Delhi Floods: ಯಮುನಾ ನೀರಿನ ಮಟ್ಟದಲ್ಲಿ ಮತ್ತೆ ಹೆಚ್ಚಳ: ದೆಹಲಿಗೆ ಹೆಚ್ಚಾದ ಆತಂಕ
ನವದೆಹಲಿ, ಜುಲೈ 17: ಕಳೆದ ನಾಲ್ಕುದಿನಗಳಿಂದ ನೀರಿನ ಮಟ್ಟದಲ್ಲಿ ಕುಸಿತ ಕಂಡಿದ್ದ ಯಮುನಾ ನದಿಯಲ್ಲಿ ಮತ್ತೆ ನೀರಿನ ಹೆಚ್ಚಾಗುತ್ತಿದ್ದು ದೆಹಲಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಭಾನುವಾರ ರಾತ್ರಿ 10 ಗಂಟೆಗೆ 205.52 ಮೀಟರ್ ನಷ್ಟಿದ್ದ ನೀರಿನ ಮಟ್ಟ ಸೋಮವಾರ ಬೆಳಗ್ಗೆ 205.76 ಮೀಟರ್ ಗೆ ಹೆಚ್ಚಳವಾಗಿದೆ. ಈ ದಿನದ ಅಂತ್ಯಕ್ಕೆ 206 ಮೀಟರ್ ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವಾರದವರೆಗೆ ಅಪಾಯದ ಗುರುತು 205.33 ಮೀಟರ್‌ಗಿಂತ ಹೆಚ್ಚಾಗಿರುತ್ತದೆ.

ಕಳೆದ ಒಂದು ವಾರದಿಂದ ಯಮುನಾ ನದಿ ಉಕ್ಕಿ ಹರಿದ ಕಾರಣ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ದೆಹಲಿಯ ಕೆಂಪುಕೋಟೆ ಗೋಡೆಯವರೆಗೂ ನೀರು ಬಂದ ಕಾರಣ ಹೆಚ್ಚಿನ ಆತಂಕ ಉಂಟಾಗಿತ್ತು, ಸೇನೆ, ನೌಕಾಪಡೆ ಮತ್ತು ದೆಹಲಿ ಆಡಳಿತ ಜಂಟಿಯಾಗಿ ನೀರು ನುಗ್ಗುವದನ್ನು ತಡೆಯಲು ಹರಸಾಹಸ ಪಟ್ಟರು.
ಮತ್ತೆ ಪ್ರವಾಹದ ಆತಂಕ
ಕಳೆದ ಒಂದು ವಾರದಿಂದ ಪ್ರವಾಹದ ಪರಿಸ್ಥಿತಿಯನ್ನು ನಿಭಾಯಿಸಲು ದೆಹಲಿ ಸರ್ಕಾರ ಹೆಣಗಾಡಿದೆ. ಪರಿಸ್ಥಿತಿ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂತು ಎನ್ನುವಾಗಲೇ ಮತ್ತೊಮ್ಮೆ ನೀರಿನ ಮಟ್ಟ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹರಿಯಾಣದ ಕೆಲವು ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದು ನೀರಿನ ಮಟ್ಟದಲ್ಲಿ ಸ್ವಲ್ಪ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ದೆಹಲಿ ಸಚಿವ ಅತಿಶಿ ಹೇಳಿದ್ದಾರೆ. ಕೇಂದ್ರ ಜಲ ಆಯೋಗವನ್ನು ಉಲ್ಲೇಖಿಸಿ, ಸೋಮವಾರ ರಾತ್ರಿಯ ವೇಳೆಗೆ ಮಟ್ಟವು 206.10 ಮೀಟರ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಇದರಿಂದ ದೆಹಲಿಯ ಜನರಿಗೆ ಅಪಾಯವಿಲ್ಲ ಎಂದು ಹೇಳಿದ ಅವರು, ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಕಡಿಮೆ ಇರುವವರೆಗೆ ಮನೆಗೆ ಮರಳದಂತೆ ಪರಿಹಾರ ಆಶ್ರಯದಲ್ಲಿ ಇರುವ ಜನರಿಗೆ ಮನವಿ ಮಾಡಿದ್ದಾರೆ.
ಉತ್ತಾರಖಂಡ್‌ನಲ್ಲಿ ಭಾರಿ ಮಳೆ ಸಾಧ್ಯತೆ
ಉತ್ತರಾಖಂಡ್‌ನ 7 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಡೆಹ್ರಾಡೂನ್, ತೆಹ್ರಿ, ಪೌರಿ, ಹರಿದ್ವಾರ, ಚಂಪಾವತ್, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರಗಳ ಏಳು ಜಿಲ್ಲೆಗಳಿಗೆ ಜುಲೈ 17 ಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ಹವಾಮಾನ ಕೇಂದ್ರವು ಜುಲೈ 18 ರಂದು ರಾಜ್ಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದೆ. ಜುಲೈ 19ರಂದು ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆ ನಿರ್ದೇಶಕ ಡಾ.ಬಿಕ್ರಮ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ರೆಡ್ ಅಲರ್ಟ್ ಎಚ್ಚರಿಕೆ ಕೊಟ್ಟಿದ್ದು, ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ವಿಪತ್ತು ನಿರ್ವಹಣೆಯ ಇನ್ಸಿಡೆಂಟ್ ರೆಸ್ಪಾನ್ಸ್ ಸಿಸ್ಟಂನ ಅಧಿಕಾರಿಗಳು ಮತ್ತು ಇಲಾಖಾ ನೋಡಲ್ ಅಧಿಕಾರಿಗಳು ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಮಾತನಾಡಿ, "ಎಸ್‌ಡಿಆರ್‌ಎಫ್‌ನ ಜಲ ಪೊಲೀಸರ ಹೆಚ್ಚುವರಿ ಪಡೆಗಳನ್ನು ಸೂಕ್ಷ್ಮ ಜಲಾವೃತ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಇದರಿಂದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಕೈಗೊಳ್ಳಬಹುದು." ಎಂದು ಹೇಳಿದರು.
ಭಾನುವಾರ ಮಳೆ ಕಡಿಮೆಯಾದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಜೋಶಿಮಠ-ಮಲಾರಿ ಮೋಟಾರುಮಾರ್ಗದ ಗ್ರಾಫ್ ಸೇತುವೆಯ ಪ್ಲಾಟ್‌ಫಾರ್ಮ್ ಮಲಾರಿಯಿಂದ ಸುಮ್ನಾವರೆಗಿನ ಸುಮಾರು 8 ಕಿ.ಮೀ ದೂರದಲ್ಲಿರುವ ಗ್ರುತಿ ಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಹಾನಿಯಾಗಿದೆ.
ಮೋಟಾರು ಸೇತುವೆಯ ಮೇಲೆ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಏತನ್ಮಧ್ಯೆ, ಹರಿದ್ವಾರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.












Click it and Unblock the Notifications