ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ವೆಂಕಯ್ಯ ನಾಯ್ಡು? ಶಾ, ರಾಜನಾಥ್‌ರಿಂದ ಉಪರಾಷ್ಟ್ರಪತಿ ಭೇಟಿ
ನವದೆಹಲಿ, ಜೂನ್ 21: ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಈಗ ಎಲ್ಲರ ಕಣ್ಣು ಎನ್‌ಡಿಎ ಪಾಳಯದತ್ತ ನೆಟ್ಟಿದೆ. ಬಿಜೆಪಿಯ ದಲಿತ ಮುಖಂಡರಾಗಿದ್ದ ರಾಮನಾಥ್ ಕೋವಿಂದ್‌ರನ್ನು ರಾಷ್ಟ್ರಪತಿ ಪಟ್ಟಕ್ಕೆ ಏರಿಸಿದ್ದ ಬಿಜೆಪಿ ಹಾಗು ಅದರ ಮಿತ್ರ ಪಕ್ಷಗಳ ಬಳಿ ಹೊಸ ರಾಷ್ಟ್ರಪತಿಗಳನ್ನು ಗೆಲ್ಲಿಸುವಷ್ಟು ಸಂಖ್ಯಾಬಲ ಇದೆ. ಆದರೆ, ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೂ ಸಮ್ಮತವಾಗಿರುವ ಅಭ್ಯರ್ಥಿಯ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನೇ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದಕ್ಕೆ ಪೂರಕವೆಂಬಂತೆ ಬಿಜೆಪಿಯೊಳಗೆ ಪ್ರಬಲ ನಾಯಕರೆನಿಸಿದ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಇಂದು ಮಂಗಳವಾರ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡುರನ್ನು ಭೇಟಿಯಾದರು. ಈ ಬೆಳವಣಿಗೆ ಸಾಕಷ್ಟು ಕುತೂಹಲಕ್ಕಂತೂ ಕಾರಣವಾಗಿದೆ.
ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಪರವಾಗಿ ಇತರ ಪಕ್ಷಗಳ ಜೊತೆ ಸಂವಾದ ನಡೆಸಲು ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಅವರಿಗೆ ಅಧಿಕಾರ ನೀಡಲಾಗಿದೆ. ಇವರು ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಜೊತೆ ಮಾತ್ರವಲ್ಲದೆ ವಿಪಕ್ಷಗಳೊಂದಿಗೂ ಚರ್ಚೆ ನಡೆಸಲಿದ್ದಾರೆ. ಇವರಿಬ್ಬರ ಜೊತೆ ಅಮಿತ್ ಶಾ ಕೂಡ ಸೇರಿ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಇಂದು ಮಂಗಳವಾರ ಸಂಜೆಯ ನಂತರ, ಅಂದರೆ ಇನ್ನು ಕೆಲವೇ ಘಳಿಗೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಇದರಲ್ಲಿ ಎನ್‌ಡಿಎ ವತಿಯಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದು ನಿರ್ಧಾರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಸಭೆಗೂ ಮುನ್ನ ಉಪರಾಷ್ಟ್ರಪತಿಯನ್ನು ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಭೇಟಿ ಮಾಡಿರುವುದು ಗಮನ ಸೆಳೆಯುವ ಬೆಳವಣಿಗೆ ಎನಿಸಿದೆ.
ಜುಲೈನಲ್ಲಿ ಚುನಾವಣೆ:
ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜೂನ್ 29, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದ್ದು ನೂತನ ರಾಷ್ಟ್ರಪತಿ ಆಯ್ಕೆ ಪ್ರಕಟಿಸಲಾಗುತ್ತದೆ.

ಬಿಜೆಪಿಯಲ್ಲಿ ಸಂಖ್ಯಾಬಲ:
ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ಹೆಚ್ಚೂಕಡಿಮೆ ಗೆಲ್ಲುವಷ್ಟು ಸಂಖ್ಯಾ ಬಲವಿದೆ. ಶೇ. 48ಕ್ಕಿಂತ ಹೆಚ್ಚು ಮತಗಳನ್ನು ಎನ್‌ಡಿಎ ಹೊಂದಿದೆ. ಆದರೆ, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವುದು ಇಲ್ಲಿ ಮುಖ್ಯ. ಒಮ್ಮತದ ಅಭ್ಯರ್ಥಿ ಇಲ್ಲದಿದ್ದರೆ ಜೆಡಿಯುನಂಥ ಮಿತ್ರಪಕ್ಷಗಳು ಮುಲಾಜಿಲ್ಲದೇ ವಿರೋಧಿಸುತ್ತವೆ. ಹೀಗಾಗಿ, ಬಿಜೆಪಿ ಇಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅನಿವಾರ್ಯ.
(ಒನ್ಇಂಡಿಯಾ ಸುದ್ದಿ)












Click it and Unblock the Notifications