ಬೆಂಗಳೂರಿನಲ್ಲಿ ಬೆಳೆದ ದಾವೂದ್ ಇಬ್ರಾಹಿಂ ರಹಸ್ಯ ಮಗ ಮತ್ತೊಮ್ಮೆ ನೆನಪು
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಒಬ್ಬ ಮಗ ಕರಾಚಿಯ ಮಸೀದಿಯೊಂದರಲ್ಲಿ ಮೌಲ್ವಿ ಆಗಿದ್ದಾನೆ ಎಂಬ ಸುದ್ದಿ ಈಗಾಗಲೇ ಓದಿರುತ್ತೀರಿ. ದಾವೂದ್ ಗೆ ಒಬ್ಬ ರಹಸ್ಯವಾದ ಮಗನಿದ್ದಾನೆ. ಆತನನ್ನು ಬೆಂಗಳೂರಿನಲ್ಲಿ ಬೆಳೆಸಲಾಗಿದೆ ಎಂಬ ಸಂಗತಿಯನ್ನು ಈಗ ಮತ್ತೆ ನೆನಪಿಸಿಕೊಳ್ಳಬೇಕಿದೆ.
ಡಯಲ್ ಡಿ ಫಾರ್ ಡಾನ್ ಎಂಬ ಪುಸ್ತಕ ಬರೆದಿರುವ ಸಿಬಿಐನ ಮಾಜಿ ಜಂಟಿ ನಿರ್ದೇಶಕ ನೀರಜ್ ಕುಮಾರ್, ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ನಟಿಯೊಬ್ಬಳನ್ನು ದಾವೂದ್ ರಹಸ್ಯವಾಗಿ ಮದುವೆಯಾಗಿದ್ದಾನೆ. ಆ ದಾಂಪತ್ಯಕ್ಕೆ ಮಗನೊಬ್ಬನಿದ್ದಾನೆ ಎಂಬ ಸ್ಫೋಟಕ ಮಾಹಿತಿ ಬಯಲಿಗಿಟ್ಟಿದ್ದಾರೆ.

1993ರ ಮುಂಬೈ ಸ್ಫೋಟದ ನಂತರ ಹಲವರನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ ಅಹ್ಮದ್ ಮನ್ಸೂರ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಯಿತು. ಆತನಿಗೆ ದಾವೂದ್ ಇಬ್ರಾಹಿಂ ಜತೆಗೆ ನಿಕಟವಾದ ಸಂಪರ್ಕವಿತ್ತು. ಅಂದಹಾಗೆ ದಾವೂದ್ ನ ಹವಾಲ ವ್ಯವಹಾರವನ್ನು ಮನ್ಸೂರ್ ನೋಡಿಕೊಳ್ಳುತ್ತಿದ್ದ.
ವಿಚಾರಣೆ ವೇಳೆ ಬಹಿರಂಗಗೊಂಡಿದ್ದೇ ದಾವೂದ್ ಇಬ್ರಾಹಿಂ ಹಾಗೂ ಬಾಲಿವುಡ್ ನಟಿಯ ವಿವಾಹ ಪ್ರಸಂಗ. ರಹಸ್ಯವಾಗಿ ನಟಿಯನ್ನು ಮದುವೆಯಾಗಿದ್ದ ಪಾತಕಿಗೆ ಮಗನಿದ್ದಾನೆ. ಆತನನ್ನು ಬೆಂಗಳೂರಿನಲ್ಲಿ ಬೆಳೆಸಲಾಗಿದೆ. ಇನ್ನೂ ಅಚ್ಚರಿ ಸಂಗತಿ ಏನೆಂದರೆ, ಆ ನಟಿಯ ಸೋದರಿಯೇ ಬೆಂಗಳೂರಿನಲ್ಲಿ ಆ ಮಗುವನ್ನು ಬೆಳೆಸಿದ್ದಾಳೆ ಎಂಬ ಮಾಹಿತಿಯನ್ನು ಮನ್ಸೂರ್ ತಿಳಿಸಿದ್ದಾನೆ.












Click it and Unblock the Notifications