ದೆಹಲಿ ಗಲಭೆ ಕೇಸ್: ಸಹೋದರಿ ಮದುವೆಗಾಗಿ ಉಮರ್ ಖಾಲಿದ್‌ಗೆ ಜಾಮೀನು
ನವದೆಹಲಿ, ಡಿಸೆಂಬರ್ 12: ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಉಮರ್ ಖಾಲಿದ್‌ಗೆ ದೆಹಲಿ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಉಮರ್ ಖಾಲಿದ್ ಸಹೋದರಿ ವಿವಾಹಕ್ಕೆ ಹಾಜರಾಗುವುದಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಕೋರ್ಟ್ 7 ದಿನಗಳವರೆಗೆ ಮಧ್ಯಂತರ ಜಾಮೀನು ನೀಡಿದೆ. ಡಿಸೆಂಬರ್ 30ರಂದು ಖಾಲಿದ್ ಸಹೋದರಿ ಮದುವೆಯಿದ್ದು, ಡಿಸೆಂಬರ್ 23 ರಿಂದ ಡಿಸೆಂಬರ್ 30ರವರೆಗೂ ಜಾಮೀನು ನೀಡಲಾಗಿದೆ.
ಕಳೆದ 2020ರ ಈಶಾನ್ಯ ದೆಹಲಿ ಗಲಭೆಯ ದೊಡ್ಡ ಪಿತೂರಿ ಪ್ರಕರಣದಲ್ಲಿ ಸೆಪ್ಟೆಂಬರ್ 2020 ರಿಂದ ಬಂಧನದಲ್ಲಿರುವ ಉಮರ್ ಖಾಲಿದ್‌ಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ವಿಶೇಷ ಪೀಠವು ಈ ಹಿಂದೆ ಅಕ್ಟೋಬರ್ 18 ರಂದು ಜಾಮೀನು ನಿರಾಕರಿಸಿತ್ತು.

ಖಾಲಿದ್ ಸಹೋದರಿ ವಿವಾಹದ ಬಗ್ಗೆ ನ್ಯಾಯಾಲಯಕ್ಕೆ ಕೋರಿಕೆ:
ಕಳೆದ ನವೆಂಬರ್ 18ರಂದು ಅವರು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ನ್ಯಾಯಾಲಯದ ಮುಂದೆ ಮಧ್ಯಂತರ ಜಾಮೀನಿಗೆ ಹಿರಿಯ ವಕೀಲ ತ್ರಿದೀಪ್ ಪೈಸ್ ಮೂಲಕ ಅರ್ಜಿ ಸಲ್ಲಿಸಿದರು. ಪ್ರಾಸಿಕ್ಯೂಷನ್ ಪರಿಶೀಲನೆ ನಡೆಸಿತು. ಖಾಲಿದ್ ಸಹೋದರಿಯ ವಿವಾಹವನ್ನು ಡಿಸೆಂಬರ್‌ನಲ್ಲಿ ನಿಗದಿಪಡಿಸಲಾಗಿದ್ದು, ಇದಕ್ಕಾಗಿ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇದು ಎರಡು ವಾರಗಳ ಅವಧಿಗೆ ಮಧ್ಯಂತರ ಜಾಮೀನು ಕೋರಿ ಆರೋಪಿ ಉಮರ್ ಖಾಲಿದ್ ಪರವಾಗಿ ಸಲ್ಲಿಸಲಾದ 439 CrPC ಯ ಹೊಸ ಅರ್ಜಿಯಾಗಿತ್ತು. ಕಳೆದ ನವೆಂಬರ್ 25, 2022ರಂದು ಆರೋಪಿ ಉಮರ್ ಖಾಲಿದ್ ಮಧ್ಯಂತರ ಜಾಮೀನು ಅರ್ಜಿಯ ಮೇಲೆ ಉತ್ತರ ಮತ್ತು ವಾದಗಳನ್ನು ಸಲ್ಲಿಸಲಾಗಿತ್ತು.
ಕಳೆದ ಶುಕ್ರವಾರ ಎಎಸ್‌ಜೆ ರಾವತ್ ಅವರು ಅರ್ಜಿಯಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ಪರಿಶೀಲಿಸಿದ ನಂತರ ಮನವಿಗೆ ಉತ್ತರವನ್ನು ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದರು.












Click it and Unblock the Notifications