Delhi Hit and Run Case: ಮೃತ ಅಂಜಲಿ ಸ್ನೇಹಿತೆಯ ತನಿಖೆಗೆ ಮಹಿಳಾ ಆಯೋಗದ ಮುಖ್ಯಸ್ಥೆ ಒತ್ತಾಯ
ದೆಹಲಿ ಜನವರಿ 4: ಹೊಸ ವರ್ಷದ ರಾತ್ರಿ ದೆಹಲಿಯ ರಸ್ತೆಗಳಲ್ಲಿ ಸಂಭವಿಸಿದ ಭೀಕರ ಅಪಘಾತ ದೇಶದಲ್ಲಿ ಭೀತಿಯನ್ನು ಹುಟ್ಟಿಸಿದೆ. ಕಾರೊಂದು ಯುವತಿ ಬೈಕ್‌ಗೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು 12 ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿತ್ತು. ಕಾರಿಗೆ ಯುವತಿಯ ದೇಹ ಸಿಕ್ಕಿಕೊಂಡು ರಸ್ತೆಯುದ್ದಕ್ಕೂ ಕಾರು ಆಕೆಯ ದೇಹದೊಂದಿಗೆ ಚಲಿಸಿದೆ. ಅಪಘಾತ ಸಂಭವಿಸಿದ ವೇಳೆ ಮೃತ ಯುವತಿ ಅಂಜಲಿ ಜೊತೆಗೆ ಮತ್ತೋರ್ವ ಯುವತಿ ಇದ್ದಳು ಎನ್ನುವ ವಿಚಾರ ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಗಳಿಂದ ತಿಳಿದು ಬಂದಿದೆ.
ಘಟನೆಯ ವೇಳೆ ಅಂಜಲಿ ಸ್ನೇಹಿತೆ ನಿಧಿ ಬಗ್ಗೆ ತನಿಖೆ ನಡೆಸಬೇಕೆಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಒತ್ತಾಯಿಸಿದ್ದಾರೆ. ಅಂಜಲಿ ಅಪಘಾತದಿಂದ ಬದುಕುಳಿಯಲಿಲ್ಲ, ಆದರೆ ಆಕೆಯ ಸ್ನೇಹಿತೆ ನಿಧಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಆಕೆ ಪೊಲೀಸರಿಗಾಗಲಿ ಮನೆಯವರಿಗಾಗಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಘಟನೆಯ 48 ಗಂಟೆಗಳ ನಂತರ ಪೊಲೀಸರು ಆಕೆಯ ಬಗ್ಗೆ ಪತ್ತೆಹಚ್ಚಿದ್ದಾರೆ. ಆಕೆಯ ತನಿಖೆಯ ಬಗ್ಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ. ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆಯೂ ಮಲಿವಾಲ್ ಕೋರಿದ್ದಾರೆ. "ಅಂಜಲಿಯ ಸ್ನೇಹಿತೆ ಎಂದು ಕರೆದುಕೊಳ್ಳುವ ಈ ಹುಡುಗಿಯನ್ನು ತನಿಖೆ ಮಾಡಬೇಕು ಮತ್ತು ಅಪರಾಧಿಗಳನ್ನು ಗಲ್ಲಿಗೇರಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಮೃತ ಅಂಜಲಿ ಸ್ನೇಹಿತೆಯ ತನಿಖೆ
"ಅಂಜಲಿಯ ಸ್ನೇಹಿತೆ ಇದು ಅಂಜಲಿಯದ್ದೇ ತಪ್ಪು ಎಂದು ಪದೇ ಪದೇ ಹೇಳುತ್ತಿದ್ದಾರೆ. ಅವಳು ಯಾವ ರೀತಿಯ ಸ್ನೇಹಿತೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಅವಳ ಸ್ನೇಹಿತೆ ಕಾರಿನ ಕೆಳಗೆ ಬಂದು ಸಹಾಯಕ್ಕಾಗಿ ಕಿರುಚುತ್ತಾ ಅಳುತ್ತಿದ್ದಾಗ, ಅವಳು ಮನೆಗೆ ಓಡಿ ಹೋದಳು. ಅಪಘಾತದ ಬಗ್ಗೆ ಯಾರಿಗೂ ತಿಳಿಸಬೇಕು ಎಂದು ಅವಳು ಭಾವಿಸಲಿಲ್ಲ. ಆಕೆ ಪೊಲೀಸರಿಗೂ ಮಾಹಿತಿ ನೀಡಲಿಲ್ಲ. ಅವಳು ಪ್ರಯತ್ನಿಸಿದ್ದರೆ, ಅಜಲಿಯನ್ನು ಉಳಿಸಬಹುದಿತ್ತು'' ಎಂದು ಮಲಿವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂಜಲಿ ಸ್ನೇಹಿತೆ ನಿಧಿ ವಿರುದ್ಧ ಮಹಿಳಾ ಆಯೋಗ ಅಧ್ಯಕ್ಷೆ ಕಿಡಿ
ನಿಧಿಯನ್ನು ನಂಬಲು ಸಾಧ್ಯವಿಲ್ಲ ಎಂದು ಮಹಿಳಾ ಸಮಿತಿ ಮುಖ್ಯಸ್ಥೆ ಹೇಳಿದ್ದಾರೆ. "ಪೊಲೀಸರು ಅವಳನ್ನು ಪತ್ತೆಹಚ್ಚಿದಾಗಿನಿಂದ ನಿಧಿ ಅಂಜಲಿಯನ್ನು ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾಳೆ. ಸತ್ತ ಸ್ನೇಹಿತೆಗೂ ನಿಷ್ಠೆ ತೋರದ ಹುಡುಗಿಯನ್ನು ನಾವು ಹೇಗೆ ನಂಬುವುದು? ಅಂಜಲಿ ಸಾವು ನೋವಿನಿಂದ ಕೂಡಿದೆ. ಆಕೆಯನ್ನು ದೆಹಲಿಯ ಬೀದಿಗಳಲ್ಲಿ 12 ಕಿ.ಮೀ ಎಳೆದೊಯ್ಯಲಾಗಿದೆ. ಆಕೆಯ ನಗ್ನ ಶವ ರಸ್ತೆಯಲ್ಲಿ ಪತ್ತೆಯಾಗಿದೆ. ಇಷ್ಟು ನೋವು ಅನುಭವಿಸಿದ ಆ ಹುಡುಗಿಯ ತಪ್ಪೇನು? ಬಲಿಪಶುವನ್ನು ದೂಷಿಸುವುದನ್ನು ನಿಲ್ಲಿಸಿ" ಎಂದು ಅವರು ಹೇಳಿದರು.

ಅಂಜಲಿ ಸಾವನ್ನಪ್ಪಿದ್ದು ಹೇಗೆ?
ಡಿಸೆಂಬರ್ 3 ರಂದು ಸಂಜೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಹೊಸ ವರ್ಷದ ಪಾರ್ಟಿಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ತಾನು ಬರುವುದು ತಡವಾಗುತ್ತದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಮುಂಜಾನೆ 3.24 ಕ್ಕೆ ಮನೆಗೆ ವಾಪಸ್ ಆಗುವಾಗ ಬಲೆನೊ ಕಾರು ದೇಹವನ್ನು ಎಳೆದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಕರೆ ಬರುತ್ತದೆ. ದೆಹಲಿಯ ಜೊಂಟಿ ಗ್ರಾಮದ ಹನುಮಾನ್ ಮಂದಿರದ ಬಳಿ ಮುಂಜಾನೆ 4:11 ಕ್ಕೆ ಅವರಿಗೆ ಮೃತದೇಹ ಪತ್ತೆಯಾಗಿದೆ. ದೇಹವು ವ್ಯಾಪಕವಾದ ಗಾಯಗಳನ್ನು ಹೊಂದಿತ್ತು. ಬಟ್ಟೆ ಹರಿದಿತ್ತು ಮತ್ತು ದೇಹದಿಂದ ಕಾಲುಗಳು ಬೇರೆಯಾಗಿದ್ದವು.

ಆರೋಪಿಗಳ ವಿಚಾರಣೆ
ಪೊಲೀಸರು ಈವರೆಗೆ ಕಾರಿನಲ್ಲಿದ್ದ ಐವರನ್ನು ಬಂಧಿಸಿದ್ದಾರೆ. ಮಹಿಳೆಯೊಬ್ಬರು ತಮ್ಮ ಕಾರಿನಡಿ ಸಿಲುಕಿಕೊಂಡಿರುವುದು ನಮಗೆ ತಿಳಿದಿರಲಿಲ್ಲ ಮತ್ತು ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುವಾಗ ಮಾತ್ರ ನಮಗೆ ಅದು ಅರಿವಾಯಿತು ಎಂದು ಆರೋಪಿಗಳು ಹೇಳಿದ್ದಾರೆ. ವಿಚಾರಣೆ ವೇಳೆ ಶವ ನೋಡಿ ಸ್ಥಳದಿಂದ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಎಂದು ಗುರುತಿಸಲಾಗಿದೆ. ಸದ್ಯ ಅವರೆಲ್ಲರೂ ಪೊಲೀಸರ ವಶದಲ್ಲಿದ್ದಾರೆ.












Click it and Unblock the Notifications