Cyclone Mocha: 5 ದಿನ ಶಾಖದ ಅಲೆಯಿಂದ ಮುಕ್ತಿ: ಮೇ 12ರವರೆಗೆ ದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ!
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಮೇ 8 ರಿಂದ ಮೇ 12 ರವರೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದ ಪ್ರಭಾವದಡಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಚಂಡಮಾರುತ ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೇ 8 ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದ್ದು, ಮೇ 9ರಿಂದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಲಿದ್ದು ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಚಂಡಮಾರುತವು ಬಂಗಾಳ ಕೊಲ್ಲಿಯ ಕಡೆಗೆ ಚಲಿಸುತ್ತದೆ. ಸೈಕ್ಲೋನ್ ಮೋಚಾ ಎಂದು ಹೆಸರಿಸಲಾದ ಸೈಕ್ಲೋನಿಕ್ ಚಂಡಮಾರುತದ ವಿವರಗಳನ್ನು ಕಡಿಮೆ ಒತ್ತಡದ ಪ್ರದೇಶ ರಚನೆಯ ನಂತರ ತಿಳಿಸಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂದಿನ 5 ದಿನಗಳ ಕಾಲ ದೇಶದಲ್ಲಿ ಶಾಖದ ಅಲೆಗಳು ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಮೇ 8-12 ರಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ, ಮೇ 10 ಮತ್ತು 11 ರಂದು ವ್ಯಾಪಕ ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಮೇ 7ರಿಂದ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಅಕ್ಕಪಕ್ಕದ ಪ್ರದೇಶಗಳಲ್ಲಿ60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 9ರಿಂದ ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಲಿದ್ದು, ಗಂಟೆಗೆ 70 ಕಿಮೀ ವೇಗದಲ್ಲಿ ಬೀಸುತ್ತದೆ, ಮೇ 10 ರಂದು ಇದು ಗಂಟೆಗೆ 80 ಕಿಲೋ ಮೀಟರ್ ಗೆ ಹೆಚ್ಚಾಗುತ್ತದೆ ಎಂದು ಹೇಳಿದೆ. ವೇಗವಾಗಿ ಗಾಳಿ ಬೀಸುವ ಕಾರಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರದೇಶದಲ್ಲಿ ಮೀನುಗಾರರು, ಸಣ್ಣ ಹಡಗುಗಳು, ದೋಣಿಗಳಲ್ಲಿ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಸಮುದ್ರದಲ್ಲಿ ಇರುವ ಮೀನುಗಾರರಿಗೆ ಮೇ 7ಕ್ಕಿಂತ ಮೊದಲು ಸುರಕ್ಷಿತ ಸ್ಥಳಗಳಿಗೆ ಮರಳುವಂತೆ ಸೂಚನೆ ನೀಡಿದೆ.
ಏತನ್ಮಧ್ಯೆ, ಒಡಿಶಾ ಸರ್ಕಾರವು 18 ಕರಾವಳಿ ಮತ್ತು ಪಕ್ಕದ ಜಿಲ್ಲೆಗಳ ಕಲೆಕ್ಟರ್‌ಗಳಿಗೆ ಸೈಕ್ಲೋನಿಕ್ ಚಂಡಮಾರುತದ ಮುನ್ಸೂಚನೆಯ ದೃಷ್ಟಿಯಿಂದ ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರುವಂತೆ ಸೂಚನೆ ನೀಡಿದೆ. ಬಾಲಸೋರ್, ಭದ್ರಕ್, ಜಾಜ್‌ಪುರ್, ಕೇಂದ್ರಪದ, ಕಟಕ್ ಮತ್ತು ಪುರಿ ಸೇರಿದಂತೆ ಒಡಿಶಾದ ಹಲವಾರು ಜಿಲ್ಲೆಗಳಿಗೆ ಗುಡುಗು ಸಹಿತ ಮಳೆಯ ಯೆಲ್ಲೋ ಅಲರ್ಟ್ ನೀಡಲಾಗಿದೆ.












Click it and Unblock the Notifications