ಈ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಮಸೂದೆ ಮಂಡನೆಯಾಗಲ್ಲ: ವರದಿ
ನವದೆಹಲಿ, ಡಿಸೆಂಬರ್ 15: ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವುದಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿದೆ. ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಆಗಿದೆ.
ಈ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅಲ್ಲಿ ಕೆಲವೊಂದು ಬದಲಾವಣೆಯನ್ನು ತರಲು ಕೇಂದ್ರವು ಮುಂದಾಗಿದೆ ಎಂದು ವಿವಿಧ ಮಾಧ್ಯಮ ವರದಿಗಳು ಸೂಚಿಸಿವೆ. ಆದ್ದರಿಂದಾಗಿ ಈ ಮಸೂದೆಯನ್ನು ಸರ್ಕಾರವು ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆ ಇಲ್ಲ.
ಈ ಹಿಂದೆ ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಸಂಸತ್ತಿನ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆಯ ಬಗ್ಗೆ ವರದಿ ಆಗಿತ್ತು. ಕಳೆದ ಬಜೆಟ್ ಅಧಿವೇಶನಕ್ಕೂ ಈ ಮಸೂದೆಯನ್ನು ಪಟ್ಟಿ ಮಾಡಲಾಗಿತ್ತು. ಆದರೆ ಸರ್ಕಾರ ಈ ಮಸೂದೆಯಲ್ಲಿ ಕೆಲವು ಬದಲಾವಣೆಯನ್ನು ತರುವ ನಿರ್ಧಾರ ಮಾಡಿದ ಹಿನ್ನೆಲೆಯಿಂದಾಗಿ ಮಂಡನೆ ಮಾಡಲು ಸಾಧ್ಯವಾಗಲಿಲ್ಲ.

ಕೇಂದ್ರ ಸರ್ಕಾರವು ವರ್ಷದ ಆರಂಭದಲ್ಲಿ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಕೈಗೊಂಡಿತ್ತು. ಹಾಗೆಯೇ ಈ ಕ್ರಿಪ್ಟೋಕರೆನ್ಸಿ ನಿಷೇಧ ಹೇರುವ ಸಾಧ್ಯತೆಗಳ ಬಗ್ಗೆ ವರದಿ ಆಗಿತ್ತು. ಆದಾಗ್ಯೂ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ರಿಪ್ಟೋವನ್ನು ನಿಯಂತ್ರಿಸುವ ಮತ್ತು ಅದನ್ನು ಡಿಜಿಟಲ್ ಆಸ್ತಿಯಾಗಿ ವರ್ಗೀಕರಿಸುವ ಉದ್ದೇಶ ಹೊಂದಿರುವ ಬಗ್ಗೆ ಪ್ರಸ್ತಾಪವನ್ನು ಮಾಡಿದರು.
ಇನ್ನು ಕ್ರಿಪ್ಟೋಕರೆನ್ಸಿ ಬಗ್ಗೆ ಚರ್ಚೆ ನಡೆಯುತ್ತಿದೆ
ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ಭರ್ಜರಿಯಾಗಿ ವಹಿವಾಟು ಕಾಣುತ್ತಿರುವ ಡಿಜಿಟಲ್ ಕರೆನ್ಸಿ ಬಳಸಲು ಸರಿಯಾದ ಮಾರ್ಗಸೂಚಿಯಾಗಲಿ, ಕಾನೂನಾಗಲಿ ಇಲ್ಲ, ಈ ಹಿನ್ನೆಲೆ ಸರ್ಕಾರವು ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅನ್ನು ಜಾರಿ ಮಾಡಲು ಮುಂದಾಗಿತ್ತು. ಆದರೆ ಈ ಕ್ರಿಪ್ಟೋಕರೆನ್ಸಿ ಬಿಲ್‌ನ ವಿಷಯವು ಚರ್ಚೆಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚರ್ಚೆಯಲ್ಲಿ ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಲಿರುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಒಂದು ಭಾಗವಾಗಬೇಕೇ ಎಂಬುದನ್ನು ಒಳಗೊಂಡಿರುತ್ತದೆ. ಉನ್ನತ ಮಟ್ಟದಲ್ಲಿ ಹಲವಾರು ಸುತ್ತಿನ ಚರ್ಚೆ ನಂತರ ಮಸೂದೆಯನ್ನು ಮಂಡನೆ ಮಾಡುವ ಸಾಧ್ಯತೆ ಇದೆ.
ದೇಶದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಯಾವುದೇ ನಿಯಂತ್ರಣ ಸಂಸ್ಥೆಗಳಿಲ್ಲ. ಸದ್ಯ ಈಗಿರುವ ಕಾನೂನುಗಳ ಮೇಲೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿತ್ತು. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್‍ಫೋರ್ಟ್ ಮಾಲ್‍ನಲ್ಲಿ ಯುನೊಕಾಯಿನ್ ಕಂಪನಿಯ ಹೆಸರಿನಲ್ಲಿ ಎಟಿಎಂ ಕಿಯಾಸ್ಕೋ ಅಳವಡಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು 2018ರಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಈ ವಿಚಾರವು ಕರ್ನಾಟಕ ರಾಜ್ಯ ಮಾತ್ರವಲ್ಲದೇ ದೇಶದಲ್ಲೇ ಭಾರೀ ಸಂಚಲನವನ್ನು ಮೂಡಿಸಿದೆ. ವಿರೋಧ ಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಈ ಬಿಟ್ ಕಾಯಿನ್, ಕ್ರಿಪ್ಟೋ ವಿಚಾರದಲ್ಲಿ ಭಾರೀ ತರಾಟೆಗೆ ತೆಗೆದುಕೊಂಡಿದೆ. ಈ ಬೆನ್ನಲ್ಲೇ ಚಳಿಗಾಲ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅನ್ನು ಮಂಡನೆ ಮಾಡುವ ಸಾಧ್ಯತೆಯ ಬಗ್ಗೆ ವರದಿ ಆಗಿತ್ತು. ಈಗ ಸರ್ಕಾರವು ಮತ್ತೆ ಈ ಕಾಯ್ದೆಯ ಬಗ್ಗೆ ಹೆಚ್ಚಿನ ಚರ್ಚೆ ನಡೆಸುತ್ತಿರುವ ಹಿನ್ನೆಲೆಯಿಂದಾಗಿ ಈ ಬಾರಿ ಈ ಮಸೂದೆ ಮಂಡನೆ ಆಗಲಾರದು ಎಂದು ವರದಿ ಆಗಿದೆ.












Click it and Unblock the Notifications