Government Employee: ಸಚಿವ ಸಂಪುಟ ಸಭೆ ಬಳಿಕ ಸರ್ಕಾರಿ ನೌಕರರಿಗೆ ಹಬ್ಬದ ಉಡುಗೊರೆ
ನವದೆಹಲಿ, ಅಕ್ಟೋಬರ್ 15: 8ನೇ ವೇತನ ಆಯೋಗ ರಚನೆ ಬಗ್ಗೆ ಸದ್ಯಕ್ಕೆ ತೀರ್ಮಾನ ಕೈಗೊಳ್ಳದಿದ್ದರೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಎನ್‌ಡಿಎ ಮೈತ್ರಿಕೂಟದ ಸರ್ಕಾರ ತೀರ್ಮಾನ ಮಾಡಬೇಕಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದ್ದು, ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಉಡುಗೊರೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ, ಮುಂದಿನ ಸಚಿವ ಸಂಪುಟ ಸಭೆಯತ್ತ ನೌಕರರ ಚಿತ್ತ ನೆಟ್ಟಿದೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲು ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತದೆ. 7ನೇ ವೇತನ ಆಯೋಗದ ಶಿಫಾರಸು ಮತ್ತು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧರಿಸಿ ಡಿಎ ಹೆಚ್ಚಳದ ಕುರಿತು ಸರ್ಕಾರ ಲೆಕ್ಕಾಚಾರ ಹಾಕಿ ಘೋಷಣೆಯನ್ನು ಮಾಡುತ್ತದೆ.

ದೀಪಾವಳಿಗೂ ಮುನ್ನ ಶೇ 3ರಷ್ಟು ಡಿಎ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂಬ ಮಾಹಿತಿ ಇದೆ. ಅಕ್ಟೋಬರ್ 9ರ ಸಚಿವ ಸಂಪುಟ ಸಭೆಯಲ್ಲಿಯೇ ಈ ಕುರಿತು ಘೋಷಣೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಆದ್ದರಿಂದ ಮುಂದಿನ ಸಂಪುಟ ಸಭೆಯಲ್ಲ ಎಲ್ಲರ ಗಮನವಿದೆ.
ಸಚಿವರಿಗೆ ಮನವಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟ ಕೆಲವು ದಿನಗಳ ಹಿಂದೆ ಕೇಂದ್ರ ಹಣಕಾಸು ಖಾತೆ ಸಚಿವ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ದೀಪಾವಳಿ ಹಬ್ಬಕ್ಕೂ ಮುನ್ನ ಡಿಎ ಹೆಚ್ಚಳದ ಕುರಿತು ತೀರ್ಮಾನವನ್ನು ಕೈಗೊಂಡು, ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದೆ. ಅಕ್ಟೋಬರ್ 31ರ ನಂತರ ದೀಪಾವಳಿ ಹಬ್ಬವಿದ್ದೂ ಅದಕ್ಕೂ ಮೊದಲು ಸಚಿವ ಸಂಪುಟ ಸಭೆಯೂ ನಿಗದಿಯಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ 50ರಷ್ಟು ಡಿಎ ಪಡೆಯುತ್ತಿದ್ದಾರೆ. ಹೊಸದಾಗಿ ಡಿಎ ಹೆಚ್ಚಳವಾದರೆ ಅದು ಶೇ 3ರಷ್ಟು ಆಗಲಿದೆ. ಆಗ ಒಟ್ಟು ಡಿಎ ಶೇ 53ರಷ್ಟಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರವಾಗಿದೆ. ಡಿಎ ಹೆಚ್ಚಳವಾದರೆ ಕೋಟ್ಯಾಂತರ ಸರ್ಕಾರಿ ನೌಕರರು, ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ.
ಡಿಎ ಹೆಚ್ಚಳದ ಕುರಿತು ಅಕ್ಟೋಬರ್‌ನಲ್ಲಿ ಘೋಷಣೆಯಾದರೂ ಸಹ ಅದು ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಆದ್ದರಿಂದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಮೂರು ತಿಂಗಳ ಹೆಚ್ಚುವರಿ ಲಾಭಗಳು ಸರ್ಕಾರಿ ನೌಕರರಿಗೆ ಸಿಗುತ್ತದೆ. ಆದ್ದರಿಂದ ನೌಕರರು ದೀಪಾವಳಿಗೂ ಮೊದಲೇ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಲಿ ಎಂದು ಕಾಯುತ್ತಿದ್ದಾರೆ.
ಕಳೆದ ವರ್ಷವೂ ದೀಪಾವಳಿ ಹಬ್ಬಕ್ಕೆ ಮೊದಲು ಸರ್ಕಾರ ಶೇ 3ರಷ್ಟು ಡಿಎ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿತ್ತು. ಈ ವರ್ಷವೂ ಅದೇ ಮಾದರಿಯಲ್ಲಿ ಡಿಎ ಹೆಚ್ಚಳ ಮಾಡಿ, ಸರ್ಕಾರಿ ನೌಕರರಿಗೆ ಹಬ್ಬದ ಗಿಫ್ಟ್ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರದ ಡಿಎ ಹೆಚ್ಚಳಕ್ಕೆ ಕಾಯದೇ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಶೇ 4ರಷ್ಟು ಡಿಎ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದಾಗಿ ಹಬ್ಬದ ಸಂದರ್ಭದಲ್ಲಿ 1.80 ಲಕ್ಷ ಸರ್ಕಾರಿ ನೌಕರರು, 1.70 ಲಕ್ಷ ನಿವೃತ್ತರಿಗೆ ಉಡುಗೊರೆ ನೀಡಿದ್ದಾರೆ.
2024ರ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರ್ಕಾರ ಶೇ 4ರಷ್ಟು ಡಿಎ ಹೆಚ್ಚಳ ಮಾಡಿತ್ತು. ಇದು ಜನವರಿ 1ರಿಂದಲೇ ಜಾರಿಯಾಗಿತ್ತು. ಆಗ ಡಿಎ ಶೇ 46ರಿಂದ 50ಕ್ಕೆ ಏರಿಕೆಯಾಗಿತ್ತು. ಈಗ ಶೇ 3ರಷ್ಟು ಡಿಎ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಇದೆ.
ಹಣ ದುಬ್ಬದರ, ಜೀವನಾವಶ್ಯಕ ವಸ್ತುಗಳ ದುಬಾರಿ ಬೆಲೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಡಿಎ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳುವುದು ಅಗತ್ಯವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲೇ ಈ ಕುರಿತು ತೀರ್ಮಾನ ಕೈಗೊಂಡು ಶೇ 3ರಷ್ಟು ಡಿಎ ಹೆಚ್ಚಳ ಮಾಡಬಹುದು ಎಂದು ಕೇಂದ್ರ ಸರ್ಕಾರಿ ನೌಕರರು ಕಾಯುತ್ತಿದ್ದಾರೆ.












Click it and Unblock the Notifications