Cyclone Biparjoy Landfall: ಗುಜರಾತ್ ಕರಾವಳಿಗೆ ಅಪ್ಪಳಿಸಿದ ‘ಬಿಪರ್‌ಜಾಯ್’ ಚಂಡಮಾರುತ
ಅಹಮದಾಬಾದ್: ಭಯದಲ್ಲೇ ಉಸಿರಾಡುತ್ತಿದ್ದ ಗುಜರಾತ್ ಕರಾವಳಿಗೆ ಡೆಡ್ಲಿ ಸೈಕ್ಲೋನ್ ಬಂದು ಬಡಿದಿದೆ. ಸೌರಾಷ್ಟ್ರ ಹಾಗೂ ಕಚ್ಛ್ ಭಾಗಕ್ಕೆ ಸುಮಾರು 100 ಕಿಲೋ ಮೀಟರ್ ವೇಗದಲ್ಲಿ ಬಂದು ಅಪ್ಪಳಿಸಿದೆ. ಭೀಕರ ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ತತ್ತರಿಸಿದ್ದು, ಇನ್ನೂ ಕೆಲ ಗಂಟೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು.
ಚಂಡಮಾರುತ ಎಬ್ಬಿಸುವ ಬಿರುಗಾಳಿ ಎಷ್ಟು ಪ್ರಬಲವಾಗಿ ಇರುತ್ತೆ ಅಂದ್ರೆ, ಅಕ್ಕಪಕ್ಕದಲ್ಲಿ ಸುಳಿಯುವ ಪ್ರತಿಯೊಂದು ವಸ್ತು ಪುಡಿಪುಡಿ ಆಗೋದು ಗ್ಯಾರಂಟಿ. ಈಗಲೂ ಅಷ್ಟೇ ಈ 'ಬಿಪರ್‌ಜಾಯ್' ಅನ್ನೋ ರಾಕ್ಷಸ ಸುಳಿಗಾಳಿ ಎಬ್ಬಿಸಿರುವ ಹಾವಳಿಗೆ ಎಲ್ಲಾ ವಿನಾಶವಾಗಿ ಹೋಗಿದೆ. ಈಗ ತಾನೆ ಗುಜರಾತ್ ಭೂಮಿಗೆ ಅಪ್ಪಳಿಸಿರುವ 'ಬಿಪರ್‌ಜಾಯ್' ಸೈಕ್ಲೋನ್, ಇನ್ನೂ ರಾತ್ರಿ ತನಕ ತನ್ನ ಪ್ರತಿಕ್ರಿಯೆ ಮುಂದುವರಿಸುತ್ತದೆ. ಹೀಗಾಗಿ ಇದೇ ಸಂದರ್ಭದಲ್ಲಿ ಭಾರಿ ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎನ್‌ಡಿಆರ್‌ಎಫ್‌ನ 18 & ಎಸ್‌ಡಿಆರ್‌ಎಫ್‌ನ 13 ತಂಡ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, 1 ಲಕ್ಷ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ.

ಇಲ್ಲಿ ಇಲ್ಲ, ಅಲ್ಲಿ ಭಾರಿ ಮಳೆ!
ಹೌದು, ಕರ್ನಾಟಕದಲ್ಲಿ ಮಳೆಯ ಅಭಾವದಿಂದ ರೈತರು ಚಿಂತೆಗೆ ಒಳಗಾಗಿದ್ದಾರೆ. ಆದರೆ ಗುಜರಾತ್‌ನಲ್ಲಿ ಭೀಕರ ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುತ್ತಿದೆ. ಮಾಂಡವಿ & ಕರಾಚಿ ಮಧ್ಯೆ ಚಲಿಸುತ್ತಿರುವ 'ಬಿಪರ್‌ಜಾಯ್' ಚಂಡಮಾರುತ, ಮಳೆಯ ಮೋಡಗಳ ರಾಶಿಯನ್ನೇ ಹೊತ್ತು ತಂದಿದೆ. ಸುಮಾರು 125ರಿಂದ 140 ಕಿಲೋ ಮೀಟರ್ ವೇಗದಲ್ಲಿ ಗಾಳಿ ಚಲಿಸುತ್ತಿದೆ. ಹಾಗೇ ಗುಜರಾತ್‌ನ ಕಚ್ಛ್ ಭಾಗದಲ್ಲಿ ಮಾತ್ರ ಸುಮಾರು 60ರಿಂದ 70 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ಮಳೆ ಧೋ ಅಂತಾ ಸುರಿಯುತ್ತಿದ್ದು, ಹಲವು ಮನೆಗಳು ಮಳೆ & ಗಾಳಿ ಅಬ್ಬರಕ್ಕೆ ಕುಸಿದು ಬಿದ್ದಿವೆ.
ಸನ್ನದ್ಧವಾಗಿ ನಿಂತ ರಕ್ಷಣಾ ಪಡೆ!
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಸಂಜೆ ಹೊತ್ತಿಗೆಲ್ಲಾ 'ಬಿಪರ್‌ಜಾಯ್' ಚಂಡಮಾರುತ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಎನ್‌ಡಿಆರ್‌ಎಫ್‌ನ 18, ಎಸ್‌ಡಿಆರ್‌ಎಫ್‌ನ 13 ತಂಡಗಳನ್ನ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 1,00,000 ಜನರನ್ನ ಈವರೆಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಜರಾತ್ ಮಾತ್ರವಲ್ಲ ಅಕ್ಕಪಕ್ಕ ಇರುವ ರಾಜ್ಯಗಳಲ್ಲೂ ಭಾರಿ ಮಳೆ ಬೀಳುತ್ತಿದೆ. ಪ್ರವಾಸಿಗರ ಹಾಟ್ ಫೇವರಿಟ್ ಗೋವಾ & ಮಹಾರಾಷ್ಟ್ರದಲ್ಲೂ ಚಂಡಮಾರುತದ ಪ್ರಭಾವ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲ ಸಮುದ್ರದ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ರಾತ್ರಿ ಬಿಟ್ಟೂ ಬಿಡದೆ ಸುರಿಯುತ್ತೆ ಮಳೆ!
ಗುಜರಾತ್‌ನ ಸದ್ಯದ ಸ್ಥಿತಿ ಹೇಗಾಗಿದೆ ಎಂದರೆ, ಮಳೆ ಬೇಡ ಎಂದರೂ ಸುರಿಯುತ್ತಿದೆ. ಈ ರಾಜ್ಯದ ಬಹುತೇಕ ಕಡೆ ಮರುಭೂಮಿ ಅಥವಾ ಬರಡು ಭೂಮಿ ಇದೆ. ಆದ್ರೆ ಈಗಿನ ಸ್ಥಿತಿ ನೋಡಿದರೆ, ಗುಜರಾತ್ ಥೇಟ್ ಅಮೆಜಾನ್ ಪ್ರದೇಶವಾಗಿ ಬದಲಾಗಿದೆ ಎನ್ನಬಹುದು. ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಈಗ ತಾನೆ ಚಂಡಮಾರುತ ಬೇರೆ ಅಪ್ಪಳಿಸಿದೆ, ಹೀಗಾಗಿ ರಾತ್ರಿ ಪೂರ್ತಿ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ ಅಂತಿದ್ದಾರೆ ದೇಶದ ಹವಾಮಾನ ತಜ್ಞರು. ಭಾರತೀಯ ಹವಾಮಾನ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಅಗತ್ಯವಿದ್ದರೆ ಸೇನೆ ಕೂಡ ಎಂಟ್ರಿ
ತವರು ರಾಜ್ಯಕ್ಕೆ ಭೀಕರ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಪಿಎಂ ಮೋದಿ & ಅಮಿತ್ ಶಾ ಕೂಡ ಸೂಕ್ಷ್ಮವಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಕೇಂದ್ರದ ಪಿಎಂ ಮೋದಿ ಸರ್ಕಾರ ಈಗಾಗಲೇ ಗುಜರಾತ್ ಜನರಿಗೆ ಸಂಪೂರ್ಣವಾದ ನೆರವು ನೀಡಲು ಸಜ್ಜಾಗಿದೆ. ಸಾವಿರಾರು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇಮಕವಾಗಿದ್ದಾರೆ. ಅಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಸೇನಾ ಪಡೆ ಕರೆಸಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಬಗ್ಗೆ ನಿನ್ನೆಯೇ ಮಾಹಿತಿ ನೀಡಿದ್ದರು.












Click it and Unblock the Notifications