಪ್ರವಾಸಿಗರ ಆಸಕ್ತಿ
ವತಿಕಾ ಇಂಟರ್‌ನ್ಯಾಶನಲ್ ಟ್ರಾವೆಲ್ಸ್‌ನ ಮಾಲಿಕರಾದ ವತಿಕಾ ಪೈ, ಜನರು ಈ ಸುಂದರವಾದ ಕೇಂದ್ರಾಡಳಿತ ಪ್ರದೇಶ/ದ್ವೀಪಗಳ ಬಗ್ಗೆ ತಿಳಿಯಲು ಹೆಚ್ಚು ಉತ್ಸುಕರಾಗಿದ್ದಾರೆ. ಭಾರತದಲ್ಲಿನ ದ್ವೀಪಗಳತ್ತ ಒಲವು ಹೆಚ್ಚಾಗಿದ್ದು, ಲಕ್ಷದ್ವೀಪಕ್ಕೆ ಪ್ರಯಾಣ ಮಾಡುವ ಆಸಕ್ತಿ ಪ್ರವಾಸಿಗರಲ್ಲಿ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಪೂರಕವಾಗಿ ಕರಾವಳಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬಿಜೆಪಿಯ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಜಿಲ್ಲಾ ಆಡಳಿತಕ್ಕೆ ಮಂಗಳೂರು-ಲಕ್ಷದ್ವೀಪ ಕ್ರೂಸ್ ಸೇವೆ ಪುನಾರಂಭಕ್ಕೆ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶಿಸಿದ್ದಾರೆ.
ಕೇರಳದಿಂದ ದ್ವೀಪಕ್ಕೆ ತೆರಳಬೇಕಾದ ಸ್ಥಿತಿ ಇದೆ
ಮಂಗಳೂರು-ಲಕ್ಷದ್ವೀಪ ಪ್ರಯಾಣಿಕ ಸೇವೆ ಜಲಮಾರ್ಗಗಳ ಮೂಲಕ ಮರು ಪ್ರಾರಂಭಿಸಬೇಕೆಂಬ ಬೇಡಿಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಪ್ರಸ್ತುತದಲ್ಲಿ ಲಕ್ಷದ್ವೀಪಕ್ಕೆ ತೆರಳಬೇಕಾದರೆ ಪ್ರವಾಸಿಗರು ಪ್ರಾಥಮಿಕವಾಗಿ ಕೇರಳದ ಕೊಚ್ಚಿಯಿಂದ (Kochi of Kerala)ಹಡಗು ಅಥವಾ ವಿಮಾನದ ಮೂಲಕ ತೆರಳಬೇಕಿತ್ತು.
ಆದರೆ ಲಕ್ಷದ್ವೀಪವು ಭೌಗೋಳಿಕವಾಗಿ ಕೊಚ್ಚಿಗಿಂತ ಮಂಗಳೂರಿಗೆ ಹೆಚ್ಚು ಸಮೀಪದಲ್ಲಿದೆ. ಈ ನಡುಗಡ್ಡೆಗೆ ಬೇಕಾದ ಕಟ್ಟಡ ಸಾಮಗ್ರಿಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳನ್ನು ಮಂಗಳೂರಿನ ಐತಿಹಾಸಿಕ ಬಂದರಿನಿಂದಲೇ ರವಾನಿಸುತ್ತಾ ಬರಲಾಗಿದೆ.

ಮಂಗಳೂರಿನಿಂದ 250-300 ರೂ.ಗೆ ಕ್ರೂಸ್ ಸೇವೆ?
ಕ್ರೂಸ್ ಲೈನರ್ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಮಾರ್ಗ ಸೇವೆ ನೀಡುತ್ತಿತ್ತು. ಪ್ರತಿ ವ್ಯಕ್ತಿಗೆ ಆರಂಭಿಕ ರೂ.250 ರಿಂದ ರೂ. 300. ವರೆಗೆ ಅತೀ ಕಡಿಮೆ ಬೆಲೆಯಲ್ಲಿ ವಿಶೇಷ ಪ್ರವಾಸ ಪ್ಯಾಕೇಜ್ ಲಭ್ಯವಾಗಿತ್ತು. ಆದರೆ ಇದು ದೀರ್ಘಾವಧಿಗೆ ಮುಂದುವರಿಯದೇ ಕೆಲವೇ ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಇಂತಹ ಅದ್ಭುತ ಜಲಮಾರ್ಗ ಪ್ರವಾಸ ಸೇವೆ ಸ್ಥಗಿತಗೊಂಡಿದ್ದಕ್ಕೆ ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಅವರೇ ಪುನಃ ಸೇವೆ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೊ ಹಂಚಿಕೊಂಡಿದ್ದರು. ಅದಕ್ಕೆ ಮಾಲ್ಡೀವ್ಸ್ ಸಚಿವರು ತಗಾದೆ ತೆಗೆದು ಅಮಾನತುಗೊಂಡರು. ಈ ವಿಚಾರ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿತು. ಸಾಮಾಜಿಕ ಜಾಲತಾಣದಲ್ಲಿ ಲಕ್ಷದ್ವೀಪ ಸೇರಿದಂತೆ ಭಾರತದ ಕಡಲತೀರಗಳ ಪ್ರವಾಸೋದ್ಯಮದತ್ತ ಜನ ಒಲವು ಹೆಚ್ಚಾಯಿತು. ಹುಡುಕಾಟ ಆರಂಭಿಸಿದರು.
ಚಲೋ ಲಕ್ಷದ್ವೀಪ ಒತ್ತಾಯಕ್ಕೆ ಸಂಸದರ ಸ್ಪಂದನೆ
ಇದರ ಭಾಗವಾಗಿಯೇ 'ಚಲೋ ಲಕ್ಷದ್ವೀಪ' (#Chalolakshadweep) ಅಭಿಯಾನ ಆರಂಭಿಸಿದ್ದರು. ಈ ವೇಳೆ ನೆಟ್ಟಿಗರು ಮಂಗಳೂರು-ಲಕ್ಷದ್ವೀಪ ಕ್ರೂಸ್ ಸೇವೆ ಆರಂಭಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಅಗತ್ಯ ಸೂಚನೆ ನೀಡಿದ್ದಾರೆ.
ಎಲ್ಲವು ಅಂದುಕೊಂಡಂತೆ ಆಗಿ ಪುನಃ ಈ ಸೇವೆ ಆರಂಭವಾದರೆ ಪ್ರವಾಸಿಗರಿಗೆ ಭಾರಿ ಅನುಕೂಲವಾಗಲಿದೆ. ಲಕ್ಷದ್ವೀಪ ಅನ್ವೇಷಣೆಗೆ ಸಹಾಯವಾಗಲಿದೆ. ಪ್ರವಾಸೊದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ. ಮಾಲ್ವೀವ್ಸ್‌ಗೆ ಅತ್ಯಧಿಕ ಖರ್ಚಿನಲ್ಲಿ ತೆರಳುವ ಬದಲು ಅತೀ ಕಡಿಮೆ ಖರ್ಚಿನಲ್ಲಿ ಲಕ್ಷದ್ವೀಪ ಪ್ರವಾಸ ಮಾಡಬಹುದಾಗಿದೆ. ಮಂಗಳೂರು ಸೇರಿದಂತೆ ಕರ್ನಾಟಕದ ಸಾಂಸ್ಕೃತಿಕ, ಪರಂಪರೆ ಬೇರೆ ರಾಜ್ಯ ದೇಶಗಳ ಪ್ರವಾಸಿಗರಿಗೆ ಪರಿಚಯಿಸಲು ನೆರವಾಗುತ್ತದೆ.












Click it and Unblock the Notifications