ಅಪಾಯದ ಮಟ್ಟ ಮೀರಿ ಮತ್ತೆ ಭಯ ಹುಟ್ಟಿಸಿದ ಜೀವನದಿ ಯಮುನಾ!
ನವದೆಹಲಿ: ಭಾರಿ ಮಳೆಯಿಂದ ಯಮುನಾ ನದಿಯಲ್ಲಿ ಸೃಷ್ಟಿಯಾಗಿರುವ ಪ್ರವಾಹ ಮತ್ತೆ ಭುಗಿಲೆದ್ದಿದೆ. ಕಳೆದ ಕೆಲವು ದಿನದಿಂದ ರಾಷ್ಟ್ರ ರಾಜಧಾನಿ ಜನರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇಂದು ಮತ್ತೆ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿದಿದೆ. ಈ ಮೂಲಕ ದೆಹಲಿಯ ತಗ್ಗು ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿದೆ.
ಕಳೆದ 2-3 ವಾರದಿಂದ ರಾಷ್ಟ್ರ ರಾಜಧಾನಿ ಜನರಿಗೆ ನೆಮ್ಮದಿ ಇಲ್ಲ. ಒಂದು ಕಡೆ ಮಳೆ, ಇನ್ನೊಂದು ಕಡೆ ಪ್ರವಾಹ. ಹೀಗಾಗಿ ಇಡೀ ದೆಹಲಿ ನೀರಲ್ಲಿ ಕೊಚ್ಚಿ ಹೋಗಿದೆ. ಆದ್ರೆ ಈ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿದೆ ಅನ್ನುವಷ್ಟರಲ್ಲಿ ಮತ್ತೆ ಭಯ ಬಂದಿದೆ. ಭಾನುವಾರ ಬೆಳಗ್ಗೆಯಿಂದಲೇ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯಲ್ಲಿ 205.33 ಮೀಟರ್ ಎತ್ತರವನ್ನ ಅಪಾಯದ ಮಟ್ಟ ಎಂದು ಗುರುತಿಸಲಾಗುತ್ತೆ. ಆದರೆ ಈಗ ಯಮುನಾ ನದಿ 205.81 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಈ ಮೂಲಕ ಮತ್ತೊಮ್ಮೆ ದೆಹಲಿ ರಸ್ತೆಗಳಿಗೆ ನೀರು ನುಗ್ಗಿ ಬರುತ್ತಿದೆ.

ತಗ್ಗು ಪ್ರದೇಶದ ಜನರ ಸ್ಥಳಾಂತರ!
ಇನ್ನು ನದಿಯ ನೀರಿನ ಮಟ್ಟ ದಿಢೀರ್ ಏರಿಕೆ ಕಂಡ ಬೆನ್ನಲ್ಲೇ ತಗ್ಗು ಪ್ರದೇಗಳಲ್ಲಿ ವಾಸ ಮಾಡುವ ಜನರನ್ನ ಸ್ಥಳಾಂತರ ಮಾಡಲಾಗಿದೆ. ಈ ಮೂಲಕ ದೆಹಲಿ ಸುತ್ತಮುತ್ತ ಇವರಿಗೆ ಜಾಗ ನೀಡಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ನದಿ ನೀರು ಅಪಾಯದ ಹಂತ ಮೀರಿ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಯಮುನಾ ನದಿಗೆ ಇತರ ರಾಜ್ಯಗಳಿಂದಲೂ ಭಾರಿ ಪ್ರಮಾಣದ ನೀರು ಬರುತ್ತಿದೆ. ಭಾರಿ ಮಳೆಯ ಪರಿಣಾಮ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಕೇಜ್ರಿವಾಲ್ ಸರ್ಕಾರ ಪರದಾಡುತ್ತಿದೆ.
ದೆಹಲಿ ಮಳೆಯ ಇತಿಹಾಸ ಗೊತ್ತಾ?
ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವು ಸುಮಾರು 40 ವರ್ಷದ ಹಿಂದಿನ ದಾಖಲೆ ಧೂಳ್ ಮಾಡಿದೆ. ಹರಿಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಈ ಕಾರಣಕ್ಕೆ ಯಮುನಾ ನದಿ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ. ಈಗ ಒಂದಷ್ಟು ಹಿಡಿತಕ್ಕೆ ಬಂತು ಬಿಡು ಅಂತಾ ಜನರು ವಾಪಸ್ ಬರುವಾಗಲೇ ಪರಿಸ್ಥಿತಿ ಮತ್ತೆ ಕೈಮೀರಿ ಹೋಗಿದೆ. ಯಮುನಾ ನದಿ ಇತಿಹಾಸದಲ್ಲೇ ಜುಲೈ 13 ಮರೆಯಲಾಗದ ದಿನ. ಏಕೆಂದರೆ ಅಂದು ಯಮುನಾ ನದಿ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದ್ರೆ ಸುಮಾರು 208 ಮೀಟರ್‌ಗೆ ಏರಿತ್ತು. 1978ರಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಯಮುನಾ ನದಿ ಮಟ್ಟ 207.49 ಮೀಟರ್‌ಗೆ ತಲುಪಿತ್ತು.

ಒಟ್ಟಾರೆ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಭಯ ಆವರಿಸಿದೆ. ಯಾವ ಕ್ಷಣ ಏನಾಗುತ್ತೋ ಗೊತ್ತಿಲ್ಲ, ನೀರು ಯಾವ ಜಾಗಕ್ಕೆ ನುಗ್ಗುತ್ತೋ ಗೊತ್ತಿಲ್ಲ. ಹೀಗಾಗಿ ದೆಹಲಿ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳು ಸೇರಿದಂತೆ ಸುಪ್ರೀಂಕೋರ್ಟ್ ಕಟ್ಟಡ ಕೂಡ ಯಮುನಾ ನದಿಯ ಅಬ್ಬರಕ್ಕೆ ಬೆಚ್ಚಿ ಬೀಳುವಂತಾಗಿದೆ. ನದಿ ಮತ್ತೆ ಅಪಾಯದ ಮಟ್ಟ ಮೀರಿದ ಹಿನ್ನೆಲೆ ನದಿ ಬಳಿ ಸುಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ನಿರಾಶ್ರಿತರ ಶಿಬಿರ ತೆರೆದು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಮುಂದಾಗಿದೆ ಕೇಜ್ರಿವಾಲ್ ಸರ್ಕಾರ.












Click it and Unblock the Notifications