ಓಮಿಕ್ರಾನ್ ಆತಂಕ: ದೆಹಲಿ ಜೊತೆ ಯಾವ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ?
ನವದೆಹಲಿ, ಡಿಸೆಂಬರ್ 27: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಸೋಮವಾರದಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶಿಸಿದೆ. ಸೋಮವಾರ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಗೊಳಿಸಲು ಆದೇಶಿಸಲಾಗಿದೆ.
ನವದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಕಳೆದ 24 ಗಂಟೆಗಳಲ್ಲಿ 290 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವಿನ ಪ್ರಕರಣವು ವರದಿಯಾಗಿತ್ತು. ಪಾಸಿಟಿವಿಟಿ ದರವು ಶೇ.0.55ರಷ್ಟಾಗಿದೆ. ಅದರ ಹಿಂದಿನ ದಿನ ಅಂದರೆ ಶನಿವಾರ ನವದೆಹಲಿಯಲ್ಲಿ 249 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಒಬ್ಬರು ಬಲಿಯಾಗಿದ್ದರು. ಅಂದು ಪಾಸಿಟಿವಿಟಿ ದರ ಶೇ.0.43ರಷ್ಟಿತ್ತು.
ಜನವರಿ 5ರಂದು ನಡೆಯಬೇಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ನಾಟಕ ಪ್ರದರ್ಶನವನ್ನು ಮುಂದೂಡಲಾಗಿದ್ದು, ಸರ್ಕಾರ ಹೊಸ ದಿನಾಂಕವನ್ನು ಘೋಷಿಸಿಲ್ಲ. ಜನವರಿ 5 ರಿಂದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಅದ್ಧೂರಿ ಕಾರ್ಯಕ್ರಮವನ್ನು ದೆಹಲಿ ಸರ್ಕಾರ ಯೋಜಿಸಿತ್ತು. ಆದರೆ, ಹೆಚ್ಚುತ್ತಿರುವ ಕೊವಿಡ್-19 ಪ್ರಕರಣಗಳ ಹಿನ್ನೆಲೆ ಈ ಪ್ರದರ್ಶನವನ್ನು ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸಿದ ತಕ್ಷಣ ನಾವು ಹೊಸ ದಿನಾಂಕವನ್ನು ಘೋಷಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇನ್ನು, ದೆಹಲಿ ಹೊರತಾಗಿ ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಅಸ್ಸಾಂನಲ್ಲಿ ಕಟ್ಟುನಿಟ್ಟಿನ ನಿಯಮ:
ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಒಮಿಕ್ರಾನ್ ಭೀತಿ ಹಿನ್ನೆಲೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಸಮಯವನ್ನು ಬದಲಾಯಿಸಲಾಗಿದೆ. ಭಾನುವಾರದಿಂದ ರಾತ್ರಿ 11.30 ರಿಂದ ಬೆಳಗ್ಗೆ 6 ಗಂಟೆವರೆಗೂ ಕರ್ಫ್ಯೂ ರಾತ್ರಿ ಜಾರಿಯಲ್ಲಿರುತ್ತದೆ.
ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಎಲ್ಲಾ ಕೆಲಸದ ಸ್ಥಳಗಳು, ವ್ಯಾಪಾರ/ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಡಾಬಾಗಳು ಮತ್ತು ಇತರ ತಿನಿಸುಗಳಲ್ಲಿ ಊಟ, ರೆಸ್ಟೋರೆಂಟ್‌ಗಳು / ಡಾಬಾಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವ ಮಾರಾಟದ ಕೌಂಟರ್‌ಗಳು, ಶೋ ರೂಂಗಳು ಇತ್ಯಾದಿಗಳು ತೆರೆದಿರುತ್ತವೆ. ಇದರ ಜೊತೆ ಕೋಲ್ಡ್ ಸ್ಟೋರೇಜ್‌ಗಳು ಮತ್ತು ಗೋದಾಮುಗಳು, ದಿನಸಿ, ಹಣ್ಣುಗಳು ಮತ್ತು ತರಕಾರಿ ಅಂಗಡಿಗಳು, ಹಾಲಿನ ಡೈರಿ ಮತ್ತು ಹಾಲಿನ ಬೂತ್‌ಗಳು ರಾತ್ರಿ 10.30 ರವರೆಗೆ ತೆರೆದಿರುತ್ತವೆ.
ಉತ್ತರ ಪ್ರದೇಶ:
ಉತ್ತರ ಪ್ರದೇಶ ಸರ್ಕಾರವು ಡಿಸೆಂಬರ್ 25ರ ಶುಕ್ರವಾರದಿಂದಲೇ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಇತರ ನಿರ್ಬಂಧಗಳನ್ನು ಸಹ ಜಾರಿಗೆ ತರಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ 200ಕ್ಕಿಂತ ಹೆಚ್ಚು ಜನರಿಗೆ ಮದುವೆಗೆ ಅವಕಾಶ ನೀಡುವಂತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳಿಂದಾಗಿ ಹೆಚ್ಚಿನ ನಿಗಾದ ನಡುವೆ ಹೊಸ ನಿರ್ದೇಶನಗಳನ್ನು ನೀಡಲಾಗಿದೆ.
ಮಹಾರಾಷ್ಟ್ರ:
ಮಹಾರಾಷ್ಟ್ರ ಸರ್ಕಾರವು ತನ್ನ ಮಾರ್ಗಸೂಚಿಗಳು ಮತ್ತು SoP ಗಳನ್ನು ಪರಿಷ್ಕರಿಸಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಮಧ್ಯರಾತ್ರಿ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಕಳೆದ ಶುಕ್ರವಾರ 1,410 ಹೊಸ ಕೋವಿಡ್ -19 ಪ್ರಕರಣಗಳು, 12 ಸಾವುಗಳು ಮತ್ತು 868 ಡಿಸ್ಚಾರ್ಜ್‌ಗಳನ್ನು ವರದಿ ಮಾಡಿದೆ. ಸಕ್ರಿಯ ಕ್ಯಾಸೆಲೋಡ್ 8,426 ಆಗಿದೆ. ಅಲ್ಲದೆ, ರಾಜ್ಯದಲ್ಲಿ 20 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಹೊಸ ರೂಪಾಂತರದ ಒಟ್ಟು ಸಂಖ್ಯೆಯನ್ನು 108ರ ಗಡಿ ದಾಟಿದೆ.
ಭಾರತದಲ್ಲಿ 422 ಓಮಿಕ್ರಾನ್ ಪ್ರಕರಣ:
ಭಾರತದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 422ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳುಗಳು ವರದಿಯಾಗಿದ್ದು, ಈವರೆಗೆ 108 ಮಂದಿಗೆ ಓಮಿಕ್ರಾನ್ ಅಂಟಿರುವುದು ದೃಢಪಟ್ಟಿದೆ. ದೆಹಲಿಯಲ್ಲಿ 79 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 23 ಜನ ಚೇತರಿಸಿಕೊಂಡಿದ್ದಾರೆ. ಗುಜರಾತ್‌ನಲ್ಲಿ 43 ಪ್ರಕರಣ ಪತ್ತೆಯಾಗಿದ್ದು, 10 ಸೋಂಕಿತರು ಚೇತರಿಸಿಕೊಂಡಿದ್ದಾರೆ.
ತೆಲಂಗಾಣದಲ್ಲಿ ಹೊಸ ರೂಪಾಂತರದ 41 ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಚೇತರಿಸಿಕೊಂಡಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 38 ಪ್ರಕರಣಗಳು ದಾಖಲಾಗಿದ್ದು ಒಬ್ಬ ಓಮಿಕ್ರಾನ್ ಸೋಂಕಿತ ಗುಣಮುಖನಾಗಿದ್ದಾನೆ. ಕರ್ನಾಟಕದಲ್ಲಿ 31 ಪ್ರಕರಣಗಳು ದಾಖಲಾಗಿದ್ದು 15 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications