ಅಗ್ನಿಪಥ್ ಪ್ರತಿಭಟನೆ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರಿಶೀಲನಾ ಸಭೆ
ನವದೆಹಲಿ, ಜೂನ್ 19: ದೇಶವ್ಯಾಪಿ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧದ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಮಹತ್ವದ ಸಭೆ ಕರೆದಿದ್ದಾರೆ.
ನವದೆಹಲಿಯ ತಮ್ಮ ನಿವಾಸದಲ್ಲಿ ಸಭೆ ಕರೆದಿರುವ ರಾಜನಾಥ್ ಸಿಂಗ್, ಅಗ್ನಿಪಥ್ ಯೋಜನೆಯ ಕುರಿತು ಪುನರ್ ಪರಿಶೀಲನೆ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆ 10.30ರ ವೇಳೆಗೆ ಆರಂಭವಾಗುವ ಸಭೆಯಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವುದು. ದೇಶದಲ್ಲಿ ತೀವ್ರಗೊಳ್ಳುತ್ತಿರುವ ಪ್ರತಿಭಟನೆಗಳನ್ನು ತಣ್ಣಗಾಗಿಸುವುದಕ್ಕೆ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಎಂಟು ರಾಜ್ಯದಲ್ಲಿ ಕೆರಳಿ ರಸ್ತೆಗಿಳಿದ ಪ್ರತಿಭಟನಾಕಾರರು: ಕೇಂದ್ರ ಸರ್ಕಾರವು ಜೂನ್ 14ರ ಮಂಗಳವಾರ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಅನಾವರಣಗೊಳಿಸಿದ್ದು, ಇದನ್ನು "ಪರಿವರ್ತನೆ" ಯೋಜನೆ ಎಂದು ಕರೆಯಿತು. ದೇಶದ ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರ ನೇಮಕಾತಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.
ಆದರೆ, ಕೇಂದ್ರ ಸರ್ಕಾರದ ವಿರುದ್ಧ ಎಂಟು ರಾಜ್ಯಗಳಲ್ಲಿ ಯುವ ಸಮುದಾಯ ಕೆರಳಿ ರಸ್ತೆಗಿಳಿಯಿತು. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಯೋಜನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ರೈಲಿನ ಬೋಗಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತು, ಈ ಹಂತದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ 700 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಎರಡು ದಿನದಲ್ಲಿ ಎರಡನೇ ಬಾರಿ ರಾಜನಾಥ್ ಸಭೆ: ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ಮರುಘಳಿಗೆಯಲ್ಲೇ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿತು. ಕಳೆದ ಎರಡು ದಿನಗಳಲ್ಲಿ ಪ್ರತಿಭಟನೆಯು ಉಗ್ರ ರೂಪಕ್ಕೆ ತಿರುಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡನೇ ಬಾರಿ ಸಭೆ ಕರೆದಿದ್ದಾರೆ. ಎರಡು ದಿನಗಳಲ್ಲಿ ಅವರು ಕರೆದಿರುವ ಎರಡನೇ ಮಹತ್ವದ ಸಭೆ ಇಂದಿನದ್ದಾಗಿದೆ. ಭಾನುವಾರ ನಡೆಯುವ ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಂಡು ಬಂದಿದೆ.

ಏನಿದು ಅಗ್ನಿಪಥ್ ನೇಮಕಾತಿ ಯೋಜನೆ?: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.












Click it and Unblock the Notifications