Delhi Election: ಎಎಪಿ ಅಧಿಕಾರ ಕಿತ್ತುಕೊಂಡ ಕೇವಲ 2% ಮತ ಹಂಚಿಕೆ ವ್ಯತ್ಯಾಸ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಎಎಪಿಯ 10 ವರ್ಷಗಳ ಆಡಳಿತ ಅಂತ್ಯವಾಗಿದೆ. 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಮತ್ತೆ ಸರ್ಕಾರ ರಚನೆ ಮಾಡಲು ಸಜ್ಜಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಚುನಾವಣೆಯಲ್ಲಿ 10% ಮತ ಪಾಲನ್ನು ಕಳೆದುಕೊಂಡಿದೆ. 2015, 2020 ಮತ್ತು 2025 ರಲ್ಲಿ ಎಎಪಿ ಮತ್ತು ಬಿಜೆಪಿಯ ಮತ ಪಾಲುಗಳ ನಡುವಿ ಹೋಲಿಕೆ ಇಲ್ಲಿದೆ.
2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆ ಮತಗಳಲ್ಲಿ 45.76% ಪಾಲು ಪಡೆದಿದ್ದು, ಎಎಪಿ 43.55ರಷ್ಟು ಮತಗಳನ್ನು ಗಳಿಸಿದೆ, ಕಾಂಗ್ರೆಸ್ 6.36% ರಷ್ಟು ಪಾಲನ್ನು ಹೊಂದಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಮತಗಳಲ್ಲಿ ಆಮ್ ಆದ್ಮಿ ಪಕ್ಷ 53.57 ರಷ್ಟು ಪಾಲು ಪಡೆಯುವ ಮೂಲಕ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ 10% ಮತದ ಪಾಲು ಕಡಿಮೆಯಾಗಿದ್ದರು ಬರೋಬ್ಬರಿ 40 ಸ್ಥಾನಗಳನ್ನು ಕಳೆದುಕೊಂಡಿದೆ.

2020ರಲ್ಲಿ ಬಿಜೆಪಿ ಪಡೆದ ಮತದ ಪಾಲು 38.51 ರಷ್ಟಿತ್ತು, ಈ ಬಾರಿ 7% ಮತದ ಪಾಲು ಹೆಚ್ಚಿಸಿಕೊಂಡಿದ್ದು ಕಳೆದ ಬಾರಿಗಿಂತ 40ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬೀಗಿದೆ. ಕಾಂಗ್ರೆಸ್ ಕೂಡ ಎಎಪಿ ಸೋಲಿಗೆ ಪ್ರಮುಖ ಕಾರಣವಾಗಿದೆ. 2020ರಲ್ಲಿ 4.26 ರಷ್ಟಿದ್ದ ಕಾಂಗ್ರೆಸ್ ಮತದ ಪಾಲು ಈ ಬಾರಿ 6.36ಕ್ಕೆ ಏರಿಕೆಯಾಗಿದೆ. ಇದು ಅನೇಕ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು.
ಈ ಬಾರಿ ದೆಹಲಿ ಚುನಾವಣೆಯಲ್ಲಿ ಮುಸ್ಲಿಂ ಮತಗಳ ವಿಭಜನೆಯಾಗಿದ್ದರೂ ಎಎಪಿ ಮುಸ್ಲಿಂ ಪ್ರಾಬಲ್ಯವಿರುವ 7 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಒಟ್ಟು ನಾಲ್ಕು ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಬಲ್ಲಿಮಾರನ್‌ನಿಂದ ಇಮ್ರಾನ್ ಹುಸೇನ್ (ಎಎಪಿ), ಮಾಟಿಯಾ ಮಹಲ್‌ನಿಂದ ಆಲೆ ಮೊಹಮ್ಮದ್ ಇಕ್ಬಾಲ್ (ಎಎಪಿ), ಸೀಲಾಂಪುರದಿಂದ ಚೌಧರಿ ಜುಬೈರ್ ಅಹ್ಮದ್ (ಎಎಪಿ) ಗೆದ್ದ ಅಭ್ಯರ್ಥಿಗಳಾಗಿದ್ದಾರೆ.
2020 ರಲ್ಲಿ, ಎಎಪಿ ಮುಸ್ಲಿಂ ಜನಸಂಖ್ಯೆಯ ಏಳು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತ್ತು. ಓಖ್ಲಾ, ಬಾಬರ್‌ಪುರ, ಮುಸ್ತಫಾಬಾದ್, ಸೀಲಾಂಪುರ್, ಮತಿಯಾ ಮಹಲ್, ಬಲ್ಲಿಮಾರನ್ ಮತ್ತು ಚಾಂದನಿ ಚೌಕ್‌ನಲ್ಲಿ ಗೆದ್ದಿದ್ದು, ಈ ಬಾರಿ ಅದು ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
2020 ರಲ್ಲಿ, ಮುಸ್ಲಿಮರು ಹೆಚ್ಚಾಗಿ ಎಎಪಿಗೆ ಮತ ಹಾಕಿದ್ದರೂ, ಈ ಬಾರಿ ಸಮುದಾಯದ ಮತಗಳು ಹಂಚಿಕೆಯಾಗಿದೆ. ಆದರೂ ಎಎಪಿ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಎಎಪಿ ಮತ್ತು ಬಿಜೆಪಿ ಪಡೆದ ಮತಗಳ ಪಾಲಿನಲ್ಲಿ ಕೇವಲ 2.21% ರಷ್ಟು ವ್ಯತ್ಯಾಸವಿದ್ದರೂ ಆಮ್ ಆದ್ಮಿ ಪಕ್ಷ ಬರೋಬ್ಬರಿ 40 ಸ್ಥಾನಗಳನ್ನು ಕಳೆದುಕೊಂಡಿದೆ.












Click it and Unblock the Notifications